ರಾಜ್ಯ ಬಜೆಟ್‌ನ ಒಟ್ಟಾರೆ ಗಾತ್ರ 2.46 ಲಕ್ಷ ಕೋಟಿ. ಇದರಲ್ಲಿ 31,028 ಕೋಟಿ ರೂ. ಕೃಷಿ ಮತ್ತು ಪೂರಕ= ಚಟುವಟಿಕೆಗಳ ವಲಯಕ್ಕೆ ನೀಡಲಾಗಿದೆ. ಅಂದರೆ ಶೇ. 12ರಷ್ಟು ಆಗುತ್ತದೆ. ಇದರಲ್ಲಿ ಕೃಷ್ಣ ಭಾಗ್ಯ ಜಲ ನಿಗಮ, ಕಿಂಡಿ ಅಣೆಕಟ್ಟೆಗಳು ಸೇರಿ ಹಲವು ನೀರಾವರಿ ಯೋಜನೆಗಳು, ಮಾರು ಕಟ್ಟೆಗಳ ನಿರ್ಮಾಣ, ಯಾಂತ್ರೀಕರಣಗಳ ಸಬ್ಸಿಡಿ, ಸಮಗ್ರ ಕೃಷಿ ಪದ್ಧತಿ ಒಳಗೊಂಡಂತೆಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇದೆಲ್ಲವೂ ಇಡೀ ಕ್ಷೇತ್ರದ ಬೆಳವಣಿಗೆಗೆ ಸ್ವಾಗತಾರ್ಹ ಕ್ರಮಗಳು. ಜತೆಗೆ ಸ್ಥಳೀಯ ಮೇಕೆ ತಳಿಗಳ ವೃದ್ಧಿ, ಗೋಸಂಕುಲ, ಗೋಶಾಲೆಯಂತಹ ಕ್ರಮಗಳು ಪಶುಸಂಗೋಪನೆಗೆ ಪೂರಕವಾಗಿವೆ.
ಮಹಿಳಾ ದಿನಾಚರಣೆಯಂದು ಮಂಡಿಸಿದ ಬಜೆಟ್‌ನಲ್ಲಿ ಎಪಿಎಂಸಿಯಲ್ಲಿ ನಿವೇಶನ, ಗೋದಾಮುಗಳಲ್ಲಿ ಶೇ. 10ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಿರುವುದು ಅರ್ಥಪೂರ್ಣವಾಗಿದೆ. ಆದರೆ, ಒಟ್ಟಾರೆ ಕೃಷಿ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಅವಲೋಕನ ಮಾಡಿದಾಗ, ಪರಿಪೂರ್ಣ ಅನಿಸುವುದಿಲ್ಲ. ಯಾಕೆಂದರೆ, ಕೋವಿಡ್ ಹಾವಳಿ ನಡುವೆಯೂ ಪ್ರಗತಿ ಸಾಧಿಸಿದ ಏಕೈಕ ಕ್ಷೇತ್ರ ಕೃಷಿ. ಪ್ರಸಕ್ತ ಸಾಲಿನಲ್ಲಿ ಈ ವಲಯದಲ್ಲಿ ಶೇ.6.4ರಷ್ಟು ವೃದ್ಧಿ ಕಂಡುಬಂದಿದೆ.
ಕೃಷಿಯತ್ತ ಹೊಸ ವರ್ಗವೂ ಮುಖಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮುಖ್ಯವಾಗಿ ಹೆಚ್ಚು ಅನುದಾನ ನೀಡಬೇಕಿತ್ತು. ಹಾಗೂ ಅಧಿಕ ರೈತ ಸಮುದಾಯಕ್ಕೆ ಅನುಕೂಲ ಆಗುವಂತಹ ಕಾರ್ಯ ಕ್ರಮಗಳನ್ನು ನೀಡಬಹುದಿತ್ತು. ಉದಾಹರಣೆಗೆ ಮಳೆಯಾಶ್ರಿತ ಪ್ರದೇಶ ಅಥವಾ ಸಣ್ಣ ಹಿಡುವಳಿದಾರರಿಗೆ ಅಥವಾ ಹೈನುಗಾರಿಕೆಗೆಪೂರಕವಾಗುವ ಯೋಜನೆಗಳು ಇರಬೇಕಿತ್ತು. ಅದು ಇಲ್ಲಿ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಮಾರುಕಟ್ಟೆ ಆಧಾರಿತ ಬಜೆಟ್ ಎಂದು ಇದನ್ನು ವಿಶ್ಲೇಷಿಸಬಹುದು. ಕೇಂದ್ರ ಸರ್ಕಾರ ರೈತರ ಆದಾಯ ದುಪ್ಪಟ್ಟುಗೊಳಿಸುವ ಸಂಕಲ್ಪ ಹೊಂದಿದೆ. ಅದಕ್ಕೆ ಪೂರಕವಾಗಿ ರಾಜ್ಯದ ಯೋಜನೆಗಳು ಕಾಣುತ್ತಿಲ್ಲ. ಬರೀ ಕೃಷಿ ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಪೂರಕ ಅನುದಾನ ನೀಡಲಾಗಿದೆ. ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಹಳದಿ ಎಲೆರೋಗಬಾಧೆ ಸಂಶೋಧನೆ ಮತ್ತು ಪರ್ಯಾಯ ಬೆಳೆಗೆ ಮುಂದಾಗಿರುವುದು ಸ್ವಾಗತಾರ್ಹ.
ಡಾ.ಡಿ. ಶ್ರೀನಿವಾಸಮೂರ್ತಿ,
ಪ್ರಧಾನ ವಿಜ್ಞಾನಿ, ಕೃಷಿ ಅರ್ಥಶಾಸ್ತ್ರ
ವಿಭಾಗ, ರಾಷ್ಟ್ರೀಯ ತೋಟಗಾರಿಕೆ
ಸಂಶೋಧನಾ ಸಂಸ್ಥೆ
(ಐಐಎಚ್‌ಆರ್).