Advertisement

ಕೇಂದ್ರದ ಜೆಮ್‌ ಮೂಲಕ ಮಹಿಳಾ ಉತ್ಪಾದಕರಿಗೆ ಮಾರುಕಟ್ಟೆ

11:50 PM Jan 05, 2022 | Team Udayavani |

ಬೆಂಗಳೂರು: ಮಹಿಳೆಯರು ಮನೆಯಲ್ಲಿ ಕುಳಿತು ತಯಾರಿಸಿರುವ ಉತ್ಪನ್ನಗಳನ್ನು ನೇರವಾಗಿಯೇ ಜೆಮ್‌ ಪೋರ್ಟಲ್‌ ಮೂಲಕ ಕೇಂದ್ರ ಸರಕಾರವೇ ಖರೀದಿಸಿ ಮಹಿಳೆಯರಿಗೆ ಮಾರುಕಟ್ಟೆ ಒದಗಿಸುತ್ತಿದ್ದು, ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಸಾವಿರ ಮಹಿಳಾ ಉತ್ಪಾದಕರನ್ನು ಜೆಮ್‌ ( ಗೌರ್ನಮೆಂಟ್‌ ಇ ಮಾರ್ಕೆಟಿಂಗ್‌) ಗೆ ಸೇರಿಸಲು ತೀರ್ಮಾನಿಸಿದೆ.

Advertisement

ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮೂಲಕ ಈ ಯೋಜನೆ ಜಾರಿಗೆ ತರಲಾಗಿದ್ದು, ಮಹಿಳೆಯರು ಮನೆಯಲ್ಲಿಯೇ ಕುಳಿತು ತಯಾರಿಸುವ ಕರ ಕುಶಲ ವಸ್ತುಗಳು, ಗಾರ್ಮೆಂಟ್ಸ್‌, ಆಹಾರ ಪದಾರ್ಥಗಳು, ಸ್ಟೇಶನರಿ ವಸ್ತುಗಳು ಸಹಿತ ಮಹಿಳಾ ಸ್ವ ಸಹಾಯ ಗುಂಪುಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಮಹಿಳೆಯರು ವೈಯಕ್ತಿಕವಾಗಿಯೂ ತಯಾರಿಸುವ ಉತ್ಪನ್ನಗಳನ್ನು ನೇರವಾಗಿ ಜೆಮ್‌ ಮೂಲಕ ಖರೀದಿಸಲಿದೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಯೋಜನೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಮೂಲಕ ಜನರಿಗೆ ಮಹಿಳೆಯರಿಗೆ ತಲುಪಿಸಿ, ಅವರನ್ನು ಈ ಯೋಜನೆ ವ್ಯಾಪ್ತಿಗೆ ತರಲು ಕೇಂದ್ರ ಮುಂದಾಗಿದೆ. ಈ ಯೋಜನೆ ಮೂಲಕ ಮಹಿಳೆಯರ ಸ್ವಯಂ ಉದ್ಯೋಗ ಪ್ರೋತ್ಸಾಹಿಸಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಡಲು ಪ್ರಯತ್ನ ನಡೆಸಿದೆ.

ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಜಿಲ್ಲೆಯಿಂದ ಇಬ್ಬರು ಮಹಿಳಾ ಮೋರ್ಚಾ ಕಾರ್ಯಕರ್ತರನ್ನು ಕರೆದು ಈ ಯೋಜನೆಯನ್ನು ಮಹಿಳಾ ಉತ್ಪಾದಕರಿಗೆ ತಲುಪಿಸುವ ಕುರಿತು ತರಬೇತಿ ನೀಡಲಾಗಿದೆ.

ಇದನ್ನೂ ಓದಿ:ಗ್ರಾಮೀಣಾಭಿವೃದ್ಧಿಯ ಸಂಕಲ್ಪ  ಸಾಕಾರವೇ ಗುರಿ

Advertisement

ಎರಡು ತಿಂಗಳ ಗುರಿ
ಈಗಾಗಲೇ ತರಬೇತಿ ಪಡೆದಿರುವ ಜಿಲ್ಲಾ ಮಟ್ಟದ ಕಾರ್ಯಕರ್ತರು ತಮ್ಮ ಜಿಲ್ಲೆಯಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ತರಬೇತಿ ನೀಡಿ, ಅವರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಉತ್ಪನ್ನ ತಯಾರಿಸುವ ಮಹಿಳೆಯರನ್ನು ಹುಡುಕಿ ಜೆಮ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ.

ಕೇಂದ್ರದಿಂದ ನೇರ ಖರೀದಿ
ಮಹಿಳೆಯರು ಉತ್ಪನ್ನಗಳನ್ನು ಜೆಮ್‌ ಪೋರ್ಟಲ್‌ ಮೂಲಕ ಅಪ್‌ಲೋಡ್‌ ಮಾಡಿದ ಮೇಲೆ ಕೇಂದ್ರ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮೂಲಕ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ನಡೆಸಿ, ಒಪ್ಪಿಗೆಯಾದರೆ ಕೇಂದ್ರ ಸರಕಾರವೇ ನೇರವಾಗಿ ಖರೀದಿಸುತ್ತದೆ. ಒಂದೇ ಬಗೆಯ ಉತ್ಪನ್ನಗಳನ್ನು ಹಲವರು ಮಾಡಿದ್ದರೆ, ಯಾರು ಕಡಿಮೆ ಬೆಲೆಗೆ ಕೋಟ್‌ ಮಾಡಿರುತ್ತಾರೊ ಅಂಥವರ ಉತ್ಪನ್ನವನ್ನು ಕೇಂದ್ರ ಖರೀದಿ ಮಾಡುತ್ತದೆ. ಪೋರ್ಟಲ್‌ ಮೂಲಕ ನಿರಂತರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಹಿಳೆಯರು ಹಾಗೂ ಸ್ವಸಹಾಯ ಗುಂಪು ಮತ್ತು ಎನ್‌ಜಿಒಗಳಿಗೆ ಕೇಂದ್ರ ಸರ್ಕಾರವೇ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನೂ ನೀಡುತ್ತದೆ.

ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ, ಮಾರುಕಟ್ಟೆ ಒದಗಿಸಿ, ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸುವುದರ ಜೊತೆಗೆ ಮುಂದಿನ ಚುನಾವಣೆಗೆ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಮತದಾರರನ್ನು ಭದ್ರಪಡಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ.

ಏನು ಮಾಡಬೇಕು ?
ಮಹಿಳೆಯರು ತಾವು ಮನೆಯಲ್ಲಿ ತಯಾರಿಸುವ ಆಹಾರ ಉತ್ಪನ್ನಗಳು, ಗಾರ್ಮೆಂಟ್ಸ್‌, ಕರ ಕುಶಲ ವಸ್ತುಗಳನ್ನು ಕೇಂದ್ರ ಸರಕಾರದ ಜೆಮ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರು, ವಿಳಾಸದೊಂದಿಗೆ ಉತ್ಪನ್ನದ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು.

ಕೇಂದ್ರ ಸರ್ಕಾರದ ಜೆಮ್‌ ಪೋರ್ಟಲ್‌ ಮೂಲಕ ಮಹಿಳಾ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸಲಾಗುತ್ತಿದೆ. ರಾಜ್ಯದಲ್ಲಿಯೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 1 ಸಾವಿರ ಉತ್ಪಾದಕರನ್ನು ಈ ಯೋಜನೆ ವ್ಯಾಪ್ತಿಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ.
– ಗೀತಾ ವಿವೇಕಾನಂದ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next