Advertisement

ಉಕ್ರೇನ್‌ ಜಿಡಿಪಿ ಮೌಲ್ಯಕ್ಕಿಂತ ಬಿಎಸ್‌ಇ ಹೂಡಿಕೆದಾರರಿಗೆ ಹೆಚ್ಚು ನಷ್ಟ

09:27 PM Mar 04, 2022 | Team Udayavani |

ನವದೆಹಲಿ/ಮುಂಬೈ: ಒಂದು ಕೋಟಿಯೋ, ಎರಡು ಕೋಟಿಯೋ ಅಲ್ಲ! ಬರೋಬ್ಬರಿ 13 ಲಕ್ಷ ಕೋಟಿ ರೂ.!!

Advertisement

– ಇದು ಫೆ.24ರಂದು ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಸಾರಿದ ಬಳಿಕ ಬಾಂಬೆ ಷೇರು ಪೇಟೆ (ಬಿಎಸ್‌ಇ)ಯಲ್ಲಿ ಹೂಡಿಕೆದಾರಿರಿಗೆ ಉಂಟಾಗಿರುವ ಒಟ್ಟು ನಷ್ಟ. ಇದು ಉಕ್ರೇನ್‌ನ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮೊತ್ತಕ್ಕಿಂತಲೂ ಹೆಚ್ಚು.

2021ರಲ್ಲಿ ಸ್ಟಾಟಿಸ್ಯಾ (Statista) ವೆಬ್‌ಸೈಟ್‌ ನಡೆಸಿದ್ದ ಅಧ್ಯಯನದ ಪ್ರಕಾರ ದಾಳಿಗೊಳಗಾಗಿರುವ ರಾಷ್ಟ್ರದ ಜಿಡಿಪಿಯ ಮೌಲ್ಯ 13.79 ಲಕ್ಷ ಕೋಟಿ ರೂ.. ರಷ್ಯಾ ದಾಳಿ ನಡೆಸಿದ ಮೊದಲ ದಿನ (ಫೆ.24)ರಂದು ಬಿಎಸ್‌ಇನಲ್ಲಿ ಹೂಡಿಕೆದಾರರಿಗೆ 13 ಲಕ್ಷ ಕೋಟಿ ರೂ. ಉಂಟಾಗಿತ್ತು. ಈ ಒಂಭತ್ತು ದಿನಗಳಲ್ಲಿ ಸೂಚ್ಯಂಕ 3 ಸಾವಿರ ಪಾಯಿಂಟ್ಸ್‌ ಇಳಿಕೆಯಾಗಿದೆ.

ಮೂರನೇ ದಿನವೂ ನಿರಾಶೆ:
ವಾರಾಂತ್ಯವಾಗಿರುವ ಶುಕ್ರವಾರ ಮತ್ತು ಸತತ ಮೂರನೇ ದಿನವೂ ಕೂಡ ಬಿಎಸ್‌ಇನಲ್ಲಿ ನಿರಾಶೆಯೇ ಆಗಿದೆ. ಸೂಚ್ಯಂಕ ಒಂದು ಹಂತದಲ್ಲಿ 1,200 ಪಾಯಿಂಟ್ಸ್‌ ಕುಸಿತಗೊಂಡು ದಿನಾಂತ್ಯಕ್ಕೆ ಚೇತರಿಸಿಕೊಂಡು 768.87ರಲ್ಲಿ ಮುಕ್ತಾಯವಾಯಿತು. ಹೀಗಾಗಿ, 53,887.72ರಲ್ಲಿ ಕೊನೆಗೊಂಡಿದೆ. ನಿಫ್ಟಿ ಸೂಚ್ಯಂಕ ಕೂಡ 252.70 ಪಾಯಿಂಟ್ಸ್‌ ಪತನಗೊಂಡು 16,245.35ರಲ್ಲಿ ಕೊನೆಗೊಂಡಿತು. ಈ ವಾರದಲ್ಲಿ ಬಿಎಸ್‌ಇ 1,524.71 ಪಾಯಿಂಟ್ಸ್‌ ಪತನಗೊಂಡರೆ, ನಿಫ್ಟಿ 413.05 ಪಾಯಿಂಟ್ಸ್‌ ಇಳಿಕೆಯಾಗಿದೆ. ಹಾಂಕಾಂಗ್‌, ಶಾಂಘೈ,ಟೋಕಿಯೋ ಸ್ಟಾಕ್‌ಎಕ್ಸ್‌ಚೇಂಜ್‌ ಸೇರಿದಂತೆ ಜಗತ್ತಿನ ಇತರ ಷೇರುಪೇಟೆಗಳಲ್ಲಿ ಋಣಾತ್ಮಕ ವಾತಾವರಣವೇ ಇತ್ತು.

76 ಪೈಸೆ ಕುಸಿತ:
ಅಮೆರಿಕದ ಡಾಲರ್‌ ಎದುರು ರೂಪಾಯಿ ಕೂಡ 76 ಪೈಸೆ ಕುಸಿತ ಕಂಡಿದೆ. ಹೀಗಾಗಿ, ವಹಿವಾಟು ಮುಕ್ತಾಯದಲ್ಲಿ 76.17 ರೂ.ಗಳಿಗೆ ಕೊನೆಗೊಂಡಿದೆ. ಹನ್ನೊಂದು ವಾರಗಳಿಗೆ ಕೊನೆಗೊಂಡಂತೆ ಇದು ಗರಿಷ್ಠ ಕುಸಿತ.

Advertisement

ಪ್ರತಿ ಲೀ. ಪೆಟ್ರೋಲ್‌, ಡೀಸೆಲ್‌ಗೆ 12 ರೂ.ಗೆ ಏರಿಕೆ?
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿಲ್ಲ. ಆದರೆ, ಸದ್ಯದ ಆತಂಕಕಾರಿ ಸ್ಥಿತಿಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗೆ ಏರಿಕೆಯಾಗಿದೆ. ದೇಶದಲ್ಲಿ ಸರ್ಕಾರಿ ತೈಲಕಂಪನಿಗಳಿಗೆ ಉಂಟಾಗುವ ನಷ್ಟ ಭರ್ತಿ ಮಾಡುವ ನಿಟ್ಟಿನಲ್ಲಿ ಮಾ.16ರ ಒಳಗೆ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ 12.1 ರೂ. ಏರಿಕೆಯಾಗಬೇಕು. ಹೀಗಾದರೆ ಮಾತ್ರ ಅವುಗಳಿಗೆ ಲಾಭವಾಗಲಿದೆ. ಗರಿಷ್ಠವೆಂದರೆ ಪ್ರತಿ ಲೀಟರ್‌ ಪೆಟ್ರೋಲ್‌ ಡೀಸೆಲ್‌ಗೆ 15.1 ರೂ. ಪರಿಷ್ಕರಣೆಯಾಗಬೇಕು ಎಂದು ಐಸಿಐಸಿಐ ಸೆಕ್ಯುರಿಟೀಸ್‌ ತನ್ನ ಅಧ್ಯಯನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಶುಕ್ರವಾರ ಪ್ರತಿ ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲಕ್ಕೆ 111 ಅಮೆರಿಕನ್‌ ಡಾಲರ್‌ ಆಗಿದೆ. ಮಾ.3ರ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಪ್ರತಿ ಬ್ಯಾರೆಲ್‌ ಕಚ್ಚಾ ತೈಲಕ್ಕೆ 117.39 ಅಮೆರಿಕನ್‌ ಡಾಲರ್‌ ನೀಡಿ ಖರೀದಿ ಮಾಡುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next