ಸೊರಬ: ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಗಳು ದಿನಕ್ಕೊಂದು ತಿರುವು ಪಡೆಯುತ್ತಿರುವ ಸಂದರ್ಭದಲ್ಲಿಯೇ ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಜಿಲ್ಲಾ ಅಬಕಾರಿ ವಿಚಕ್ಷಣಾ ದಳದ ಪೊಲೀಸರು ಸುಮಾರು 5.50 ಲಕ್ಷ ಮೌಲ್ಯದ ಭಾರಿ ಪ್ರಮಾಣದ ಹಸಿ ಗಾಂಜಾ ಗಿಡಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಡಿಸಿ ಕ್ಯಾಪ್ಟನ್ ಜಿ.ಎ. ಅಜಿತ್ ಕುಮಾರ್ ನೇತೃತ್ವದ ತಂಡ ಕಣ್ಣೂರು ಗ್ರಾಮದ ಸರ್ವೆ ನಂ. 26ರ ಬಗರ್‌ಹುಕ್ಕುಂ ಜಮೀನಿನಲ್ಲಿ ಶುಂಠಿ ಮತ್ತು ಮೆಕ್ಕೆಜೋಳದ ಬೆಳೆಗಳ ನಡುವೆ ಬೆಳೆದಿದ್ದ 6 ರಿಂದ 8 ಅಡಿ ಎತ್ತರದ ಸುಮಾರು 200 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಗಂಗಾಧರಪ್ಪ, ಪರಶುರಾಮಪ್ಪ, ಹುಚ್ಚರಾಯಪ್ಪ ತಲೆ ಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಡ್ರಗ್ ನಶೆಯಲ್ಲಿ ತೇಲುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಿಶೋರ್ ಶೆಟ್ಟಿ ಸ್ನೇಹಿತೆ!
ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಡಿಸಿ ಕ್ಯಾಪ್ಟನ್ ಜಿ.ಎ. ಅಜಿತ್ ಕುಮಾರ್, ಅಬಕಾರಿ ಜಂಟಿ ಆಯುಕ್ತರ ಮತ್ತು ಅಬಕಾರಿ ಆಯುಕ್ತರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ತೊಲಗಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಕಾರ್ಯಪ್ರವೃತವಾಗಿದೆ. ಪ್ರತಿ ನಿತ್ಯ ಜಿಲ್ಲೆಯ ವಿವಿಧಡೆ ದಾಳಿ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಭೆ ನಡೆಸಿ ಸೂಚನೆಯನ್ನೂ ನೀಡಿದ್ದಾರೆ. ಉಪವಿಭಾಗಾಧಿಕಾರಿಯ ಮಟ್ಟದಲ್ಲಿ ಮೂರು ತಂಡಗಳನ್ನು ರಚಿಸಿ ದಾಳಿ ನಡೆಸಲಾಗುತ್ತಿದೆ. ಕೆಲವಡೆ ಪೊಲೀಸ್ ಇಲಾಖೆಯ ಜೊತೆಗೂಡಿ ಜಂಟಿ ದಾಳಿಯನ್ನು ಸಹ ನಡೆಸಲಾಗುತ್ತಿದೆ. ಕಣ್ಣೂರು ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ತಲೆ ಮರೆಸಿಕೊಂಡಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.
ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಡಿ.ಎನ್. ಹನುಮಂತಪ್ಪ, ಉಪ ನಿರೀಕ್ಷಕರಾದ ಪಿ. ಜಾನ್, ಜಿ. ಅಣ್ಣಪ್ಪ, ಅಬಕಾರಿ ರಕ್ಷಕರಾದ ಚಂದ್ರಪ್ಪ, ರಾಜಮ್ಮ, ಮುದಾಸಿರ್ ಆಹ್ಮದ್, ಗುರುಮೂರ್ತಿ ಇತರರು ಪಾಲ್ಗೊಂಡಿದ್ದರು.