ಹುಬ್ಬಳ್ಳಿ: ವಿಘ್ನನಿವಾರಕನ ಪ್ರತಿಷ್ಠಾಪನೆಗೆ ಕೋವಿಡ್ ವೈರಸ್ ಕರಿನೆರಳಿನಲ್ಲಿ ವಾಣಿಜ್ಯ ನಗರಿ ಸಜ್ಜುಗೊಂಡಿದೆ. ಒಂದೆಡೆ ಮಳೆ, ಮತ್ತೂಂದೆಡೆ ಕೊರೊನಾ ವೈರಸ್ ಇವೆರಡರ ಮಧ್ಯೆ ಗಣೇಶೋತ್ಸವ ಮಂಡಳದವರು ನಗರದೆಲ್ಲೆಡೆ ಮಂಟಪನಿರ್ಮಿಸಿ ಸಂಕ್ಷಿಪ್ತವಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತು.
ತಡವಾದ ಆದೇಶ: ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಆಚರಣೆಗೆ ನಿರ್ಬಂಧ ಹೇರಿದ್ದ ಸರಕಾರ ಹಲವು ಒತ್ತಡಗಳನಂತರ ಷರತ್ತುಬದ್ಧವಾಗಿ ಅನುಮತಿ ನೀಡಿದೆ. ಆದರೆ ಮೂರ್‍ನಾಲ್ಕು ದಿನಗಳು ಇರುವಾಗ ಅವಕಾಶ ನೀಡಿದ್ದ ರಿಂದ ಮಂಡಳದವರು ಕೂಡಾ ಗೊಂದಲದಲ್ಲಿರುವುದು ಕಂಡು ಬಂದಿತು. ಸರಕಾರದ ಆದೇಶದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಆಚರಣೆ ಮಾಡದೇ ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆ ಮಾಡಲು ಮಂಡಳದವರು ಸಿದ್ಧತೆ ಮಾಡಿ ಕೊಳ್ಳುತ್ತಿದ್ದರು, ಅಷ್ಟರಲ್ಲಿಯೇ ಸರಕಾರ ಮತ್ತೂಂದು ಆದೇಶ ಹೊರಡಿಸಿ ಸಾರ್ವಜನಿಕ ಆಚರಣೆಗೆ ಕಟ್ಟುನಿಟ್ಟಿನ ನಿಯಮದ ಮೇಲೆ ಅವಕಾಶ ನೀಡಿದ್ದು, ಮತ್ತೆ ಮಂಡಳದವರು ಚಿಂತಿಸುವಂತೆ ಮಾಡಿತು. ಕೊನೆಗೂ ಮಂಡಳದವರು ಈ ಹಿಂದೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದ ಸ್ಥಳದಲ್ಲಿಯೇ ಸಣ್ಣದಾದ ಮಂಟಪ ನಿರ್ಮಿಸಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ.
ಪ್ರತಿವರ್ಷ ಗಣೇಶ ಚತುರ್ಥಿಯಒಂದೆರಡು ದಿನ ಹಾಗೂ ಕೆಲವೊಂದು ಗಣೇಶ ಮೂರ್ತಿಗಳನ್ನು 15 ದಿನಕ್ಕೂ ಮೊದಲೇ ಬುಕ್ಕಿಂಗ್ ಮಾಡಲಾಗುತ್ತಿತ್ತು.ಆದರೆ ಕಳೆದ ವರ್ಷದಿಂದ ಗಣೇಶ ಮೂರ್ತಿಗಳ ಮುಂಗಡ ಕಾಯ್ದಿರಿಸುವಿಕೆ ಪ್ರಮಾಣ ಕಡಿಮೆಯಾಗಿದೆ. ಬಮ್ಮಾಪುರ ಓಣಿ, ಚಿತ್ರಗಾರ ಓಣಿ, ಹೊಸೂರ, ನೇಕಾರ ನಗರ ಅಷ್ಟೇ ಅಲ್ಲದೇ ತಡಸ, ದುಂಡಸಿ, ಬೆಂಡಿಗೇರಿ ಸುತ್ತಮುತ್ತಲಿನ ಗ್ರಾಮದ ಕಲಾಕಾರರು ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿಕೊಂಡು ಮಾರಾಟಕ್ಕಾಗಿ ನಗರಕ್ಕೆ ಆಗಮಿಸಿದ್ದಾರೆ. ಆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೂರ್ತಿಗಳ ಖರೀದಿಗೆ ಆಗಮಿಸುತ್ತಿಲ್ಲ ಎಂದು ಕಲಾವಿದರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೇ ಬೆಲೆ ಏರಿಕೆ ಸಹ ಜನರನ್ನು ಕಂಗೆಡಿಸುವಂತೆ ಮಾಡಿದೆ.
ಹಬ್ಬದ ಮುನ್ನಾ ದಿನ ಶುಕ್ರವಾರ ಖರೀದಿಗೆ ಜನರು ಮಾರುಕಟ್ಟೆಗೆ ಮುಗಿಬಿದ್ದಿದ್ದರು. ಐದು ತರಹದಹಣ್ಣುಗಳ ಸಣ್ಣಬುಟ್ಟಿಗೆ 100-150 ರೂ. ಬಾಳೆಹಣ್ಣು ಒಂದು ಡಜನ್‌ಗೆ 30-50 ರೂ., ಹೂವು ಒಂದು ಮಾರು 20ರಿಂದ 50 ರೂ., ಬಾಳೆಕಂಬ ಒಂದಕ್ಕೆ 30-50 ರೂ.ಗೆ ಮಾರಾಟ ಮಾಡಲಾಗುತ್ತಿದೆ.
-ಬಸವರಾಜ ಹೂಗಾರ