Advertisement
ಮೊಬೈಲ್, ಟೆಲಿಫೋನ್‌ಗಳಿಲ್ಲದಿದ್ದಂಥ ಕಾಲ. ಅನಿರೀಕ್ಷಿತವಾಗಿ ರಾತ್ರಿಯ ವೇಳೆ ಅತಿಥಿಗಳು ಮನೆಗೆ ಬಂದರೆ ಅವರನ್ನು ಬರೀ ಹೊಟ್ಟೆಯಲ್ಲಿ ಮಲಗಿಸುವುದು ಹಿಂದೂ ನಾರಿಯರ ಲಕ್ಷಣವಾಗಿರಲಿಲ್ಲ. ಗ್ಯಾಸ್, ಕುಕ್ಕರ್‌ಗಳಿಲ್ಲದಿದ್ದ ಅಂದಿನ ದಿನಗಳಲ್ಲಿ ತತ್‌ಕ್ಷಣಕ್ಕೆ ಅಡುಗೆ ಮಾಡಿ ಬಡಿಸುವುದೂ ಕಷ್ಟದ ಕೆಲಸವೇ. ಅಂಥ ಸಮಯದಲ್ಲಿ ಅನ್ನವನ್ನು ಮಾಡಿಬಿಟ್ಟರೆ ಸಾಕು. ಹಪ್ಪಳ, ಸಂಡಿಗೆಗಳಂತೂ ಇದ್ದೇ ಇರುತ್ತಿತ್ತು. ಎಲ್ಲರ ಮನೆಯಲ್ಲೂ ದನಕರುಗಳನ್ನು ಸಾಕುತ್ತಿದ್ದು, ಹಾಲು-ಮೊಸರು ಹೇರಳವಾಗಿರುತ್ತಿತ್ತು. ಆಗ ಗೃಹಿಣಿಯರ ಕಷ್ಟವನ್ನು ದೂರಮಾಡುತ್ತಿದ್ದುದೇ ಈ ಉಪ್ಪಿನಕಾಯಿ. ಅನ್ನ, ಕೆನೆಮೊಸರಿನ ಜೊತೆ ಉಪ್ಪಿನಕಾಯಿಯನ್ನು ನೆಂಜಿಕೊಂಡು ಹಸಿದ ಹೊಟ್ಟೆಯನ್ನು ತೃಪ್ತಿಪಡಿಸಿಕೊಂಡು ಊಟ ಮಾಡಿ, ಗಡದ್ದಾಗಿ ನಿದ್ದೆ ಮಾಡುತ್ತಿದ್ದರು ಬಂದ ಅತಿಥಿಗಳು.
Related Articles
Advertisement
ಉಪ್ಪಿನಕಾಯಿಯು ತಿನ್ನಲು ಎಷ್ಟು ರುಚಿಕರವೋ ತಯಾರಿಸುವುದು ಅಷ್ಟೇ ಕಷ್ಟ. ಸ್ವಲ್ಪವೂ ನೀರನ್ನು ತಾಗಿಸದೆ, ಒರೆಸಿ, ಉಪ್ಪಿನಲ್ಲಿ ಹಾಕಿ ಎಂಟು ಹತ್ತು ದಿನಗಳ ನಂತರ ಖಾರದ ಪುಡಿ, ಸಾಸಿವೆ ಪುಡಿಯೊಂದಿಗೆ ಕಲೆಸಿ ಭರಣಿಗಳಲ್ಲಿ ತುಂಬಿಸಿ, ಬಿಗಿಯಾಗಿ ಬಾಯಿಕಟ್ಟಿ ಇಟ್ಟುಬಿಟ್ಟರೆ ಎರಡು ಮೂರು ವರ್ಷಗಳವರೆಗೂ ಹಾಳಾಗದೆ ತಾಜಾ ಉಪ್ಪಿನಕಾಯಿಯಂತೆಯೇ ಇರುತ್ತದೆ.
ಹಳ್ಳಿಗಳಲ್ಲಿ ಎಲ್ಲರ ಮನೆಗಳಲ್ಲೂ ಬೇಸಾಯವಿರುತ್ತಿತ್ತು. ಒಕ್ಕಲು ಆಳುಗಳಂತೂ ಆಗಾಗ ಬಂದು, “”ಅಮ್ಮ, ಜ್ವರ ಬಂದು ಬಾಯಿರುಚಿಯೆಲ್ಲಾ ಕೆಟೊØàಗಿತ್ತು ಕಾಣಿ, ಸ್ವಲ್ಪ ಉಪ್ಪಿನಕಾಯಿ ಗಂಜಿಗ್ ಹಾಕ್ಕೊಂಡ್ ಉಣ್ತೆ. ಅದರ ರುಚಿ ಎಷ್ಟ್ ದಿನ ಆದ್ರೂ ಬಾಯಿಂದ ಹೋಪುದೇ ಇಲ್ಲ ಕಂಡ್ರ” ಅಂತ ಪೂಸಿ ಹೊಡೆದು ಒಂದು ಬಟ್ಟಲು ಉಪ್ಪಿನಕಾಯಿ ತೆಗೆದುಕೊಂಡು ಹೋಗುತ್ತಿದ್ದುದೂ ಉಂಟು. ಮದುವೆಯಾಗಿ ಹೋದ ಮಗಳು ಗಂಡನ ಮನೆಯಲ್ಲಿ ಉಪ್ಪಿನಕಾಯಿ ಇದ್ದರೂ ಸಹ ತವರಿನಿಂದ ಸ್ವಲ್ಪವಾದರೂ ತೆಗೆದುಕೊಂಡು ಹೋಗುತ್ತಿದ್ದಳು. ಇದನ್ನು ಗಮನಿಸಿದರೆ ತನ್ನ ತವರಿನೊಂದಿಗಿದ್ದ ಮಧುರವಾದ ಬಾಂಧವ್ಯ ಉಪ್ಪಿನಕಾಯಿಯ ಜೊತೆಯೂ ಮುಂದುವರೆಯುತ್ತಿತ್ತೆಂಬುದು ತಿಳಿಯುತ್ತದೆ. ಅಷ್ಟು ಮಾತ್ರವಲ್ಲದೆ, ತನ್ನ ಅಕ್ಕ, ತಮ್ಮಂದಿರಿಗೂ ರವಾನೆಯಾಗುತ್ತಿತ್ತು.
ಇಂದಿನ ದಿನಗಳಲ್ಲಿ ಈ ಬಾಂಧವ್ಯಗಳಿಗೆಲ್ಲಾ ತೆರೆಬೀಳುತ್ತಿದೆ. ರಕ್ತದೊತ್ತಡ, ಹೃದ್ರೋಗಗಳ ಕಾರಣಗಳಿಂದ ಇದನ್ನು ತಿನ್ನುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂದಿನ ಪೀಳಿಗೆಗೆ ಅವನ್ನು ತಿನ್ನುವ ಕಾತರವೂ ಕಡಿಮೆಯಾಗುತ್ತಿದೆ. ಹಾಗಾಗಿ ಅಮ್ಮ ಮಾಡುತ್ತಿದ್ದ ಉಪ್ಪಿನಕಾಯಿಗೆ ಬೆಲೆಯೂ ಇಲ್ಲವಾಗಿದೆ. ಇದಕ್ಕೂ ಮೀರಿ ಅವರಿಗೆ ತಿನ್ನಬೇಕೆನಿಸಿದರೆ ಅಂಗಡಿಗಳಲ್ಲಿ ಸಿಗುವ ಬಾಟಲಿಗಳನ್ನು ಕೊಂಡುಕೊಳ್ಳುತ್ತಾರೆ.
“”ಸ್ವಲ್ಪ ಉಪ್ಪಿನಕಾಯಿ ತಗೊಂಡು ಹೋಗ್ರೋ” ಅಂತ ಅಮ್ಮ ಹೇಳಿದರೆ, “”ಅಷ್ಟೊಂದು ಕಷ್ಟಪಟ್ಟು ಉಪ್ಪಿನಕಾಯಿ ಉಪ್ಪಿನಕಾಯಿ ಅಂತ ಏಕೆ ಒದ್ದಾಡುತ್ತೀರಿ. ದುಡ್ಡು ಕೊಟ್ಟರೆ ಅಂಗಡಿಗಳಲ್ಲಿ ಯಾವುದೇ ತರಹದ್ದಾದರೂ ಸಿಗುವುದಿಲ್ಲವೇ?” ಅಂತ ಮಗ ಹೇಳಿಬಿಟ್ಟಾಗ ಧುತ್ತೆಂದು ಕೆಳಗೆ ಬಿದ್ದ ಅನುಭವ ಅಮ್ಮನಿಗೆ. ಎಲ್ಲರಲ್ಲೂ ಬೇಕಾದಷ್ಟು ಹಣ ಇದೆ. ಎಷ್ಟು ಹಣ ಕೊಟ್ಟಾದರೂ ಸರಿ ತೆಗೆದುಕೊಂಡಾರು. ಹಣದ ಮುಂದೆ ಅಮ್ಮನ ಕಾಳಜಿಯು ಗಣ್ಯ.
ತರಕಾರಿಗಳನ್ನು ತಿನ್ನಲೇಬೇಕೆಂಬ ಆರೋಗ್ಯದ ಕಾಳಜಿಯೂ ಉಪ್ಪಿನಕಾಯಿಯ ಬಯಕೆಯನ್ನು ಹಿಂದಕ್ಕೆ ನೂಕಿದೆ. ಇದರೊಂದಿಗೆ ಉಪ್ಪಿನಕಾಯಿಯ ನಂಟೂ ದೂರ ಸರಿಯುತ್ತಿದೆ. “”ಅವರಿಗೆ ಬೇಡವಾದರೆ ನಮಗೂ ಬೇಡ” ಎಂಬ ವೈರಾಗ್ಯ ಭಾವನೆ ಇಂದಿನ ಗೃಹಿಣಿಯರಲ್ಲಿ ಮೂಡುತ್ತಿದೆ. ಜೊತೆ ಜೊತೆಗೆ ಉಪ್ಪಿನಕಾಯಿಯೊಂದಿಗೆ ಭಾವನಾತ್ಮಕ ಸಂಬಂಧವೂ ಮಾಯವಾಗುತ್ತಿದೆ.
– ಪುಷ್ಪಾ ಎನ್.ಕೆ. ರಾವ್