Advertisement

ಮಾರ್ಕೆಟ್‌ ಕಟ್ಟಡ ಅಡಮಾನ ಮುಕ್ತ?

12:34 AM Mar 02, 2020 | Lakshmi GovindaRaj |

ಬೆಂಗಳೂರು: ರಾಜಧಾನಿಯ ಐತಿಹಾಸಿಕ ಕಟ್ಟಡಗಳನ್ನು ಅಡಮಾನವಿರಿಸಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಪಾಲಿಕೆ ಆಸ್ತಿ ಅಡವಿಟ್ಟ “ಕಳಂಕ’ದಿಂದ ಮುಕ್ತಗೊಳ್ಳಲು ಮುಂದಾಗಿದೆ.

Advertisement

ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದ 2015-16ನೇ ಸಾಲಿನಲ್ಲಿ ಪಾಲಿಕೆಯ ಅಧೀನದಲ್ಲಿರುವ 11 ಪ್ರಮುಖ ಕಟ್ಟಡಗಳನ್ನು 1,796.41ಕೋಟಿ ರೂ.ಗೆ ಹುಡ್ಕೊà ಸಂಸ್ಥೆಗೆ ಪಾಲಿಕೆ ಅಡಮಾನವಿರಿಸಲಾಗಿತ್ತು. ಇದರಲ್ಲಿ 10 ಸ್ವತ್ತುಗಳನ್ನು ಬಿಡಿಸಿಕೊಳ್ಳುವಲ್ಲಿ ಪಾಲಿಕೆ ಯಶಸ್ವಿಯಾಗಿದ್ದು, ಸದ್ಯ ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆ.ಆರ್‌.ಮಾರುಕಟ್ಟೆ)ವನ್ನು ಅಡಮಾನ ಮುಕ್ತವಾಗಬೇಕಿದೆ.

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಮೇಯರ್‌ ಎಂ.ಗೌತಮ್‌ ಕುಮಾರ್‌, ಪಾಲಿಕೆಯ ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಂಡು ಏಪ್ರಿಲ್‌ ಅಥವಾ ಮೇ ವೇಳೆಗೆ ಬಾಕಿ ಇರುವ ಕೆ.ಆರ್‌. ಮಾರುಕಟ್ಟೆ ಅಡಮಾನ ಮುಕ್ತವಾಗಬೇಕಿದೆ ಎಂದು ಹೇಳಿದರು.

2015-16ನೇ ಸಾಲಿನಲ್ಲಿ ಪಾಲಿಕೆಯ ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್‌, ಜಾನ್ಸನ್‌ ಮಾರುಕಟ್ಟೆ, ಸ್ಲಾಟರ್‌ಹೌಸ್‌, ರಾಜಾಜಿನಗರ ಕಾಂಪ್ಲೆಕ್ಸ್‌, ಮಲ್ಲೇಶ್ವರ ಮಾರುಕಟ್ಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆ.ಆರ್‌.ಮಾರುಕಟ್ಟೆ), ದಾಸಪ್ಪ ಕಟ್ಟಡ, ಪಬ್ಲಿಕ್‌ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಪೂರ್ವ ಕಚೇರಿ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳನ್ನು ಅಡಮಾನವಿರಿಸಲಾಗಿತ್ತು.

2016-17ನೇ ಸಾಲಿನಲ್ಲಿ ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್‌ ಮತ್ತು ಜಾನ್ಸ್‌ನ್‌ ಮಾರುಕಟ್ಟೆಯನ್ನು ಅಸಲು ಮೊತ್ತ ರೂ. 362.03 ಕೋಟಿ ರೂ. ಮತ್ತು ಬಡ್ಡಿ ಮೊತ್ತ 163.61 ಕೋಟಿ ರೂ. ಮರುಪಾವತಿಸಿ ಹುಡ್ಕೊ ಸಂಸ್ಥೆಯಿಂದ ಕಟ್ಟಡಗಳನ್ನು ಪಾಲಿಕೆ ಮರಳಿ ಪಡೆದಿತ್ತು.

Advertisement

ಅದೇ ರೀತಿ 2017-18ನೇ ಸಾಲಿನಲ್ಲಿ ಮಲ್ಲೇಶ್ವರದ ಮಾರುಕಟ್ಟೆಯನ್ನು 351.03 ಕೋಟಿ ಅಸಲು ಮತ್ತು 145.50 ಕೋಟಿ ರೂ. ಬಡ್ಡಿ ಪಾವತಿ ಮಾಡುವ ಮೂಲಕ ಹಿಂಪಡೆಯಲಾಗಿತ್ತು. 2018-19ನೇ ಸಾಲಿನಲ್ಲಿ ಹುಡ್ಕೊ ಸಂಸ್ಥೆಗೆ ರೂ. 211.68 ಕೋಟಿ ರೂ. ಸಾಲ ಮತ್ತು 2.79 ಕೋಟಿ ರೂ. ಬಡ್ಡಿ ಮೊತ್ತವನ್ನು ಅವಧಿ ಪೂರ್ವದಲ್ಲೇ ಪಾವತಿಸುವ ಮೂಲಕ ಸ್ಲಾಟರ್‌ ಹೌಸ್‌ ಮತ್ತು ರಾಜಾಜಿನಗರ ಕಾಂಪ್ಲೆಕ್ಸ್‌ಗಳನ್ನು ಪಾಲಿಕೆ ಹಿಂಪಡೆದಿತ್ತು.

ಈ ಮಧ್ಯೆ 2018-19ನೇ ಸಾಲಿನಲ್ಲಿ ಅಸಲು 203.58 ಕೋಟಿ ರೂ. ಮತ್ತು ಬಡ್ಡಿ ಮೊತ್ತ ರೂ. 57.33 ಕೋಟಿ ರೂ.ಗಳನ್ನು ಪಾಲಿಕೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾಗೆ ಪಾವತಿ ಮಾಡಿತ್ತು. 2019-20ನೇ ಸಾಲಿನ ಪೂರ್ಣ ವರ್ಷದ ಕಂತಿನ ಮೊತ್ತ ರೂ. 188.78 ಕೋಟಿ ರೂ. 2019ರ ಮೇ ಅವಧಿ ಪೂರ್ವವೇ ಪಾವತಿ ಮಾಡಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಒಟ್ಟು ಸಾಲದ ಮೊತ್ತ ರೂ. 871.61 ಕೋಟಿ ರೂ.ಗಳಲ್ಲಿ ಇದುವರೆಗೆ ಒಟ್ಟು 408.02 ಕೋಟಿ ರೂ. ಪಾವತಿ ಮಾಡಲಾಗಿದ್ದು, 463.65 ಕೋಟಿ ರೂ. ಬಾಕಿ ಉಳಿದಿದೆ. ಈ ಮೊತ್ತಕ್ಕೆ ಕೆ.ಆರ್‌. ಮಾರುಕಟ್ಟೆ ಮಾತ್ರ ಅಡಮಾನವಿರಲಿದೆ. ಈ ಮಧ್ಯೆ ದಾಸಪ್ಪ ಕಟ್ಟಡ, ಪಬ್ಲಿಕ್‌ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಪೂರ್ವ ಕಚೇರಿ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳು ಅಡಮಾನ ಮುಕ್ತವಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಬಡ್ಡಿ ತಗ್ಗಿಸಲು ಬ್ಯಾಂಕ್‌ ಬದಲು: ಹುಡ್ಕೊ ಸಂಸ್ಥೆ ಪಾಲಿಕೆ ಅಡಮಾನವಿರಿಸಿದ್ದ ಆಸ್ತಿಗೆ ವಿಧಿಸುತ್ತಿದ್ದ ದಂಡ ಮೊತ್ತವನ್ನು ತಗ್ಗಿಸುವ ಉದ್ದೇಶದಿಂದ 2017-18ನೇ ಸಾಲಿನಲಿ ಅಂದಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಶಿವರಾಜು ಅವರು, ಕೆ.ಆರ್‌.ಮಾರುಕಟ್ಟೆ, ದಾಸಪ್ಪ ಕಟ್ಟಡ, ಪಬ್ಲಿಕ್‌ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಪೂರ್ವ ಕಚೇರಿ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಗಳ ಅಡಮಾನ ಮೊತ್ತ 871.67 ಕೋಟಿ ರೂ.ಗಳನ್ನು ಯಥಾವತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಶೇ.8.05 ಬಡ್ಡಿ ದರಕ್ಕೆ ಮುಂದುವರಿಸಲಾಯಿತು.

ಕ್ರೆಡಿಟ್‌ ಯಾರಿಗೆ ಸಲ್ಲಬೇಕು?: ಪಾಲಿಕೆಯ ಆಸ್ತಿಗಳನ್ನು ಅಡಮಾನ ಸಂಬಂಧ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಎಲ್ಲ ಆಸ್ತಿಗಳನ್ನು ಕಾಂಗ್ರೆಸ್‌ ಅವಧಿಯಲ್ಲಿ ಬಿಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಸದಸ್ಯರು ಪ್ರತಿಪಾದಿಸಿದರೆ, ಸಾರ್ವಜನಿಕರ ಹಣದಿಂದ ಇದನ್ನು ಬಿಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಟಾಂಗ್‌ ನೀಡಿದೆ.

ಆಸ್ತಿ ಮೌಲ್ಯ ಮಂಜೂರಾದ ಸಾಲ (ಕೋಟಿ ರೂ.)
-ಕೆ.ಆರ್‌.ಮಾರುಕಟ್ಟೆ 837 500
-ಮಲ್ಲೇಶ್ವರ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸ್‌ನ್‌ ಮಾರುಕಟ್ಟೆ 322 256
-ಪಿಯುಬಿ ಕಟ್ಟಡ, ಮೆಯೋಹಾಲ್‌ ಕೋರ್ಟ್‌, ಕೆಂಪೇಗೌಡ ಮ್ಯೂಸಿಯಂ, ಪಶ್ಚಿಮ ವಲಯ ಕಚೇರಿ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ. 973 750
-ರಾಜಾಜಿನಗರ ಮಾರುಕಟ್ಟೆ, ಸ್ಲಾಟರ್‌ ಹೌಸ್‌, ಟ್ಯಾನರಿ ರಸ್ತೆ 257 169

ಬಿಜೆಪಿ ಅಡಮಾನವಿರಿಸಿದ್ದ 11 ಆಸ್ತಿಗಳಲ್ಲಿ 10 ಆಸ್ತಿಗಳನ್ನು ನಮ್ಮ ಅವಧಿಯಲ್ಲೇ ಬಿಡಿಸಿಕೊಳ್ಳಲಾಗಿದೆ. ಸದ್ಯ ಕೆ.ಆರ್‌.ಮಾರುಕಟ್ಟೆ ಮಾತ್ರ ಬಿಡಿಸಿಕೊಳ್ಳಬೇಕಾಗಿದ್ದು, ಸಾರ್ವಜನಿಕರ ಆಸ್ತಿಯನ್ನು ಅಡಮಾನ ಮುಕ್ತ ಮಾಡಬೇಕು.
-ಎಂ.ಶಿವರಾಜು, ಆಡಳಿತ ಪಕ್ಷದ ಮಾಜಿ ನಾಯಕ

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next