Advertisement

ಗಾಂಜಾ ಸಾಗಾಟ: ನಾಲ್ವರ ಬಂಧನ

09:13 PM Aug 13, 2019 | Lakshmi GovindaRaj |

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದಿಂದ ರಾಷ್ಟ್ರೀಯ ಹೆದ್ದಾರಿ-7ರ ಮೂಲಕ ರಾಜಧಾನಿ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಚಿಕ್ಕಬಳ್ಳಾಪುರ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್‌ ನೇತೃತ್ವದ ತಂಡ, ಬರೋಬ್ಬರಿ 20 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಂಡಿದೆ.

Advertisement

ಬಂಧಿತ ಆರೋಪಿಗಳನ್ನು ನೆರೆಯ ಆಂಧ್ರಪ್ರದೇಶದ ಕದಿರಿ ತಾಲೂಕಿನ ವಂಚರೆಡ್ಡಿಪಲ್ಲಿ ಗ್ರಾಮದ ನಿವಾಸಿ ನಾರಾಯಣ ಬಿನ್‌ ನಾಗಪ್ಪ (38), ವಿಶಾಖಪಟ್ಟಣಂನ ರತ್ನಪೇಟೆ ಗ್ರಾಮದ ಪಿಂಡಿ ಅಪ್ಪಣ್ಣ ಬಿನ್‌ ಸಿಂಹಾಚಲಂ (32), ನಲ್ಲಗೊಂಡ ಗ್ರಾಮದ ತುರೇರಾಮ್‌ ಕೋಂ ನಾಗೇಶ್ವರರಾವ್‌ (25) ಹಾಗೂ ಕದಿರಿ ತಾಲೂಕಿನ ನಲ್ಲಗುಟ್ಟಪಲ್ಲಿ ಗ್ರಾಮದ ಅಂಜನೇಯಲು ಬಿನ್‌ ವೆಂಕಟರವಣ (27) ಎಂದು ಗುರುತಿಸಲಾಗಿದೆ.

ಚಿತ್ರಾವತಿ ಬಳಿ ಸೆರೆ: ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್‌ ನೇತೃತ್ವದಲ್ಲಿ ಪೊಲೀಸರ ತಂಡ ನಗರ ಹೊರ ವಲಯದ ಚಿತ್ರಾವತಿ ಸಮೀಪ ಐಎಂವಿ ಪ್ರಕರಣಗಳನ್ನು ದಾಖಲಿಸುವಾಗ ಬಾಗೇಪಲ್ಲಿ ಕಡೆಯಿಂದ ಬರುವ ವಾಹನಗಳನ್ನು ತಪಾಸಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ.

ಆಂಧ್ರ ಕಡೆಯಿಂದ ಬಂದ ಎಪಿ-02-ಟಿಸಿ-0051 ಆಟೋ ರಿಕ್ಷಾ ಮತ್ತು ಅದರ ಹಿಂಬದಿಯಲ್ಲಿ ಬಂದ ಎಪಿ39-ಎಕೆ-992 ಸಂಖ್ಯೆಯ ಟಿವಿಎಸ್‌ ಎಕ್ಸೆಲ್‌ ದ್ವಿಚಕ್ರವಾಹನ ಬಂದಿದ್ದು ಎರಡು ವಾಹನಗಳನ್ನು ಪೊಲೀಸರು ಅನುಮಾನ ಬಂದು ತಪಾಸಣೆ ನಡೆಸಿದಾಗ ಆರೋಪಿಗಳು ಮೂರು ಲಗೇಜ್‌ ಬ್ಯಾಗ್‌ಗಳಲ್ಲಿ ಸುಮಾರು 20 ಕೆ.ಜಿ. ತೂಕ ಇರುವ ಗಾಂಜಾ ಸೊಪ್ಪುನ್ನು ಕವರ್‌ಗಳಲ್ಲಿ ತುಂಬಿ ಅದರ ಮೇಲೆ ಇನ್ಸುಲೇಷನ್‌ ಟೇಪ್‌ನಿಂದ ಸುತ್ತಿ 9 ಬಂಡಲ್‌ಗ‌ಳು ಇಟ್ಟಿರುವುದು ಪತ್ತೆಯಾಗಿದೆ.

5 ಸಾವಿರಕ್ಕೆ ಖರೀದಿಸಿ 10 ಸಾವಿರಕ್ಕೆ ಮಾರಾಟ: ಸದ್ಯ ಗಾಂಜಾ ಸಾಗಾಟ ಜಾಲದಲ್ಲಿ ಪೊಲೀಸರ ಅತಿಥಿಗಳಾಗಿರುವ ಆಂಧ್ರ ಮೂಲದ ಅಸಾಮಿಗಳು, ಆಂಧ್ರಪ್ರದೇಶದ ವಿವಿಧೆಡೆಗಳಲ್ಲಿ ಕೆ.ಜಿ.ಗಾಂಜಾವನ್ನು 5 ಸಾವಿರ ರೂ.ಗೆ ಖರೀದಿ ಮಾಡಿ ಅದನ್ನು ಬೆಂಗಳೂರಿಗೆ ತಂದು 10 ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದಾರೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ತಿಳಿಸಿದ್ದಾರೆ.

Advertisement

ಆರೋಪಿಗಳಿಂದ ಪೊಲೀಸರು 2,200 ರೂ. ನಗದು, 4 ಮೊಬೈಲ್‌, ಒಂದು ದ್ವಿಚಕ್ರವಾಹನ, ಒಂದು ಆಟೋ ಜಪ್ತಿ ಮಾಡಿಕೊಂಡಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಹುಮಾನ ಘೋಷಿಸಿದ ಎಸ್ಪಿ: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ 20 ಕೆ.ಜಿ.ಯಷ್ಟು ಗಾಂಜಾವನ್ನು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿರುವ ಪೊಲೀಸ್‌ ಉಪಾಧೀಕ್ಷಕ ಪ್ರಭುಶಂಕರ್‌ ಹಾಗೂ ಅವರ ಸಿಬ್ಬಂದಿ ವಿ.ನಾರಾಯಣಸ್ವಾಮಿ, ಬಾಲಸುಬ್ರಹ್ಮಣ್ಯ, ಶಿವಪ್ಪ ಬ್ಯಾಕೋಡ್‌, ಪುಷ್ಪಲತಾ, ಶ್ರೀನಾಥ್‌, ಬಾಬು ಹಾಗೂ ಚಾಲಕ ಮೋಹನ್‌ ಕುಮಾರ್‌ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಸಂತೋಷ ಬಾಬು ನಗದು ಬಹುಮಾನ ಘೋಷಿಸಿದ್ದಾರೆ.

ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿದ್ದ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದು, ಅವರಿಂದ 20 ಕೆ.ಜಿ.ತೂಕದ ಗಾಂಜಾ ಸೊಪ್ಪು ಸೇರಿದಂತೆ 1 ದ್ವಿಚಕ್ರ ವಾಹನ, ಆಟೋ ರೀಕ್ಷಾ ಸೇರಿ 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
-ಕೆ.ಸಂತೋಷ ಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next