Advertisement

ಮೇರಿ ಕ್ಯೂರಿ: ಸಂಶೋಧನೆ ಹಾದಿಯಲ್ಲಿ…

02:22 PM Jul 03, 2021 | Team Udayavani |

ಅಗೆದಷ್ಟೂ ನಿಗೂಢವಾಗುತ್ತ ಸಾಗುವ ವೈಜ್ಞಾನಿಕ ಲೋಕವು ವಿಸ್ಮಯಗಳ ಆಗರ. ನಾವು ಏನನ್ನೋ ಆವಿಷ್ಕರಿಸಿದೆವು ಎಂದೆಣಿಸಿಕೊಳ್ಳುತ್ತಿರುವಾಗಲೇ ಇನ್ನೆಷ್ಟೋ ಉತ್ತರಗಳಿಲ್ಲದ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಈ ಬ್ರಹ್ಮಾಂಡದಲ್ಲಿ ಬುದ್ಧಿವಂತ ಎಂದುಕೊಳ್ಳುತ್ತಿರುವ ಮಾನವ ಸೃಷ್ಟಿಯ ಅದ್ಭುತಗಳನ್ನು ಬೆರಗು ಕಣ್ಣುಗಳಿಂದ ಸಂಶೋಧಿಸಿ ಅದೆಷ್ಟೋ ವಿಷಯಗಳನ್ನು ಕರಗತ ಮಾಡಿಕೊಂಡಿದ್ದಾನೆ. ತನ್ನ ಅನುಕೂಲಕ್ಕಾಗಿ ವಿಜ್ಞಾನ ಕ್ಷೇತ್ರವನ್ನು ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮುಂತಾದ ವಿಭಾಗಗಳನ್ನಾಗಿ ವಿಂಗಡಿಸಿ ಹೊಸ ಹೊಸ ಪ್ರಯೋಗಗಳಲ್ಲಿ ನಿರತನಾಗಿದ್ದಾನೆ. ಇಂತಹ ಸಾಹಸಕ್ಕೆ ಕೈ ಹಾಕಿ ಒಂದಲ್ಲ, ಎರಡಲ್ಲ ನೊಬೆಲ್‌ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟ ಪ್ರಥಮ ಮಹಿಳೆ ಮೇರಿಕ್ಯೂರಿ.

Advertisement

ಮೇರಿಕ್ಯೂರಿ ನವೆಂಬರ್‌ 7, 1867ರಂದು ಪೋಲೆಂಡ್‌ನ‌ ವಾರ್ಸಾದಲ್ಲಿ ಜನಿಸಿದರು. ಪ್ರತಿಭಾವಂತೆಯಾಗಿದ್ದ ಅವರು ಕಡು ಬಡತನದ ನಡುವೆಯೂ ಚಿನ್ನದ ಪದಕದೊಂದಿಗೆ ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದರು. 1891ರಲ್ಲಿ ಪ್ಯಾರಿಸ್‌ಗೆ ತೆರಳಿ ಅಲ್ಲಿ ನಿರಂತರವಾಗಿ ವೈಜ್ಞಾನಿಕ ಪ್ರಯೋಗಗಳಲ್ಲಿ ತೊಡಗಿಸಿಕೊಂಡರು. ಇದರ ಜತೆಗೆ ಉನ್ನತ ಪದವಿಗಳನ್ನೂ ಪೂರ್ಣಗೊಳಿಸಿದರು. ಇವರಿಗೆ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರದಲ್ಲಿ ಅತ್ಯಧಿಕ ಆಸಕ್ತಿಯಿತ್ತು.  ಆ ಆಸಕ್ತಿಯೇ ಅವರನ್ನು ವಿಕಿರಣಶೀಲತೆಯ ಬಗ್ಗೆ ತಿಳಿದು, ಅಧ್ಯಯನ ನಡೆಸಲು ಪ್ರೇರೇಪಿಸಿತು.  1895ರಲ್ಲಿ ಮೇರಿಕ್ಯೂರಿ ಫ್ರೆಂಚ್‌ ಭೌತಶಾಸ್ತ್ರಜ್ಞ ಪಿಯರೆ ಕ್ಯೂರಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರೂ ನೈಸರ್ಗಿಕ ವಿಜ್ಞಾನದ ವಿಷಯದಲ್ಲಿ ಬಹಳಷ್ಟು ಪ್ರಯೋಗಗಳನ್ನು ಮಾಡುತ್ತಿದ್ದುದರಿಂದ‌ ವಿಕಿರಣಶೀಲತೆಯ ಬಗ್ಗೆ ಇಬ್ಬರಿಗೂ ಮತ್ತಷ್ಟು ಸಂಶೋಧನೆ ಮಾಡಲು ಸಾಧ್ಯವಾಯಿತು. ಇವರಿಗೆ ಭೌತ ವಿಜ್ಞಾನಿ ಹೆನ್ರಿ ಬೆಕ್ವೆರಲ್‌ ಎಂಬವರು ಪ್ರೋತ್ಸಾಹ ನೀಡುವುದರೊಂದಿಗೆ ಅವರೂ ಪ್ರಯೋಗಗಳನ್ನು ಮಾಡತೊಡಗಿದರು. 1903ರಲ್ಲಿ ಕ್ಯೂರಿ ದಂಪತಿ ಹಾಗೂ ಹೆನ್ರಿ ಬೆಕ್ವೆರಲ್‌ ಭೌತವಿಜ್ಞಾನದ ನೊಬೆಲ್‌ ಪ್ರಸಸ್ತಿಯನ್ನು ಹಂಚಿಕೊಂಡರು. ಇದೇ ಸಮಯದಲ್ಲಿ ಪ್ಯಾರಿಸ್‌ ವಿವಿಯು ಮೇರಿಕ್ಯೂರಿ ಅವರಿಗೆ ಡಾಕ್ಟರೇಟ್‌ ಪದವಿಯನ್ನು ಪ್ರದಾನ ಮಾಡಿತು. ಲಂಡನ್‌ನ ರಾಯಲ್‌ ಇನ್ಸ್‌ಸ್ಟಿಟ್ಯೂಶನ್‌ ಕ್ಯೂರಿ ದಂಪತಿಯನ್ನು ವಿಕಿರಣಶೀಲತೆಯ ಬಗ್ಗೆ ಮಾಹಿತಿ ನೀಡಲು ಆಹ್ವಾನಿಸಿತು.

ಹೀಗೆ ಅವರ ಸಾಧನೆ ಮೇಲೇರುತ್ತಾ ಹೋದಂತೆ ಅನಿರೀಕ್ಷಿತ ಆಘಾತವೊಂದು ಎದುರಾಯಿತು. 1906ರಲ್ಲಿ ಪಿಯರೆ ಕ್ಯೂರಿ ಪ್ಯಾರಿಸ್‌ನಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ಕೆಲವು ಸಮಯ ದುಃಖತಪ್ತರಾಗಿದ್ದ ಮೇರಿಕ್ಯೂರಿ ಎದೆಗುಂದದೆ ಮತ್ತೆ ರಸಾಯನ ಶಾಸ್ತ್ರದತ್ತ ಗಮನ ಹರಿಸಿದರು. ಇದರಲ್ಲಿ ಅದ್ಭುತ ಸಾಧನೆ ಮಾಡಿದರು. ಈಗ ನಾವೆಲ್ಲರೂ ಅಧ್ಯಯನ ನಡೆಸುವ ಧಾತುಗಳ ಪಟ್ಟಿಯಲ್ಲಿ ಕಂಡು ಬರುವ ಪೊಲೋನಿಯಂ ಮತ್ತು ರೇಡಿಯಂ ಎಂಬ ಧಾತುವನ್ನು ಆವಿಷ್ಕರಿಸಿದವರು ಮೇರಿಕ್ಯೂರಿ. ರೇಡಿಯಂ ಅನ್ನು ಪ್ರತ್ಯೇಕಿಸಿ ಅದರ ಗುಣ ಧರ್ಮಗಳ ಬಗ್ಗೆ ಅಧ್ಯಯನ ನಡೆಸಿದ್ದಕ್ಕಾಗಿ 1911ರಲ್ಲಿ ರಸಾಯನಶಾಸ್ತ್ರದ ನೊಬೆಲ್‌ ಪ್ರಶಸ್ತಿಯೂ ದೊರೆಯಿತು. ಹೀಗೆ ವಿಜ್ಞಾನ ಕ್ಷೇತ್ರದಲ್ಲಿ ಎರಡು ನೊಬೆಲ್‌ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಯಾಗಿದ್ದಾರೆ ಮೇರಿಕ್ಯೂರಿ.

ಮೇರಿಕ್ಯೂರಿ ವಿವಾಹವಾಗಿ ಫ್ರೆಂಚ್‌ ನಾಗರಿಕರಾಗಿದ್ದರೂ ತನ್ನ ಪೋಲೆಂಡ್‌ನ‌ ಗುರುತನ್ನು ಮರೆತಿರಲಿಲ್ಲ. ಮಕ್ಕಳಿಗೆ ಪೋಲೆಂಡ್‌ ಭಾಷೆಯನ್ನು ಕಲಿಸುವುದರೊಂದಿಗೆ ತಾನು ಆವಿಷ್ಕರಿಸಿದ ಧಾತುವೊಂದಕ್ಕೆ ಪೊಲೋನಿಯಂ ಎಂಬ ಹೆಸರು ನೀಡಿದ್ದರು. ಇವರ ಮಾರ್ಗದರ್ಶನದಲ್ಲಿ ನಿಯೋಪ್ಲಾಸ್ಮ ಎಂಬ ರೋಗಕ್ಕೆ ಚಿಕಿತ್ಸೆಯನ್ನು ಪ್ರಥಮವಾಗಿ ಅಧ್ಯಯನ ಮಾಡಲಾಯಿತು. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಇವರು ಮೊಬೈಲ್‌ ರೇಡಿಯೋಗ್ರಫಿಯನ್ನು ಬಳಕೆಗೆ ತಂದುದು ಆರೋಗ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿತು. ಈ ಯುದ್ಧದ ಸಮಯದಲ್ಲಿ ಎಕ್ಸ್‌

Advertisement

ರೇ ಮೂಲಕ ಸುಮಾರು ಒಂದು ಮಿಲಿಯನ್‌ ಗಾಯಾಳು ಸೈನಿಕರಿಗೆ ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅವರು ಅತಿಯಾದ ವಿಕಿರಣಕ್ಕೆ ಮೈಯೊಡ್ಡಿದ್ದರಿಂದ 1934ರಲ್ಲಿ ಅಪ್ಲಾಸ್ಟಿಕ್‌ ಅನೀಮಿಯಾ ಎಂಬ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದರು. ವಿಜ್ಞಾನ ಲೋಕದಲ್ಲಿ ಇವರ ಅಪಾರ ಸಾಧನೆ ಪರಿಗಣಿಸಿ ಪೋಲೆಂಡ್‌ ಸರಕಾರ 2011ನೇ ಇಸವಿಯನ್ನು “ಇಯರ್‌ ಆಫ್ ಮೇರಿಕ್ಯೂರಿ’ ಎಂದು ಘೋಷಿಸಿತು.

ಮೇರಿಕ್ಯೂರಿ ಎಂಬ ಮಹಾನ್‌ ಪ್ರತಿಭೆ ಕಣ್ಮರೆಯಾದರೂ ಅವರ ಆವಿಷ್ಕಾರವು ಇಂದಿಗೂ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕ್ಯಾನ್ಸರ್‌ನಂತಹ ಮಾರಕ ರೋಗಗಳ ಚಿಕಿತ್ಸೆಯೂ ಮೇರಿಕ್ಯೂರಿ ಅವರ ಸಂಶೋಧನೆಯ ಫ‌ಲವಾಗಿ ಸಾದ್ಯವಾಗುತ್ತಿದೆ. ಮಾನವನ ಕುತೂಹಲವೇ ಮನುಕುಲದ ಉನ್ನತಿಗೆ ಬುನಾದಿ. ಮೇರಿಕ್ಯೂರಿ ಅವರಂತಹ ಮೇರು ಪ್ರತಿಭೆಗಳ ಅನನ್ಯ ಆವಿಷ್ಕಾರಗಳು ವಿಜ್ಞಾನ ಕ್ಷೇತ್ರದಲ್ಲಿ ಸದಾ ಉದಯಿಸಲಿ.

ಮೇರಿಕ್ಯೂರಿ ಬಗ್ಗೆ ಇನ್ನೊಂದಿಷ್ಟು… :

  • ಮೇರಿಕ್ಯೂರಿ ಅವರ ತಂದೆ-ತಾಯಿ ಶಿಕ್ಷಕರಾಗಿದ್ದರು. ಈ ಕಾರಣಕ್ಕಾಗಿ ಶಾಲೆಗೆ ಸೇರುವ ಮೊದಲೇ ಅವರಿಗೆ ಓದು-ಬರಹ ಬರುತ್ತಿತ್ತು.
  • ಮೇರಿಯ ತಂದೆ ಗಣಿತ ಮತ್ತು ಭೌತಶಾಸ್ತ್ರದ ಅಧ್ಯಾಪಕರಾ ಗಿದ್ದರು. ತಾಯಿ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದರು.
  • ಮೇರಿ ಬಾಲ್ಯದಲ್ಲಿಯೇ ಬಹಳ ಚುರುಕಾಗಿದ್ದು, ಕಲಿಕೆಯಲ್ಲಿ ಸದಾ ಮುಂದಿದ್ದರು. ಉತ್ತಮ ಜ್ಞಾಪಕ ಶಕ್ತಿ ಹೊಂದಿದ್ದು, ವಿದ್ಯಾಭ್ಯಾಸದಲ್ಲಿ ಕಠಿನ ಪರಿಶ್ರಮ ಪಡುತ್ತಿದ್ದರು.
  • 5 ಮಂದಿ ಮಕ್ಕಳ ಪೈಕಿ ಮೇರಿ ಕಿರಿಯರು.
  • ಮೊದಲ ಹೆಸರು ಮೇರಿಯಾ ಸ್ಕ್ಯೊಡೊವಾಸ್ಕ. ನಿಕ್‌ ನೇಮ್‌ ಮಾನ್ಯ ಎಂದಾಗಿತ್ತು. ಮದುವೆಯಾದ ಬಳಿಕ ಹೆಸರು ಮೇರಿಕ್ಯೂರಿ ಎಂದಾಯಿತು.

ಬಾಲ್ಯದ ಕಠಿನ ಸನ್ನಿವೇಶ :

  • ಮೇರಿ ಚಿಕ್ಕವರಿದ್ದಾಗ ರಷ್ಯಾ ಪೋಲೆಂಡನ್ನು ವಶಪಡಿಸಿಕೊಂಡಿತು. ಆದ್ದರಿಂದ ಪೋಲೆಂಡ್‌ನ‌ ಭಾಷೆಯನ್ನು ಓದಲು, ಬರೆಯಲು ನಿರ್ಬಂಧ ಹೇರಲಾಯಿತು. ಇದರಿಂದ ಮೇರಿಯ ತಂದೆ ತನ್ನ ವೃತ್ತಿಯನ್ನು ಕಳೆದುಕೊಳ್ಳಬೇಕಾಯಿತು.
  • ಮೇರಿ 10 ವರ್ಷದ ಬಾಲಕಿಯಿದ್ದಾಗ ಅವಳ ಹಿರಿಯ ಸಹೋದರಿ ಜೋಫಿಯಾ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದಳು. ಅದಾಗಿ 2 ವರ್ಷಗಳ ಬಳಿಕ ತಾಯಿಯನ್ನು ಟಿಬಿ ಬಲಿ ತೆಗೆದುಕೊಂಡಿತು.
  • ಪೋಲೆಂಡ್‌ನ‌ಲ್ಲಿ ಉನ್ನತ ಶಿಕ್ಷಣಕ್ಕೆ ಮಹಿಳೆಯರಿಗೆ ಅವಕಾಶವಿರಲಿಲ್ಲ. ಹಾಗೆಂದು ದೂರದ ಪ್ಯಾರಿಸ್‌ಗೆ ಹೋಗಿ ವಿವಿಗೆ ಸೇರಲು ಮೇರಿಯ ಬಳಿ ಹಣವಿರಲಿಲ್ಲ. ಹಾಗಾಗಿ ಅಕ್ಕ ಬ್ರೋವಿಸ್ಲಾವಾ ಶಿಕ್ಷಣಕ್ಕೆ ಸಹಕರಿಸಿದಳು. 6 ವರ್ಷಗಳ ಬಳಿಕ ಅಕ್ಕ ವೈದ್ಯೆಯಾದಳು. ಅನಂತರ ಅವಳ ಸಹಕಾರದಿಂದ ಮೇರಿ ತನ್ನ ಶಿಕ್ಷಣವನ್ನು ಮುಂದುವರಿಸಿದಳು.

ಕೆಲವು ಕುತೂಹಲದಾಯಕ ಸಂಗತಿಗಳು :

  • ಮೇರಿ ಪತಿಯ ಮರಣದ ಬಳಿಕ ಭೌತಶಾಸ್ತ್ರದ ಪ್ರೊಫೆಸರ್‌ ಆಗಿ ಸಾರ್ಬೊನ್‌ ವಿವಿಗೆ ಸೇರಿದರು. ಇವರು ಈ ಸ್ಥಾನವನ್ನು ಅಲಂಕರಿಸಿದ ಪ್ರಥಮ ಮಹಿಳೆ.
  • ಮೇರಿಯು ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟಿನ್‌ರೊಂದಿಗೆ ಉತ್ತಮ ಗೆಳೆತನ ಹೊಂದಿದ್ದರು.
  • ಮೇರಿಯ ಹಿರಿ ಮಗಳು ಐರಿನ್‌ ಅಲ್ಯೂಮಿನಿಯಂ ಮತ್ತು ವಿಕಿರಣಶೀಲತೆಯ ಅಧ್ಯಯನಕ್ಕಾಗಿ ರಸಾಯನ ಶಾಸ್ತ್ರದ ನೊಬೆಲ್‌ ಪಡೆದುಕೊಂಡಿದ್ದರು.
  • ಮೇರಿಯ ಎರಡನೇ ಮಗಳು ಈವ್‌ ತನ್ನ ತಾಯಿಯ ಜೀವನದ ಬಯೋಗ್ರಫಿಯನ್ನು ಬರೆದರು.
  • ಮೇರಿ ಪ್ಯಾರಿಸ್‌ನಲ್ಲಿ “ದ ಕ್ಯೂರಿ ಇನ್‌ಸ್ಟಿಟ್ಯೂಟ್‌’ ಅನ್ನು 1921ರಲ್ಲಿ ಸ್ಥಾಪಿಸಿದರು. ಇದು ಇಂದಿಗೂ ಪ್ರಮುಖ ಕ್ಯಾನ್ಸರ್‌ ಸಂಬಂಧಿತ ಸಂಶೋಧನೆಗಳ ಕೇಂದ್ರವಾಗಿದೆ.

ಅಭಿಜ್ಞಾ ಲಕ್ಷ್ಮೀ

ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next