ಸಾಗರ: ಶಿರಸಿಯ ನಂತರ ನಾಡಿನ ಎರಡನೇ ಅತಿ ದೊಡ್ಡ ಮಾರಿ ಜಾತ್ರೆ ನಿರ್ವಹಿಸುವ ಇಲ್ಲಿನ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಸರ್ವಸದಸ್ಯರ ಸಭೆಯು ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಗೊಂದಲದ ನಡುವೆ ನಡೆದು, ಹಾಲಿ ವ್ಯವಸ್ಥಾಪಕ ಸಮಿತಿಯೇ ಅಧಿಕಾರದಲ್ಲಿ ಮುಂದುವರೆಯುವ ನಿರ್ಣಯ ಕೈಗೊಳ್ಳಲಾಯಿತು. ಹೊಸದಾಗಿ ಸಮಿತಿಗೆ 15 ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಮೂಲಕ ಶಾಸಕರ ನೇತೃತ್ವದಲ್ಲಿ ಸದ್ಯದಲ್ಲಿಯೇ ಮತ್ತೊಂದು ಸಮಾಲೋಚನಾ ಸಭೆಯ ಕರೆಯುವ ನಿರ್ಧಾರವನ್ನೂ ಪ್ರಕಟಿಸಲಾಯಿತು.
ಸಭೆ ಆರಂಭದಿಂದಲೂ ಗೊಂದಲವೇ ಹೆಚ್ಚು ಕಂಡು ಬಂದಿತು. ಸಭೆಗೆ ಸದಸ್ಯರು ಅಲ್ಲದವರು ಬರುವ ಪ್ರಯತ್ನ ನಡೆಸಿದಾಗ ಪೊಲೀಸರ ಬಂದೋಬಸ್ತಿನಲ್ಲಿ ಅವರನ್ನು ತಡೆಯುವ ಪ್ರಯತ್ನ ನಡೆಯಿತು. ತಮಗೆ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡದಿರುವುದು ಮತ್ತು ಶಾಸಕರನ್ನು ಸಭೆಗೆ ಕರೆಯದೆ ಇರುವುದರ ವಿರುದ್ಧ ಕೆಲವರು ಧಿಕ್ಕಾರ ಸಹ ಕೂಗಿದರು.
ಹಿತರಕ್ಷಣಾ ಸಮಿತಿಯ ಆನಂದ್ ಮಾತನಾಡಿ, ಹಾಲಿ ಸಮಿತಿಯ ಬಗ್ಗೆ ಭ್ರಷ್ಟಾಚಾರ ಆರೋಪ ಇರುವುದರಿಂದ ಸಮಿತಿಯು ತನ್ನ ಸ್ಥಾನವನ್ನು ಬಿಟ್ಟುಕೊಟ್ಟು ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಪಾದಿಸಿದರೆ, ಹಾಲಿ ಸಮಿತಿಯ ಸಹ ಸಂಚಾಲಕ ಕೃಷ್ಣಮೂರ್ತಿ ಎಸ್.ವಿ. ಮತ್ತು ಪುರುಷೋತ್ತಮ್ ಸಭೆ ಒಪ್ಪಿಗೆ ಇದ್ದರೆ ಹೊಸ ಸಮಿತಿಯನ್ನು ಆಯ್ಕೆ ಮಾಡಬಹುದು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕಳೆದ ಮಾರಿಜಾತ್ರೆ ಸಂದರ್ಭದಲ್ಲಿ ಶಾಸಕರು ಅಭಿವೃದ್ಧಿಗಾಗಿ 1 ಕೋಟಿ ರೂ. ನೀಡಿದ್ದಾರೆ. ಇದರಿಂದ ರಸ್ತೆ, ಚರಂಡಿ, ಸ್ವಚ್ಛತೆಯಂತಹ ಕೆಲಸವನ್ನು ಕೈಗೊಂಡು, ಶಾಸಕರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಜಾತ್ರೆ ಮಾಡಲಾಗಿದೆ. ಆದರೆ ಸಭೆಗೆ ಶಾಸಕರನ್ನು ಕರೆಯದಿರುವುದು ಹಾಗೂ ಜಾತ್ರಾ ಯಶಸ್ಸಿಗೆ ಆಡಳಿತಾತ್ಮಕವಾಗಿ ಸಹಕಾರ ನೀಡುವ ಉಪವಿಭಾಗಾಧಿಕಾರಿಗಳನ್ನು ಕರೆಯದೆ ಇರುವುದು ಸರಿಯಲ್ಲ. ಜೊತೆಗೆ ಸಮಿತಿಯನ್ನು ವಜಾಗೊಳಿಸಿ ಟ್ರಸ್ಟ್ ಮಾಡುವ ಉದ್ದೇಶ ಬೇಡ ಎಂದು ಒತ್ತಾಯಿಸಿದರು.
ಪತ್ರಕರ್ತ ಎಂ.ರಾಘವೇಂದ್ರ ಮಾತನಾಡಿ, ದೇವಸ್ಥಾನದಲ್ಲಿ ಆಡಳಿತ ನಡೆಸುವವರ ಮೇಲೆ ಕಾನೂನಿನ ಹಿಡಿತ ಇರಲಿ ಎನ್ನುವ ಕಾರಣಕ್ಕೆ ಹಿಂದಿನ ಸರ್ವಸದಸ್ಯರ ಸಭೆಯಲ್ಲಿ ಟ್ರಸ್ಟ್ ಮಾಡುವ ನಿರ್ಣಯ ಕೈಗೊಳ್ಳಲಾಗಿದ್ದು, ಈಗಾಗಲೇ ಅದು ಜಿಲ್ಲಾ ನ್ಯಾಯಾಲಯದಲ್ಲಿ ಇದೆ. ದೇವಸ್ಥಾನದಲ್ಲಿ ಪಾರದರ್ಶಕತೆ ತರಲು ಟ್ರಸ್ಟ್ ಅಗತ್ಯ ಇದೆ ಎಂದು ಹೇಳಿದರು. ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಬಿ.ಗಿರಿಧರರಾವ್ ಮಾತನಾಡಿ, ದೇವಸ್ಥಾನವು ಎಲ್ಲ ಹಂತದಲ್ಲಿಯೂ ನಮ್ಮ ಅವಧಿಯಲ್ಲಿ ಅಭಿವೃದ್ಧಿ ಹೊಂದಿದೆ. ಹಾಲಿ ಸುಮಾರು ೫೦೦ ಜನ ಸದಸ್ಯರಿದ್ದು, ಟ್ರಸ್ಟ್ ರಚನೆ ನಂತರ ಹೊಸದಾಗಿ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಸದಸ್ಯತ್ವ ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ನಗರಸಭಾ ಸದಸ್ಯೆ ಎನ್.ಲಲಿತಮ್ಮ ಮಾತನಾಡಿ, ಮಾರಿಕಾಂಬಾ ಹೆಣ್ಣು ದೇವರಾಗಿದ್ದು ವ್ಯವಸ್ಥಾಪಕ ಸಮಿತಿಯಲ್ಲಿ ಮಹಿಳೆಯರು ಇಲ್ಲದೆ ಇರುವುದು ಅವಮಾನಕರ ಸಂಗತಿಯಾಗಿದೆ. ಹೊಸ ಸಮಿತಿ ರಚನೆ ಮಾಡುವಾಗ ಮಹಿಳಾ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದರು. ಸಭೆಯಲ್ಲಿ ಎಂ.ನಾಗರಾಜ್, ಈಶ್ವರ್, ತಾರಾಮೂರ್ತಿ, ನಾಗೇಂದ್ರ ಕುಮಟಾ ಇನ್ನಿತರರು ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಹಾಲಿ ಸಮಿತಿಯು ಮುಂದುವರೆಯಲಿದ್ದು, ಹೊಸದಾಗಿ 15 ಜನರನ್ನು ಸಮಿತಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಹೊಸ ಸಮಿತಿಯು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮುಂದಿನ ಕಾರ್ಯಯೋಜನೆ ರೂಪಿಸುವುದಾಗಿ ಘೋಷಣೆ ಮಾಡಿದರು.