Advertisement

ಮಾರ್ಕಂಡೇಯ ಡ್ಯಾಂ: ನೀರಾವರಿಗೆ ಬಂದ್‌, ಕುಡಿಯುವ ನೀರಿಗೆ ಸೀಮಿತ

03:03 AM May 03, 2019 | Sriram |

ಬಿರು ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿಗಾಗಿ ರಾಜ್ಯದ ಎಲ್ಲೆಡೆ ಹಾಹಾಕಾರ ಕೇಳಿ ಬರುತ್ತಿದೆ. ಭುವಿಗೆ ಸುರಿಯುವ ಮಳೆಯನ್ನು ತನ್ನ ಒಡಲಾಳದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ರಾಜ್ಯದ ಅಣೆಕಟ್ಟುಗಳೇ ಬೇಸಿಗೆಯ ಈ ದಿನಗಳಲ್ಲಿ ಜನರಿಗೆ ಕುಡಿಯುವ ನೀರಿನ ಮೂಲ ಆಸರೆ. ಜನರ ಪಾಲಿಗೆ ಆಪದ್ಭಾಂಧವ ಎನಿಸಿರುವ ರಾಜ್ಯದ ಜಲಾಶಯಗಳಲ್ಲಿನ ಇಂದಿನ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲುವ ‘ಉದಯವಾಣಿ’ಯ ಯತ್ನವಿದು.

Advertisement

ಕೋಲಾರ: ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆ ಸಂಪೂರ್ಣವಾಗಿ ಮಳೆ ನೀರಿನ ಮೇಲೆ ಆಧಾರವಾಗಿದೆ. ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡು ನೀರಾವರಿಗೆ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಬಂಗಾರಪೇಟೆ ತಾಲೂಕು ಬೂದಿಕೋಟೆ ಬಳಿ ಮಾರ್ಕಂಡೇಯ ಅಣೆಕಟ್ಟೆಯನ್ನು ನಿರ್ಮಾಣ ಮಾಡಲಾಗಿದ್ದು, ಶಾಶ್ವತ ಬರಗಾಲದಲ್ಲೂ ಸದ್ಯಕ್ಕೆ ಕೆಲವು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.

ಕೋಲಾರ ತಾಲೂಕಿನ ವಕ್ಕಲೇರಿ ಮಾರ್ಕಂಡೇಯ ಬೆಟ್ಟದಲ್ಲಿ ಉದ್ಭವಗೊಂಡ ಮಾರ್ಕಂಡೇಯ ನದಿಯು ಕವಲುಗಳಾಗಿ ಹರಿದು ಬೂದಿಕೋಟೆಯನ್ನು ಸುತ್ತುವರಿದಿದೆ. ಈ ಎರಡು ಕವಲುಗಳ ಸಂಗಮ ಸ್ಥಳದಲ್ಲಿ ಮಾರ್ಕಂಡೇಯ ಅಣೆಕಟ್ಟೆಯನ್ನು 1936 ಮತ್ತು 1940 ರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಅಣೆಕಟ್ಟೆಯನ್ನು 4.35 ಲಕ್ಷ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿದ್ದು, ಅಣೆಕಟ್ಟೆಗೆ ನೀರು ತುಂಬಿದರೆ ಸುಮಾರು 847 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತಿತ್ತು. ಆದರೆ, ಈಗ ಈ ಅಣೆಕಟ್ಟೆಯ ನೀರನ್ನು ಸಂಪೂರ್ಣವಾಗಿ ಕುಡಿಯುವ ನೀರಿಗೆ ಮೀಸಲಿಡಲಾಗಿದೆ.

ಅಣೆಕಟ್ಟೆಯ ಸಾಮರ್ಥ್ಯ: ಮಾರ್ಕಂಡೇಯ ಅಣೆಕಟ್ಟೆ ಬಂಗಾರಪೇಟೆ ತಾಲೂಕಿನಲ್ಲಿದ್ದರೂ, ನೀರು ಸಂಗ್ರಹಣೆಗೆ ಮಾಲೂರು ತಾಲೂಕಿನ 13.14 ಚದರ ಮೈಲಿ ಪ್ರದೇಶವನ್ನು ಅವಲಂಬಿಸಿದೆ. ಈ ಅಣೆಕಟ್ಟೆ ಸ್ವತಂತ್ರವಾಗಿ 7.73 ಚದರ ಮೈಲು ನೀರು ಸಂಗ್ರಹಣಾ ಪ್ರದೇಶ ಹೊಂದಿದೆ. ಅಣೆಕಟ್ಟೆಯು 61 ಅಡಿಗಳಷ್ಟು ಎತ್ತರ ಮತ್ತು 42 ಅಡಿಗಳ ಅಗಲವಿದೆ. ಸುಮಾರು 46 ಅಡಿ ನೀರು ನಿಲ್ಲುವ ಸಾಮರ್ಥ್ಯ ಹೊಂದಿದ್ದು, ಸದ್ಯಕ್ಕೆ ಸುಮಾರು 8 ರಿಂದ 10 ಅಡಿಗಳಷ್ಟು ಹೂಳು ತುಂಬಿದೆಯೆಂದು ಅಂದಾಜಿಸಲಾಗಿದೆ. ಇದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಹೂಳು ಸೇರಿ ಪ್ರಸ್ತುತ ಅಣೆಕಟ್ಟೆಯಲ್ಲಿ ಶೇ.40 ರಿಂದ 50ರಷ್ಟು ನೀರು 0.5 ಟಿಎಂಸಿ ಪ್ರಮಾಣದಲ್ಲಿ ಸಂಗ್ರಹವಾಗಿದೆ.

Advertisement

ಮಾರ್ಕಂಡೇಯ ಅಣೆಕಟ್ಟೆ ತುಂಬಿ 14 ವರ್ಷಗಳಾಗಿವೆ. 2005 ರಲ್ಲಿ ಸುರಿದ ಭರ್ಜರಿ ಮಳೆಗೆ ಡ್ಯಾಂ ತುಂಬಿ ಹರಿದಿತ್ತು. ಇದಾದ ನಂತರ 2017 ರಲ್ಲಿ ಸುರಿದ ಮಳೆಗೆ ಅಣೆಕಟ್ಟೆ ತುಂಬಿತ್ತಾದರೂ, ತುಂಬಿ ಹರಿಯಲು 3 ಅಡಿಗಳ ನೀರಿನ ಕೊರತೆ ಇತ್ತು. ಹೀಗೆ ತುಂಬಿದ ನೀರನ್ನು ನೀರಾವರಿಗೆ ಬಿಡದೆ ಮಾಲೂರು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು.

ಕುಡಿಯುವ ನೀರಿನ ಯೋಜನೆ: 2013ರಲ್ಲಿ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿಯವರು ಇದೇ ಜಲಾಶ‌ಯದ‌ ನೀರನ್ನು ಶುದ್ಧೀಕರಿಸಿ ಮಾಲೂರು ತಾಲೂಕಿನ 182 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ಬಳಕೆ ಮಾಡಲು ಯೋಜನೆಯೊಂದನ್ನು ರೂಪಿಸಿದ್ದರು. ಸರಕಾರ‌ 47 ಕೋಟಿ ರೂ. ವೆಚ್ಚದಲ್ಲಿ ಜಲಾಶ‌ಯದಲ್ಲಿ ಜಾಕ್‌ವೇಲ್, ಟೇಕಲ್ನ ಬೆಟ್ಟದದ ತಪ್ಪಲಿನಲ್ಲಿ ಶುದ್ಧೀಕರಣ ಘಟಕ, ಬೆಟ್ಟದ ಮೇಲೆ ನೀರು ಸಂಗ್ರಹ ಟ್ಯಾಂಕ್‌ ನಿರ್ಮಿಸಿ ಗುರುತ್ವಾಕರ್ಷಣೆಯಿಂದ ತಾಲೂಕಿನ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಅಳವಡಿಸಿದ್ದರು. ಆದರೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ವೇಳೆಗೆ ಡ್ಯಾಂನ ನೀರಿನ ಮಟ್ಟ ಕಡಿಮೆಯಾಗಿ ನನೆಗುದಿಗೆ ಬೀಳುವಂತಾಗಿತ್ತು.

ಆದರೆ, 2017ರಲ್ಲಿ ಮತ್ತೆ ಅಣೆಕಟ್ಟೆಗೆ ನೀರು ಹರಿದು ಬಂದಿದ್ದರಿಂದ ಅಂದಿನ ಶಾಸಕ ಮಂಜುನಾಥಗೌಡ ನೀರಾವರಿ ಯೋಜನೆಯ ಯಂತ್ರೋಪಕರಣಗಳನ್ನು ಕಾರ್ಯಾರಂಭವಾಗುವಂತೆ ಮಾಡಿದ್ದರು. ಇದರಿಂದ ಮಾಲೂರು ತಾಲೂಕಿನ 180 ಗ್ರಾಮಗಳಿಗೆ 6 ವಲಯಗಳ ಮೂಲಕ ನೀರು ಹರಿಸಲು ಯೋಜಿಸಲಾಗಿದೆ.

ಸದ್ಯ 26 ಹಳ್ಳಿಗಳಿಗೆ ನೀರು
ಪ್ರಸ್ತುತ ಅಣೆಕಟ್ಟೆಯಲ್ಲಿ 0.5 ಟಿಎಂಸಿ ನೀರು ಮಾತ್ರವೇ ಸಂಗ್ರಹವಾಗಿದ್ದು, ಈ ಬಾರಿ ಮಳೆ ಸುರಿದರೆ ಅಣೆಕಟ್ಟೆ ತುಂಬುವ ನಿರೀಕ್ಷೆಯಿದೆ. ಇಲ್ಲವಾದರೂ, ಲಭ್ಯವಿರುವ ನೀರು 7-8 ತಿಂಗಳ ಅವಧಿಗೆ ಮಾಲೂರು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸರಬರಾಜು ಮಾಡಲು ಸಾಕಾಗಬಹುದೆಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದ್ದು, ಪ್ರತಿ ಹತ್ತು ವರ್ಷಕ್ಕೊಮ್ಮೆ ಭರ್ಜರಿ ಮಳೆ ಸುರಿಯುತ್ತಿದೆ. ಆಗ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಯೋಜನೆಗೆ ಬಿಡದೆ ಸಂಪೂರ್ಣವಾಗಿ ಕುಡಿಯುವ ನೀರು ಸರಬರಾಜಿಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ.

ಮಾರ್ಕಂಡೇಯ ಅಣೆಕಟ್ಟೆಯಲ್ಲಿ ಸದ್ಯಕ್ಕೆ 0.5 ಟಿಎಂಸಿ ನೀರು ಸಂಗ್ರಹವಾಗಿದ್ದು,ಇದು ಮುಂದಿನ ಏಳೆಂಟು ತಿಂಗಳ ಕಾಲ ಮಾಲೂರಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಬಳಕೆ ಮಾಡಬಹುದು. ಈ ಬಾರಿ ಭರ್ಜರಿ ಮಳೆ ಸುರಿದರೆ ಮಾತ್ರವೇ 182 ಹಳ್ಳಿಗಳಿಗೂ ನೀರು ಸರಬರಾಜು ಸಾಧ್ಯವಾಗುತ್ತದೆ.
– ಜಿ.ನಾರಾಯಣಸ್ವಾಮಿ,
ಇಂಜಿನಿಯರ್‌, ನೀರು ಸರಬರಾಜು ಮಂಡಳಿ

ಅಣೆಕಟ್ಟೆಯನ್ನು ನೀರಾವರಿ ಉದ್ದೇಶದಿಂದ ನಿರ್ಮಾಣ ಮಾಡಲಾಗಿತ್ತಾದರೂ,
ಕೋಲಾರ ಜಿಲ್ಲೆಯ ನೀರಿನ ಅಭಾವದಿಂದ ಪ್ರಸ್ತುತ ಕುಡಿಯುವ ನೀರಿಗೆ ಮೀಸಲಿಡಲಾಗಿದೆ.ಈ ಬಾರಿ ಮಳೆ ಸುರಿದರಷ್ಟೇ ಅಣೆಕಟ್ಟೆ ತುಂಬುವಷ್ಟು ನೀರು ಸಂಗ್ರಹ ಸಾಧ್ಯ.
– ಬೈರಾರೆಡ್ಡಿ, ಎಇಇ, ಸಣ್ಣ ನೀರಾವರಿ ಇಲಾಖೆ

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next