Advertisement

ಕಲಾ ಸಂಘಟನೆಗಳಿಗೆ ನೆರವು ಒದಗಿಸಿ

05:06 PM Jun 03, 2019 | Naveen |

ಮರಿಯಮ್ಮನಹಳ್ಳಿ: ಮಕ್ಕಳ ಶಿಬಿರಗಳನ್ನು ಆಯೋಜಿಸುವ ಕಲಾ ಸಂಘಟನೆಗಳಿಗೆ ನಾಟಕ ಅಕಾಡೆಮಿ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಜಾನಪದ ಅಕಾಡೆಮಿ ಸದಸ್ಯೆ ಮಾತಾ ಮಂಜಮ್ಮ ಜೋಗತಿ ಆಗ್ರಹಿಸಿದರು.

Advertisement

ಪಟ್ಟಣದ ದುರ್ಗಾದಾಸ ಬಯಲು ರಂಗಮಂದಿರದಲ್ಲಿ ರಂಗಚೌಕಿ ಕಲಾ ಟ್ರಸ್ಟ್‌ ವತಿಯಿಂದ ಒಂದು ತಿಂಗಳ ಕಾಲ ಜರುಗಿದ ಅಜ್ಜಿಮನೆ ಬೇಸಿಗೆ ಶಿಬಿರದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ರಂಗ ಶಿಬಿರಗಳು ನಡೆಸಲು ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ. ಗ್ರಾಮೀಣ ಭಾಗಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೂ ಈ ಶಿಬಿರಗಳ ಮಹತ್ವವಿದೆ. ಇದು ಸರ್ಕಾರದ ಜವಾಬ್ದಾರಿಯಾಗಬೇಕು. ಇಂತಹ ಶಿಬಿರಗಳಿಗೆ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದರು.

ರಂಗಕರ್ಮಿ, ನಿವೃತ್ತ ಶಿಕ್ಷಕ ಮ.ಬ.ಸೋಮಣ್ಣ ಮಾತನಾಡಿ, ಮರಿಯಮ್ಮನಹಳ್ಳಿಯಂತಹ ಪಟ್ಟಣದಲ್ಲಿ ಈ ಬೇಸಿಗೆಯಲ್ಲಿ ಮೂರು ಮಕ್ಕಳ ಶಿಬಿರಗಳು ನಡೆದಿವೆ ಎಂಬುದೇ ಅಚ್ಚರಿಯ ಸಂಗತಿ. ಮಕ್ಕಳಿಗೆ ಸೂಕ್ತ ರಂಗಶಿಕ್ಷಣ ನೀಡುವ ಚಟುವಟಿಕೆಗಳು ನಿರಂತರ ನಡೆಯುತ್ತಲೇ ಇರುತ್ತವೆ ಎಂದರು.

ವೃತ್ತಿ ರಂಗ ಕಲಾವಿದೆ ಡಾ.ನಾಗರತ್ನಮ್ಮ ಮಾತನಾಡಿದರು. ರಂಗಚೌಕಿ ಕಲಾಟ್ರಸ್ಟ್‌ ಅಧ್ಯಕ್ಷೆ ಪುಷ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ನಿರ್ದೇಶಕ ಬಿ.ಸರದಾರ, ರಂಗಪ್ರೇಮಿ ಟಿ.ಎಂ.ನಾಗಭೂಷಣ ಇದ್ದರು.

Advertisement

ನಂತರ ಶಿಬಿರದ ಮಕ್ಕಳಿಂದ ಭೂತಕೋಲ ಕುಣಿತ, ಯಕ್ಷಗಾನ ಕುಣಿತ, ಕೋಲಾಟ, ರಂಗಗೀತೆ ಕಾರ್ಯಕ್ರಮಗಳು ಜರುಗಿದವು.

ಶಿಬಿರದ ಮಕ್ಕಳು ಅಭಿನಯಿಸಿದ ಎಸ್‌.ರಾಮನಾಥ ರಚನೆಯ ಮಹಾಭೋಜನ ನಾಟಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ನಾವು ಉಣ್ಣುವ ಮೊದಲ ತುತ್ತು ಕಾಗೆಗಳಿಗೆ ಮೀಸಲು ಯಾಕೆ ಇಡಬೇಕು ಎಂಬ ಸಂಗತಿಯನ್ನುಳ್ಳ ಕತೆಯಾಗಿದ್ದು, ಆಹಾರ ಪಡೆಯುವುದು ಎಲ್ಲರ ಹಕ್ಕು ಎಂಬ ಆಶಯವನ್ನು ಸಮರ್ಪಕವಾಗಿ ಮಂಡಿಸಿತು. ಮಕ್ಕಳ ಸ್ಪಷ್ಟ ಸಂಭಾಷಣೆ, ಸನ್ನಿವೇಷಕ್ಕೆ ತಕ್ಕ ಭಾವಾಭಿನಯ ಪ್ರೇಕ್ಷಕರ ಮನ ಗೆದ್ದಿತು. ಬಾರಿಗಿಡದ ಸರದಾರ ನಾಟಕ ನಿರ್ದೇಶನ ಮಾಡಿದ್ದರು. ಈ.ರಾಘವೇಂದ್ರ ಬೆಳಕಿನ ನಿರ್ವಹಣೆ ಮಾಡಿದರು. ಪುಷ್ಪ ರಂಗಸಜ್ಜಿಕೆ, ದಾದಾಪೀರ್‌ ಪ್ರಸಾದನ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next