ಮುಂಬಯಿ : ನಿರಂತರ ಏಳನೇ ದಿನವೂ ಗೆಲುವಿನ ಓಟವನ್ನು ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 137.25 ಅಂಕಗಳ ಜಿಗಿತದೊಂದಿಗೆ 36,48.33 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 58.60 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 10,967.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಚೇತರಿಕೆ, ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ, ಏಶ್ಯನ್ ಶೇರು ಪೇಟೆಗಳಲ್ಲಿನ ತೇಜಿ – ಇವೇ ಮೊದಲಾದ ಕಾರಣಕ್ಕೆ ಇಂದು ಮುಂಬಯಿ ಶೇರು ಪೇಟೆ ತನ್ನ ಗೆಲುವಿನ ಓಟವನ್ನು ನಿರಂತರ 7ನೇ ದಿನವೂ ಯಶಸ್ವಿಯಾಗಿ ಪೂರೈಸಿತು.
ಇಂದಿನ ವಹಿವಾಟಿನಲ್ಲಿ ಏಶ್ಯನ್ ಪೇಂಟ್, ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಮಾರುತಿ ಸುಜುಕಿ, ಐಟಿಸಿ ಮತ್ತು ಬಜಾಜ್ ಆಟೋ ಶೇರುಗಳು ಉತ್ತಮ ಮುನ್ನಡೆ ಕಂಡವು.
ದೇಶದ ಹಣಕಾಸು ಮಾರುಕಟ್ಟೆಯಲ್ಲಿನ ನಗದು ಲಭ್ಯತೆಯನ್ನು ಈಗಿನ 10,000 ಕೋಟಿ ರೂ.ಗಳಿಂದ ಡಿಸೆಂಬರ್‌ನಲ್ಲಿ 50,000 ಕೋಟಿ ರೂ.ಗೆ ಏರಿಸಲು ಆರ್‌ಬಿಐ ನಿನ್ನೆ ಮಂಗಳವಾರ ಕೈಗೊಂಡು ನಿರ್ಧಾರ ಕೂಡ ಶೇರು ಪೇಟೆಗೆ ಚೇತೋಹಾರಿ ಎನಿಸಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,783 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,644 ಕಂಪೆನಿಗಳು ಮುನ್ನಡೆ ಸಾಧಿಸಿದವು; 979 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 160 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.