ಮರಿಯಮ್ಮನಹಳ್ಳಿ: ಜನರ ಭಾವನೆಗಳನ್ನು ಬೆಸೆಯುವ ಕೆಲಸ ನಾಟಕಗಳು ಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಹೊಸಪೇಟೆ ತಾಲೂಕು ಅಧ್ಯಕ್ಷ ಡಾ| ಜಿ.ಎಂ. ಸೋಮೇಶ್ವರ ಅಭಿಪ್ರಾಯಪಟ್ಟರು.
ಪಟ್ಟಣದ ದುರ್ಗದಾಸ ಕಲಾ ಮಂದಿರದಲ್ಲಿ ಮರಿಯಮ್ಮನಳ್ಳಿಯ ಪತ್ರಕರ್ತರು, ರಂಗ ಸಂಸ್ಕೃತಿ ಹಾಗೂ ಸೃಷ್ಟಿ ಕಲಾ ಬಳಗದ ಆಶ್ರಯದಲ್ಲಿ ನಡೆದ ಮವಿನಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶಿವಮೊಗ್ಗ ರಂಗಾಯಣ ನಾಟಕೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.
ಬದುಕಿಗೆ ಹತ್ತಿರವಾಗಿರುವ ನಾಟಕ ಪ್ರದರ್ಶನಗಳು ಬಹುಬೇಗ ಜನರ ಮನಸ್ಸನ್ನು ಸೆಳೆಯುತ್ತವೆ. ಮರಿಯಮ್ಮನಹಳ್ಳಿಯು ರಂಗಭೂಮಿ ತರವರೂರಾಗಿದ್ದು, ಇಲ್ಲಿ ರಂಗಭೂಮಿ ಕಲಾವಿದರು ಮನೆಗೊಬ್ಬರು ಸಿಗುತ್ತಾರೆ. ಇಲ್ಲಿನ ಹಿರಿಯರಂಗ ಕಲಾವಿದರಾದ ದುರ್ಗದಾಸ, ಮೈಲಾರಪ್ಪ, ನಾಗರತ್ನಮ್ಮ, ಬಿಎಂಎಸ್. ಪ್ರಭು, ಹುರುಕೊಳ್ಳಿ ಮಂಜುನಾಥ, ಜಿ.ಎಂ. ಕೊಟ್ರೇಶ್, ರಸೂಲ್ ಸಾಬ್ ಸೇರಿದಂತೆ ನೂರಾರು ರಂಗಭೂಮಿ ಕಲಾವಿದರು ಗ್ರಾಮೀಣ ಸೊಗಡನ್ನು ತಮ್ಮದೆ ಆದ ಅಭಿನಯದ ಮೂಲಕ ರಾಜ್ಯಕ್ಕೆ ಸಾರಿದ್ದಾರೆ ಎಂದು ತಿಳಿಸಿದರು.
ಆರಕ್ಷಕ ಉಪ ನಿರೀಕ್ಷಕ ಎಂ. ಶಿವಕುಮಾರ್ ಮಾತನಾಡಿ, ಜೀವನದಲ್ಲಿ ನಡೆಯುವಂತ ಪ್ರತಿಯೊಂದು ಘಟನೆಗಳನ್ನು ಕಲಾವಿದರು ತಮ್ಮ ಕಲೆಯ ಮೂಲಕ ನಾಟಕಗಳಲ್ಲಿ ತಿಳಿಸಿಕೊಡುತ್ತಾರೆ. ಪ್ರಸ್ತುತ ಸಾಮಾಜಿಕ ಸಮಸ್ಯೆಗಳನ್ನಿಟ್ಟುಕೊಂಡು ಶಿವಮೊಗ್ಗ ರಂಗಾಯಣ ತಂಡದವರು ಉತ್ತಮ ನಾಟಗಳ ಪ್ರದರ್ಶನ ಮಾಡಿದ್ದಾರೆ. ಮೌಲ್ಯಯುತ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂದರು.
ಪತ್ರಕರ್ತ ಕಿಚಿಡಿ ಕೊಟ್ರೋಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೆ.ಶಿವಮೂರ್ತಿ, ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಸಹಾಯಕ ಪ್ರಾಧ್ಯಾಪಕ ಆರ್.ಪಾಂಡುರಂಗ, ಕಾವ್ಯವಾಹಿನಿ ಸಂಸ್ಥೆಯ ಟಿ.ಜ್ಯೋತಿ ರಾಜಣ್ಣ, ಕಲಾವಿದ ಬಿ.ಆನಂದ್, ಎಲ್.ಉದಯ್, ಮಂಜುಳಾ ಪ್ರಶಾಂತ್, ಹರಿಕಥೆ ಮಂಜು, ಎಂ. ಮಹಾಂತೇಶ್, ಎಲ್.ಶಾರದಾ, ಯೋಗಾನಂದ, ಎಲ್.ಪ್ರಶಾಂತ್ ಕುಮಾರ್, ಡಿ. ಹೇಮಂತ್, ಎಂ.ಸೋಮೇಶ್ ಉಪ್ಪಾರ್, ಪಿ.ರಾಮಚಂದ್ರ ಇದ್ದರು.
ನಂತರ ಶಿವಮೊಗ್ಗ ರಂಗಾಯಣ ಕಲಾತಂಡದಿಂದ ಅರವಿಂದ ಮಾಲಗತ್ತಿ ಅವರ ಆತ್ಮಕಥೆ ಆಧಾರಿತ ಗೌರ್ಮೆಂಟ್ ಬ್ರಾಹ್ಮಣ ನಾಟಕ ಪ್ರದರ್ಶನ ಕಂಡಿತು.