ಮುಂಬಯಿ : “ಸದ್ಯದಲ್ಲೇ ತಾನು ಬಡ್ಡಿ ದರ ಏರಿಸಲಿದ್ದೇನೆ ಮತ್ತು ಈ ಹಿಂದೆ ಜಾಗತಿಕ ಆರ್ಥಿಕ ಹಿನ್ನಡೆಯ ದಿನಗಳಲ್ಲಿ ಕೊಟ್ಟಂತಹ ಆರ್ಥಿಕ ಉತ್ತೇಜನ ಉಪಕ್ರಮಗಳನ್ನು ಪೂರ್ತಿಯಾಗಿ ನಿಲ್ಲಿಸುತ್ತೇನೆ’ ಎಂದು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ನಿನ್ನೆಯ ತನ್ನ ಮಹತ್ವದ ಸಭೆಯಲ್ಲಿ ನಿರ್ಧರಿಸಿರುದನ್ನು ಅನುಸರಿಸಿ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ನಿರಾಶೆ ಮಡುಗಟ್ಟಿರುವಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ವಹಿವಾಟನ್ನು 30.47 ಅಂಕಗಳ ನಷ್ಟದೊಂದಿಗೆ 32,370.04 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ನಿರಂತರ ಮೂರನೇ ದಿನದ ವಹಿವಾಟನ್ನು ಕುಸಿತದೊಂದಿಗೆ ಕೊನೆಗೊಳಿಸಿರುವುದು ಮತ್ತು ಡಾಲರ್‌ಎದುರಿನ ರೂಪಾಯಿ ವಿನಿಮಯ ದರ ಎರಡು ತಿಂಗಳ ಕನಿಷ್ಠಕ್ಕೆ ಕುಸಿದಿರುವುದು ಇಂದಿನ ಮುಖ್ಯಾಂಶವಾಗಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.25 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,121.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಮಾರುಕಟ್ಟೆ ವಹಿವಾಟಿನ ಹರಹು ದುರ್ಬಲವಾಗಿತ್ತು. ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,564 ಶೇರುಗಳು ಹಿನ್ನಡೆಗೆ ಗುರಿಯಾದವು; 1,000 ಶೇರುಗಳು ಮುನ್ನಡೆ ಸಾಧಿಸಿದವು; 151 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಮುಂಬಯಿ ಶೇರು ಪೇಟೆಯಲ್ಲಿಂದು 4,208.81 ಕೋಟಿ ರೂ.ಗಳ ವಹಿವಾಟು ನಡೆಯಿತು. ನಿನ್ನೆ ಬುಧವಾರ ನಡೆದಿದ್ದ ವಹಿವಾಟಿನ ಪ್ರಮಾಣ 5,069.38 ಕೋಟಿ ರೂ.
ಇಂದಿನ ಟಾಪ್ ಗೇನರ್‌ಗಳು : ಡಾ. ರೆಡ್ಡಿ, ಸಿಪ್ಲಾ, ಲೂಪಿನ್, ಸನ್ ಫಾರ್ಮಾ, ಟೆಕ್ ಮಹೀಂದ್ರ.
ಟಾಪ್ ಲೂಸರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಗೇಲ್, ಟಾಟಾ ಮೋಟರ್, ಎಚ್‌ಸಿಎಲ್ ಟೆಕ್, ಎಸಿಸಿ.