ಯಲಬುರ್ಗಾ: ಕೋವಿಡ್ ಹಿನ್ನೆಲೆಯಲ್ಲಿ ಜನತೆ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಗಾಂಜಾ ಸೇವನೆ, ಮಾರಾಟ ಮಾತ್ರ ಎಗ್ಗಿಲ್ಲದೇ ಸಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ವಿದ್ಯಾರ್ಥಿಗಳು ಗಾಂಜಾ ಮಾಫಿಯಾಕ್ಕೆ ಬಲಿಯಾಗುತ್ತಿದ್ದಾರೆ. ಗಾಂಜಾ ಮಾಫಿಯಾ ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ದೇಶ, ರಾಜ್ಯಾದ್ಯಂತ ಡ್ರಗ್ಸ್ ದಂಧೆಯ ಕರಾಳ ಮುಖ ಕಳಚಿ ಬೀಳುತ್ತಿದೆ. ತಾಲೂಕಿನಲ್ಲಿಯೂ ಗಾಂಜಾ ಸೇವನೆ ಮತ್ತು ಮಾರಾಟಗಾರರ ಪತ್ತೆ ಕಾರ್ಯ ಬಿರುಸುಗೊಳ್ಳಬೇಕಿದೆ. ಗಾಂಜಾ ವ್ಯಸನಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕಿದೆ.
ಪ್ರಕರಣ ದಾಖಲು: ಗಾಂಜಾ ಮಾರಾಟ ಹಾಗೂ ಸೇವನೆ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯಚರಣೆ ನಡೆಸುತ್ತಿದೆ. ಕುಕನೂರು ಠಾಣಾ ವ್ಯಾಪ್ತಿಯಲ್ಲಿನ ತಳಕಲ್ಲ ಗ್ರಾಮದಲ್ಲಿ ಗಾಂಜಾ ಸೇವೆನೆ ಕುರಿತು ಪ್ರಕರಣ ದಾಖಲಿಸಿಕೊಂಡು 20 ಗ್ರಾಂ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಯಲಬುರ್ಗಾ, ಬೇವೂರು ಠಾಣಾ ವ್ಯಾಪ್ತಿಯ ಮಸಾರಿ ಜಮೀನುಗಳಲ್ಲಿ ವಿವಿಧ ಬೆಳೆಗಳ ಮಧ್ಯೆ ಗಾಂಜಾ ಬೆಳೆದು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸರಬರಾಜು ಮಾಡಲಾಗುತ್ತದೆ ಎಂಬ ಗುಮಾನಿ ಹಬ್ಬಿದೆ. ಪಕ್ಕದ ಜಿಲ್ಲೆಗಳಿಂದ ತಾಲೂಕಿಗೆ ಗಾಂಜಾ ಸರಬರಾಜು ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
2018ರಲ್ಲಿ ಪ್ರಕರಣ: ಯಲಬುರ್ಗಾ ಠಾಣಾ ವ್ಯಾಪ್ತಿಯ ಮಲಕಸಮುದ್ರ ಗ್ರಾಮದ ಜಮೀನಿನಲ್ಲಿ ಬೆಳೆಯಲಾಗಿದ್ದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದನ್ನು ಬಿಟ್ಟರೇ ಇದುವರೆಗೂ ಒಂದು ಪ್ರಕರಣ ಸಹ ದಾಖಲಾಗಿಲ್ಲ. ತಾಲೂಕಿನಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಪತ್ತೆ ಹಚ್ಚಲು ಮೂರು ತಂಡಗಳನ್ನು ರಚಿಸಲಾಗಿದೆ.
ಕುಕನೂರು, ಬೇವೂರು, ಯಲಬುರ್ಗಾ ಮೂರು ಠಾಣೆಗಳಲ್ಲಿ ಪತ್ಯೇಕ ತಂಡ ರಚಿಸಿ ಈ ಕುರಿತು ಕಾರ್ಯಾಚರಣೆ ನಡೆಸಲಾಗಿದೆ. ಈಗಾಗಲೇ ಕೆಲ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎನ್ನುತ್ತಾರೆ ಸಿಪಿಐ ಎಂ. ನಾಗರಡ್ಡಿ.
– ಮಲ್ಲಪ್ಪ ಮಾಟರಂಗಿ