ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು, ನಿರಂತರ ಐದನೇ ದಿನದಲ್ಲಿ, 352.21 ಅಂಕಗಳ ಭರ್ಜರಿ ಏರಿಕೆಯನ್ನು ಕಂಡು ದಾಖಲೆ ಎತ್ತರದ 37,336.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 111.05 ಅಂಕಗಳ ಉತ್ತಮ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,278.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಚೂಣಿ ಕಂಪೆನಿಗಳ ಜೂನ್ ತ್ತೈಮಾಸಿಕ ಫಲಿತಾಂಶ ಉತ್ತಮವಾಗಿರುವುದು, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿರುವುದು, ವಿದೇಶಿ ಬಂಡವಾಳದ ಒಳ ಹರಿವು ಮುಂದುವರಿದಿರುವುದು – ಇವೇ ಮೊದಲಾದ ಕಾರಣಗಳಿಂದಾಗಿ ಶೇರು ಮಾರುಕಟ್ಟೆಯ ದಾಖಲೆಯ ಎತ್ತರವನ್ನು ತಲುಪುವುದು ಸಾಧ್ಯವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ಟಾಪ್ ಗೇನರ್ : ಐಟಿಸಿ, ಟಾಟಾ ಮೋಟರ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್; ಟಾಪ್ ಲೂಸರ್‌ಗಳು : ಪವರ್ ಗ್ರಿಡ, ಅದಾನಿ ಪೋರ್ಟ್, ಕೋಲ್ ಇಂಡಿಯಾ, ಟಿಸಿಎಸ್, ಮಾರುತಿ ಸುಜುಕಿ.
ಇಂದು ಮುಂಬಯಿ ಶೇರು ಪೇಟೆಯಲ್ಲಿ ಒಟ್ಟು 2,945 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,729 ಶೇರುಗಳು ಮುನ್ನಡೆ ಸಾಧಿಸಿದವು; 1,036 ಶೇರುಗಳು ಹಿನ್ನಡೆಗೆ ಗುರಿಯಾದವು; 180 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.