ಕಾರವಾರ: ಸರ್ವಋತು ಬಂದರು ಎಂದೇ ಹೆಸರಾದ ಕಾರವಾರ ವಾಣಿಜ್ಯ ಬಂದರು ಮೆರಿಟೈಮ್ ಬೋರ್ಡ್ ಆಗಿ ಪರಿವರ್ತಿಸಲು ಹಿಂದೆ ಅಧಿಕಾರದಲ್ಲಿದ್ದ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದರು. ಮೆರಿಟೈಮ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉಜ್ವಲ್ ಕುಮಾರ್ ಘೋಷ್ ನೇಮಕವಾಗಿದ್ದರು. ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಎರಡು ಸಭೆಗಳನ್ನು ಮೆರಿಟೈಮ್ ಬೋರ್ಡ್ ಸಿಇಒ ಉಜ್ವಲ್ ಕುಮಾರ್ ಘೋಷ್ ನಡೆಸಿದ್ದರು. ಈಗ ಸರ್ಕಾರ ಬದಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಕಳೆದವಾರದ ಕೊನೆಯಲ್ಲಿ ಕಾರವಾರಕ್ಕೆ ಬಂದಿದ್ದ ಮೆರಿಟೈಮ್ ಬೋರ್ಡ್ ಸಿಇಒ ಬಂದರು ನಿರ್ದೇಶಕರು ಮತ್ತು ಇತರೆ ಅಧಿಕಾರಿಗಳಿಂದ ಕಾರವಾರ ಬಂದ ರಿನ ಆಸ್ತಿ, ರಫ್ತು ಮ ತ್ತು ಆಮದು ಸಂಗ್ರಹಣೆಗೆ ಇರುವ ಸ್ಥಳಾವಾಕಾಶ ಹಾಗೂ ಬಂದರು ಜಟ್ಟಿ ವಿಸ್ತರಣೆಯ ಸ್ಥಳ ಹಾಗೂ ಕಾರವಾರ ಮಕ್ಕಳ ಉದ್ಯಾನವನದ ಕಡಲತೀರದ ತುದಿಯಿಂದ ಸಮುದ್ರದ ಕಡೆಗೆ 125 ಮೀಟರ್ ತಡೆಗೋಡೆ ಟೆಂಡರ್ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಗತಿ ವಿಚಾರಿಸಿದರು. ಸ್ಥಳಾಂತರವೇ ದೊಡ್ಡ ಸಮಸ್ಯೆ:ಬಂದರು ವಿಸ್ತರಣೆಗೆ ಈಗ ಅಲ್ಲಿ ನೆಲಸಿರುವ 80ಕ್ಕೂ ಹೆಚ್ಚು ಕುಟುಂಬಗಳನ್ನು ಪರಿಹಾರ ನೀಡಿ ಸ್ಥಳಾಂತರಿಸುವುದೇ ದೊಡ್ಡ ಸಮಸ್ಯೆಯಾಗಿದೆ. 35-40 ವರ್ಷಗಳ ಹಿಂದೆ ಬಂದರು ವಿಸ್ತರಣೆಗೆ ಯೋಜಿಸಿ, ಜನರನ್ನು ಆಗ ಸ್ಥಳಾಂತರಿಸಲು ಸರ್ಕಾರ ಮುಂದಾಗಿತ್ತು. ಆಗಿನ ಅವಧಿಯ ಆರ್ಥಿಕ ಲೆಕ್ಕಾಚಾರಕ್ಕೆ ಹೊಂದಿಕೆಯಾಗುವಂತೆ ಪರಿಹಾರ ಸಹ ನೀಡಲಾಗಿತ್ತು. ಕಾರವಾರದ ಕೆಎಚ್ಬಿ ಕಾಲೋನಿ ಪಕ್ಕವೇ ಪೋರ್ಟ್ ಕಾಲೋನಿ ಮಾಡಿ ಪ್ಲಾಟ್ ಹಂಚಲಾಗಿತ್ತು. ಕೆಲವರಿಗೆ ಶಿರವಾಡದಲ್ಲಿ ಪ್ಲಾಟ್ ನೀಡಲಾಗಿತ್ತು. ಆದರೆ ಬೈತಖೋಲ್ ನಿವಾಸಿಗಳನ್ನು ಸ್ಥಳಾಂತರಿಸುವ ಗೋಜಿಗೆ ಸರ್ಕಾರ ಮುಂದಾಗಲಿಲ್ಲ. ಅತ್ತ ಬಂದರು ಸಹ ವಿಸ್ತರಣೆಯಾಗಲಿಲ್ಲ. ಕುಟುಂಬಗಳು ಅಲ್ಲೇ ನೆಲಸಿದವು. ಈ ಮಧ್ಯೆ ಆಗಾಗ ಬಂದರು ವಿಸ್ತರಣೆಯ ಮಾತು ಕಾಗದದಲ್ಲೇ ಉಳಿಯಿತು. ಬೈತಖೋಲ ನಿವಾಸಿಗಳು ಸ್ಥಳೀಯರೇ ಆಗಿ ಅಲ್ಲೇ ಉಳಿದರು. ಅಲ್ಲೇ ಉದ್ಯೋಗ ಕಂಡುಕೊಂಡರು. ಶಾಲೆ, ವಿದ್ಯುತ್, ನೀರು ನಗರಸಭೆಯಿಂದ ಎಲ್ಲವೂ ಸಾಂಗವಾಗಿ ನಡೆದವು. ನಗರಸಭೆಗೆ ಪ್ರತಿನಿಧಿಯೂ ಆಯ್ಕೆಯಾಗಿ ಬಂದರು. ಈಗಲೂ ನಗರಸಭೆಯನ್ನು ಬೈತಖೋಲ ಬಂದರು ಪ್ರದೇಶದಿಂದ ಪ್ರತಿನಿಧಿಸುವ ಸದಸ್ಯರಿದ್ದಾರೆ. ನಗರಸಭೆ ನಾಗರಿಕ ಸೌಲಭ್ಯಗಳನ್ನು ಅಲ್ಲಿನ ನಿವಾಸಿಗಳಿಗೆ ನೀಡುತ್ತಿದೆ. ನಗರಸಭೆಯ 31 ವಾರ್ಡ್‌ಗಳ ಪೈಕಿ , ವಾರ್ಡ್ ನಂಬರ್ 1 ಬೈತಖೋಲದಿಂದಲೇ ಪ್ರಾರಂಭವಾಗುತ್ತದೆ.
35 ವರ್ಷಗಳ ಹಿಂದೆ ನೀಡಿದ ಪರಿಹಾರ ಮೊತ್ತ ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲು ತುಳಿದರು. ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಅಲ್ಲಿನ ನಿವಾಸಿಗಳು ಪರಿಹಾರ ಕೇಳುತ್ತಿದ್ದು, ಅದು ಸಹ ನ್ಯಾಯಯುತವೇ ಆಗಿದೆ.
ಅಲೆತಡೆಗೋಡೆಗೆ ಟೆಂಡರ್: ಬಂದರು ವಿಸ್ತರಣೆಗೆ ನೆರವಾಗುವಂತೆ ಅಲೆ ತಡೆಗೋಡೆಯನ್ನು ಕಾರವಾರ ನಗರದ ಕಡೆಯಿಂದ ಸಮುದ್ರಕ್ಕೆ ಮುಖಮಾಡಿ 125 ಮೀಟರ್‌ವರೆಗೆ ನಿರ್ಮಿಸುವ ಯೋಜನೆ ಕರ್ನಾಟಕ ಸರ್ಕಾರದ ಮುಂದಿದೆ. ಇದಕ್ಕಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2017ರಲ್ಲೇ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿತ್ತು. ಆದರೆ ಆಗ ಬಂದರು ವಿಸ್ತರಣೆಯ ಸಾಧಕ ಬಾಧಕಗಳ ಅಧ್ಯಯನ ನಡೆಯುತ್ತಿತ್ತು. ನಂತರ 2018ರ ಬಜೆಟ್‌ನಲ್ಲಿ ಬಂದರು ಹಾಗೂ ಅಲೆತಡೆಗೋಡೆ ವಿಸ್ತರಣೆ ಪ್ರಸ್ತಾಪಿಸಿ 125 ಕೋಟಿ ರೂ. ಅನುದಾನ ಬಿಡುಗಡೆ ಸಹ ಮಾಡಲಾಗಿತ್ತು. ಆದರೆ ಟೆಂಡರ್ ಪ್ರಕ್ರಿಯೆ ಹೊತ್ತಿಗೆ ಚುನಾವಣೆಗಳು ಬಂದ ಕಾರಣ ಕೆಲಸಗಳು ನಿಂತು ಹೋದವು. ಹೊಸ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಬಂದರು ವಿಸ್ತರಣೆಗೂ ಮೊದಲು ಅಲೆತಡೆಗೋಡೆ ಕಾಮಗಾರಿಯ ಟೆಂಡರ್ ಆಗಿದೆ. ಕೆಲಸ ಮಳೆಗಾಲದ ನಂತರ ಆರಂಭವಾಗಬೇಕು. ಆದರೆ ಈಗ ಸರ್ಕಾರ ಸಹ ಬದಲಾಗಿದೆ.
ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಿಂದ ಸಾಗರ ಮಾಲಾ ಯೋಜನೆಯಡಿ ಕಾರವಾರ ಬಂದರು ಅಭಿವೃದ್ಧಿಗೆ 85 ಕೋಟಿ ರೂ. ಬಿಡುಗಡೆ ಮಾಡಿ ಕುಳಿತಿದೆ.
ಹೊಸದಾಗಿ ಇನ್ನೂ 5 ವಾಣಿಜ್ಯ ಹಡಗುಗಳು ಲಂಗುರ ಹಾಕಲು ಅನುಕೂಲವಾಗುವಂತೆ ಬಂದರು ಜಟ್ಟಿ ವಿಸ್ತರಿಸಿ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಇದರ ಜೊತೆಗೆ ಬಂದರನ್ನು ಮೆರಿಟೈಮ್ ಬೋರ್ಡ್ ಆಗಿ ಪರಿವರ್ತಿಸಿದ್ದು, ಅದಕ್ಕೆ ಸಂಬಂಧಿ ಕೆಲಸಗಳು ಆಗಬೇಕಿವೆ. ಆದರೆ ಸ್ಥಳೀಯ ಅಧಿಕಾರಿಗಳ ನಿರಾಸಕ್ತಿ ಕಾರಣ ಬಂದರು ಅಭಿವೃದ್ಧಿ ಆಮೆಗತಿ ತಾಳಿದೆ ಎಂಬ ಆರೋಪವೂ ಇದೆ.
ಆ. 20 ಮತ್ತು 21ರಂದು ಮೆರಿಟೈಮ್ ಬೋರ್ಡ್ ಸಿಇಒ ಉಜ್ವಲ್ ಕುಮಾರ್ ಘೋಷ್, ಬಂದರು ನಿರ್ದೇಶಕರು ಹಾಗೂ ಕಾರವಾರ ಬಂದರಿನ ಹಿರಿಯ ಅಧಿಕಾರಿಗಳು ಹಾಗೂ ಆಡಳಿತ ವಿಭಾಗದ ಓರ್ವ ಸಿಬ್ಬಂದಿ ಜೊತೆ ಮುಂಬಯಿಗೆ ತೆರಳಿ ಅಲ್ಲಿನ ಮೆರಿಟೈಮ್ ಬೋರ್ಡ್ ಕಾರ್ಯವೈಖರಿ, ಸೌಲಭ್ಯಗಳನ್ನು ಅಧ್ಯಯನ ಮಾಡಲಿದ್ದಾರೆ. ಎರಡು ದಿನ ಅಲ್ಲಿದ್ದು, ಇಂಡಿಯಾ ಪೋರ್ಟ್ ಟ್ರಸ್ಟ್ ಅಡಿ ಮೆರಿಟೈಮ್ ಬೋರ್ಡ್‌ಗಳ ಕಾರ್ಯವೈಖರಿ ಅರಿಯಲಿದ್ದಾರೆ. ನಂತರ ಕಾರವಾರ ಬಂದರು ವಿಸ್ತರಣೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ನೂತನ ಸರ್ಕಾರ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮೆರಿಟೈಮ್ ಬೋರ್ಡ್ ಅಡಿ ಕೇಂದ್ರದ ಸಾಗರ ಮಾಲಾ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳು ಕಂಡುಬಂದಿವೆ. ಕಾರವಾರ ವಾಣಿಜ್ಯ ಬಂದರಿಗೆ ಶುಕ್ರದೆಸೆ ತಿರುಗುವ ಲಕ್ಷಣಗಳು ಇದೀಗ ಗೋಚರಿಸಿವೆ.
•ನಾಗರಾಜ ಹರಪನಹಳ್ಳಿ