Advertisement

ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ರದ್ದಾಗಬೇಕು, ನೂತನ ಸಮಿತಿ ಬರಬೇಕು ; ತೀವ್ರಗೊಂಡ ಆಗ್ರಹ

04:08 PM Jun 14, 2022 | Team Udayavani |

ಸಾಗರ: ಹಾಲಿ ಇರುವ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ರದ್ದಾಗಬೇಕು. ಸಮಿತಿ ನಡೆಸಿರುವ ಎಲ್ಲ ವ್ಯವಹಾರಗಳನ್ನು ಪರಿಣಿತ ಲೆಕ್ಕ ಪರಿಶೋಧಕರಿಂದ ಪುನಃ ಪರಿಶೀಲನೆ ನಡೆಸಬೇಕು. ಮಹಿಳೆಯರನ್ನು ಒಳಗೊಂಡ ನೂತನ ಸಮಿತಿ ಅಧಿಕಾರಕ್ಕೆ ಬರಬೇಕು. ಇಲ್ಲವಾದಲ್ಲಿ ಮಾರಿಕಾಂಬಾ ದೇವಸ್ಥಾನದ ಎದುರು ಮತ್ತು ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ ಮನೆ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಡಿ.ಆನಂದ್ ಎಚ್ಚರಿಕೆ ನೀಡಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಕ್ಕೆ ನೂತನ ಸಮಿತಿ ರಚಿಸುವಂತೆ ಒತ್ತಾಯಿಸಿ ಜೂ. 20ಕ್ಕೆ ಅಧ್ಯಕ್ಷ, ಕಾರ್ಯದರ್ಶಿ ಮನೆ ಎದುರು, ಜೂ. 21ರಿಂದ ದೇವಸ್ಥಾನದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

ಕಳೆದ 14 ವರ್ಷಗಳಿಂದ ಹಾಲಿ ವ್ಯವಸ್ಥಾಪಕ ಸಮಿತಿ ಆಡಳಿತ ನಡೆಸುತ್ತಿದೆ. ಅಧಿಕಾರ ಬಿಡಬೇಕಾದ ಸಂದರ್ಭ ಬಂದಾಗಲೆಲ್ಲಾ ಒಂದಿಲ್ಲೊಂದು ಕಾರಣ ಹೇಳಿ ಮುಂದೂಡುತ್ತಾ ಬಂದಿದ್ದಾರೆ. ಈಚೆಗೆ ನಡೆದ ಸರ್ವಸದಸ್ಯರ ಸಭೆ ಸಂದರ್ಭದಲ್ಲಿ ಸಹ ಲೆಕ್ಕಪತ್ರವನ್ನು ಸರಿಯಾಗಿ ಕೊಡದೆ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಸಭೆಯಲ್ಲಿ ಗೊಂದಲ ಸೃಷ್ಟಿಯಾದಾಗ ಶಾಸಕರನ್ನು ಸೇರಿ 18 ಜನ ಹೊಸಬರನ್ನು ಸೇರಿಸಿಕೊಂಡು ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಶಾಸಕರನ್ನು ಗೌರವಾಧ್ಯಕ್ಷರನ್ನಾಗಿ ಮಾಡಿದ್ದು ಬಿಟ್ಟರೆ, ಹೊಸ ಸದಸ್ಯರನ್ನು ಸೇರಿಸಿಕೊಳ್ಳದೆ ತಾವೇ ಅಧಿಕಾರದಲ್ಲಿ ಮುಂದುವರೆಯುವ ಪ್ರಯತ್ನವನ್ನು ವ್ಯವಸ್ಥಾಪಕ ಸಮಿತಿಯವರು ನಡೆಸುತ್ತಿರುವುದು ಖಂಡನೀಯ ಎಂದರು.

ಇದನ್ನೂ ಓದಿ : ಆಸ್ಪತ್ರೆ ಆಹಾರ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ; ತನಿಖೆಗೆ ಕಾಂಗ್ರೆಸ್ ಆಗ್ರಹ

ಹಾಲಿ ಇರುವ ವ್ಯವಸ್ಥಾಪಕ ಸಮಿತಿ ಅಧಿಕಾರ ಬಿಟ್ಟು ತೊಲಗಬೇಕು ಎಂದು ಹಿತರಕ್ಷಣಾ ಸಮಿತಿ ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಶಾಸಕರಿಗೆ, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳಿಗೆ, ತಹಶೀಲ್ದಾರ್ ಅವರಿಗೆ ಮನವಿ ನೀಡಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿ ನೇಮಕಕ್ಕೆ ಮುಂದಾಗಲು ಮನವಿ ಮಾಡಲಾಗಿದೆ. ಇದೀಗ ವ್ಯವಸ್ಥಾಪಕ ಸಮಿತಿಯವರು ಜುಲೈ ಕೊನೆವಾರ ಅಥವಾ ಆಗಸ್ಟ್ ಮೊದಲ ವಾರ ಸರ್ವಸದಸ್ಯರ ಸಭೆ ಕರೆದು ಲೆಕ್ಕಪತ್ರ ಮಂಡಿಸಿ, ಹೊಸ ಸಮಿತಿ ಆಯ್ಕೆ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ನಮಗೆ ಸಮಿತಿ ಮೇಲೆ ನಂಬಿಕೆ ಇಲ್ಲ ಎಂದರು.

Advertisement

ಹಿಂದೆ ಸಹ ಅನೇಕ ಬಾರಿ ಸರ್ವಸದಸ್ಯರ ಸಭೆ ಕರೆದು ಲೆಕ್ಕಪತ್ರ ಮಂಡಿಸುತ್ತೇವೆ ಎಂದು ಹೇಳಿದ್ದ ಸಮಿತಿ ತನ್ನ ಮಾತಿಗೆ ತಪ್ಪಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು ಮೂರು ದಿನಗಳ ಒಳಗೆ ಸರ್ವಸದಸ್ಯರ ಸಭೆ ತಿಳುವಳಿಕೆಯನ್ನು ದೇವಸ್ಥಾನದ ಎದುರು ಫ್ಲೆಕ್ಸ್ ಅಳವಡಿಸುವ ಮೂಲಕ ಸದಸ್ಯರಿಗೆ ತಿಳಿಯುವಂತೆ ಮಾಡಬೇಕು. ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಮೇಲೆ ದೊಡ್ಡಮಟ್ಟದ ಆರೋಪಗಳಿವೆ. ಈ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ. ಸರ್ವಸದಸ್ಯರ ಸಭೆ ಕುರಿತು ದೇವಸ್ಥಾನದ ಎದುರು ಫಲಕ ಅಳವಡಿಸಿ ಮಾಹಿತಿ ನೀಡದೆ ಹೋದಲ್ಲಿ ಉಗ್ರವಾದ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಕಾನೂನು ಸಲಹೆಗಾರ ವಿ.ಶಂಕರ್ ಮಾತನಾಡಿ, ಹಾಲಿ ವ್ಯವಸ್ಥಾಪಕ ಸಮಿತಿ ಪದೇಪದೇ ಮಾತು ತಪ್ಪುತ್ತಿದೆ. ಇದರಿಂದ ಸಮಿತಿಯನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ನಮ್ಮ ಹೋರಾಟ ಹತ್ತಿಕ್ಕಲು ಸಮಿತಿಯು ಹಿತರಕ್ಷಣಾ ಸಮಿತಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ನಾಲ್ಕು ವರ್ಷದಿಂದ ಸಮಿತಿ ಸುಳ್ಳು ಹೇಳಿಕೊಂಡು ಬರುತ್ತಿದೆ. ಸಮಿತಿಯನ್ನು ಟ್ರಸ್ಟ್ ಮಾಡಬೇಕೆಂದು ನಿರ್ಧರಿಸಲಾಗಿದ್ದು, ಹಾಲಿ ಸಮಿತಿ ತಮಗೆ ಬೇಕಾದ ರೀತಿಯಲ್ಲಿ ಬೈಲಾ ತಿದ್ದುಪಡಿ ಮಾಡಿಕೊಂಡಿದೆ. ಈ ಸಮಿತಿಯ ಅವಧಿಯಲ್ಲಿ ದೇವಸ್ಥಾನ ಅಭಿವೃದ್ಧಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೇವಲ ಅಧಿಕಾರದ ಆಸೆಗಾಗಿ ಕುರ್ಚಿ ಹಿಡಿದು ಕುಳಿತಿದ್ದಾರೆ ಎಂದರು.

ಗೋಷ್ಠಿಯಲ್ಲಿ ಟಿ.ರಾಮಪ್ಪ, ಗೋಪಾಲಕೃಷ್ಣ ಶ್ಯಾನಭಾಗ್, ಕೆ.ಸಿದ್ದಪ್ಪ, ನಿತ್ಯಾನಂದ ಶೆಟ್ಟಿ, ರಘುನಾಥ್, ಗುರುಬಸಪ್ಪ ಗೌಡ, ಕೊಟ್ರಪ್ಪ, ಶ್ರೀಧರ್, ಬಂಗಾರಪ್ಪ, ರಾಜು, ವಿ.ಶೇಟ್, ಜನಾರ್ಧನ್ ಆಚಾರಿ, ಆಟೋ ದಿನೇಶ್, ಈಶ್ವರ, ಪ್ರಜ್ವಲ್, ರಾಜು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next