Advertisement

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

08:52 PM May 06, 2021 | Team Udayavani |

ಬೆಳಗಾವಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ನಡೆಯುತ್ತಿದ್ದ ವ್ಯಾಪಾರ-ವಹಿವಾಟು ವೇಳೆ ಜನದಟ್ಟಣೆ ಆಗುತ್ತಿದೆ ಎಂಬ ನೆಪವೊಡ್ಡಿ ಇಡೀ ಮಾರುಕಟ್ಟೆಯನ್ನೇ ಇಕ್ಕಟ್ಟಾದ ಪ್ರದೇಶಗಳಿಗೆ ಸ್ಥಳಾಂತರ ಮಾಡಿದ್ದರಿಂದ ಇಲ್ಲಿಯೂ ಜನದಟ್ಟಣೆಗೆ ಮತ್ತಷ್ಟು ಆಸ್ಪದ ನೀಡಿದಂತಾಗಿದೆ. ಇತ್ತ ಹಗ್ಗ ಹರಿಯಲಿಲ್ಲ, ಹಾವು ಸಾಯಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

Advertisement

ಅತಿ ದೊಡ್ಡ ಆವರಣ ಎಂಬ ಹೆಗ್ಗಳಿಕೆ ಪಡೆದಿರುವ ಬೆಳಗಾವಿಯ ಎಪಿಎಂಸಿ ಆವರಣದಲ್ಲಿ ನಿತ್ಯವೂ ಸಗಟು ತರಕಾರಿ ಮಾರುಕಟ್ಟೆ ನಡೆಯುತ್ತಿದೆ. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನದಟ್ಟಣೆ ಆಗುತ್ತಿದೆ ಎಂಬ ಕಾರಣಕ್ಕೆ ಇಡೀ ಮಾರುಕಟ್ಟೆ ವ್ಯವಹಾರವನ್ನೇ ನಗರದ ಬೇರೆ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಇಲ್ಲಿಯೂ ಅತಿ ಹೆಚ್ಚು ಜನದಟ್ಟಣೆ ಆಗಿ ಸಾಮಾಜಿಕ ಅಂತರ ಕಾಪಾಡುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ.

ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಸಗಟು ತರಕಾರಿ ಮಾರುಕಟ್ಟೆಯನ್ನು ಸದ್ಯ ಎಪಿಎಂಸಿ ಆವರಣದಿಂದ ಬೆಳಗಾವಿ ನಗರದ ಸಿಪಿಎಡ್‌ ಮೈದಾನ ಮತ್ತು ಆಟೋ ನಗರದ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಎರಡೂ ಮೈದಾನಗಳು ಇಕ್ಕಟ್ಟಾದ ಪ್ರದೇಶಗಳನ್ನೇ ಹೊಂದಿವೆ. ಆದರೆ ಇಲ್ಲಿಯೂ ದಿನನಿತ್ಯ ಜನದಟ್ಟಣೆ ಆಗುತ್ತಿದೆ. ನಿತ್ಯ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಪಾರ-ವಹಿವಾಟು ನಡೆಯುತ್ತಿದ್ದು, ಇಲ್ಲಿ ಯಾರೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ವ್ಯಾಪಾರಸ್ಥರು ಹಾಗೂ ರೈತರು ಸಾಮಾಜಿಕ ಅಂತರ ಮರೆತು ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಎಪಿಎಂಸಿ ಆವರಣ ಸುಮಾರು 87 ಎಕರೆಯಷ್ಟು ವಿಶಾಲ ಪ್ರದೇಶ ಹೊಂದಿದೆ. ಸಗಟು ತರಕರಿ ಮಾರುಕಟ್ಟೆ ಆವರಣವಷ್ಟೇ 13 ಎಕರೆಯಷ್ಟು ಇದೆ. 100 ಅಡಿ ಅಗಲವಾದ ರಸ್ತೆಗಳು ಇಲ್ಲಿವೆ. ಇಂಥದರಲ್ಲಿ ಇದೆಲ್ಲವನ್ನು ಬಿಟ್ಟು ಕೇವಲ ಮೂರು ಎಕರೆಯ ಮೈದಾನಗಳಿಗೆ ಮಾರುಕಟ್ಟೆ ಸ್ಥಳಾಂತರಿಸಿದ್ದು ಏಕೆ. ಎಪಿಎಂಸಿ ಆವರಣಕ್ಕಿಂತಲೂ ಹೆಚ್ಚಿನ ಜನಜಂಗುಳಿ ಈ ಮೈದಾನಗಳಲ್ಲಿ ಆಗುತ್ತಿದೆ. ಇಲ್ಲಿ ಕೊರೊನಾ ಹರಡುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸದ್ಯ ಸ್ಥಳಾಂತರಗೊಂಡಿರುವ ಮೈದಾನಗಳಲ್ಲಿ ಎಪಿಎಂಸಿ ಆಡಳಿತ ವತಿಯಿಂದ ತಾತ್ಕಾಲಿಕ ಶೆಡ್‌ ಗಳನ್ನು ನಿರ್ಮಿಸಲಾಗಿದೆ. ಕಳೆದ ವರ್ಷ ಇದೇ ತರಹ ಮಾಲಿನಿ ಮೈದಾನದಲ್ಲಿ ಶೆಡ್‌ ನಿರ್ಮಿಸಲಾಗಿತ್ತು. ಆದರೆ ಧಾರಾಕಾರ ಗಾಳಿ-ಮಳೆಯಿಂದ ಎಲ್ಲ ಶೆಡ್‌ ಪತ್ರೆಗಳು ಹಾರಿ ಹೋಗಿ ಅಪಾರ ಪ್ರಮಾಣದಲ್ಲಿ ಹಾನಿ ಆಗಿತ್ತು. ಈ ಸಲವೂ ಆಗಾಗ ಮಳೆ ಆಗುತ್ತಿದ್ದು, ಈ ಶೆಡ್‌ಗಳು ಹಾರಿ ಹೋಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ ಎನ್ನುತ್ತಾರೆ ವ್ಯಾಪಾರಸ್ಥರು. ಎಪಿಎಂಸಿ ಆವರಣದಲ್ಲಿಯ ಮೇಲಿನ ಗೇಟ್‌ದಿಂದ ಕೆಳಗಿನ ಗೇಟ್‌ವರೆಗೆ ಒಂದು ಕಿ.ಮೀ. ಅಂತರವಿದೆ.

Advertisement

ಎರಡೂ ಕಡೆಯಿಂದಲೂ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಮಾಡಿ ಕೊಟ್ಟರೆ ಜನದಟ್ಟಣೆ ಸಂಪೂರ್ಣವಾಗಿ ಕಡಿಮೆ ಆಗುತ್ತದೆ. ಆದರೆ ಇದೆಲ್ಲವನ್ನೂ ಬಿಟ್ಟು ಬೇರೆ ಕಡೆಗೆ ಸ್ಥಳಾಂತರ ಮಾಡಿ ಜನದಟ್ಟಣೆಗೆ ಎಪಿಎಂಸಿಯೇ ನೇರ ಹೊಣೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.

 

ವರದಿ:ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next