Advertisement

ಮಂಜಮ್ಮ ಜೋಗತಿ ಜಾನಪದ ಅಕಾಡೆಮಿ ಅಧ್ಯಕ್ಷೆ

03:48 PM Oct 16, 2019 | Naveen |

„ಎಂ.ಸೋಮೇಶ ಉಪ್ಪಾರ
ಮರಿಯಮ್ಮನಹಳ್ಳಿ:
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಪಟ್ಟಣದ ಜಾನಪದ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಆಯ್ಕೆಯಾಗಿದ್ದಾರೆ. ಈ ಮೂಲಕ ಪಟ್ಟಣದ ಎಲ್ಲಾ ಕಲಾಬಳಗದಲ್ಲಿ ಸಂತಸ ಮೂಡಿದೆ. ಕರ್ನಾಟಕದ ಒರ್ವ ತೃತೀಯ ಲಿಂಗಿಯವರಿಗೆ ಅಕಾಡೆಮಿಯ ಅಧ್ಯಕ್ಷೆ ಸ್ಥಾನ ದೊರಕಿರುವುದು ತೃತೀಯ ಲಿಂಗಿ ಸಮುದಾಯದವರ ಆತ್ಮಸ್ಥೈರ್ಯ ಹೆಚ್ಚಿಸಿದೆ.

Advertisement

ಮಂಜಮ್ಮ ಜೋಗತಿ ಬಡತನದ ಬವಣೆಯಲ್ಲಿ ಬೆಳೆದು ಮಂಗಳಮುಖೀಯಾಗಿ ಕುಟುಂಬದ ಬಹಿಷ್ಕಾರಕ್ಕೆ ಒಳಗಾಗಿ ಜೋಗತಿಯಾಗಿ ಗೊಲ್ಲರಹಳ್ಳಿಯ ಕಾಳವ್ವ ಜೋಗತಿಯ ಶಿಷ್ಯೆಯಾಗಿ ಜೋಗಕಲೆ ಕಲೆತು. ಇಂದು ರಾಜ್ಯ ಹೊರರಾಜ್ಯಗಳಲ್ಲಿಯೂ ಬಹುದೊಡ್ಡ ಹೆಸರು ಮಾಡಿದ ಕಲಾವಿದೆಯಾಗಿದ್ದಾರೆ.

ಮಂಜಮ್ಮ ಜೋಗತಿ ಮತ್ತು ಅವರ ತಂಡದವರು ಜೋಗತಿ ನೃತ್ಯ, ಯಲ್ಲಮ್ಮನ ನಾಟಕ, ಪ್ರದರ್ಶನ ಮಾಡುತ್ತಾ ಗ್ರಾಮೀಣ ರಂಗಭೂಮಿಗೆ ಒಂದು ಹೊಸ ಪರಿಭಾಷೆ ಬರೆದಿದ್ದಾರೆ. ಡಾ.ಕೆ.ನಾಗತರತ್ನಮ್ಮ ಅವರೊಂದಿಗೆ ಕೈಜೋಡಿಸಿ ಪೌರಾಣಿಕ ನಾಟಕ ಸಾಮಾಜಿಕ ನಾಟಕಗಳಲ್ಲಿಯೂ ಅಭಿನಯಿಸುವ ಮೂಲಕ ಮಂಜಮ್ಮ ಜೋಗತಿ ಶಕ್ತಿಮೀರಿ ಬೆಳೆದು ನಿಂತಿದ್ದಾರೆ.

ಹೇಮರೆಡ್ಡಿ ಮಲ್ಲಮ್ಮ, ಭಸ್ಮಾಸುರ, ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಮಂಜಮ್ಮ ಜೋಗತಿ ಅವರು ಜೋಗತಿ ಕಲೆಯಲ್ಲಿ ರಾಜ್ಯಾದ್ಯಾಂತ ಹೆಸರು ಮಾಡಿದ ಕಲಾವಿದೆಯಾಗಿ ಬೆಳೆದವರು. ಡಾ.ಸೊಬಟಿ ಚಂದ್ರಪ್ಪ ಅವರು ಬರೆದ ಮಂಜಮ್ಮ ಜೋಗತಿಯ ಆತ್ಮಕಥೆಯು ಇತ್ತೀಚೆಗೆ ತೆಲುಗಿನ ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದೆ. ಇತ್ತೀಚೆಗಷ್ಟೆ ಮಾತಾ ಮಂಜಮ್ಮ ಜೋಗತಿ ಅವರ ಆತ್ಮಕಥನ ವಿಷಯವನ್ನು ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ಮಹಾವಿದ್ಯಾಲಯದ ಬಿಎ 5ನೇ ಸೆಮಿಸ್ಟರ್‌ ಕನ್ನಡ ಪಠ್ಯಪುಸ್ತಕದಲ್ಲಿ ಅರಿವು-5 ಎನ್ನುವ ವಿಷಯವನ್ನು 2019ರಿಂದ 2022ರ ವರೆಗೂ ವಿದ್ಯಾರ್ಥಿಗಳು ಅಭ್ಯಸಿಸಲಿದ್ದಾರೆ.

ಮಂಜಮ್ಮ ಜೋಗತಿಯ ಕಲೆಯನ್ನು ಅರಸಿ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶ್ರೀತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ, ಸಮಾಜಸಖೀ ಪ್ರಶಸ್ತಿ, ವಾವ್‌ ಅವಾರ್ಡ್‌, ಟಿ.ಆರ್‌.ಟಿ. ಕಲಾಪ್ರಶಸ್ತಿ
ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ದೊರೆತಿವೆ.

Advertisement

ಈಗ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಮತ್ತಷ್ಟು ಜವಾಬ್ದಾರಿಗಳು ಅವರ ಹೆಗಲ ಮೇಲಿದೆ. ಸ್ವಂತ ಸೂರು ಇಲ್ಲ: ಮಾತಾ ಮಂಜಮ್ಮ ಜೋಗತಿ ಜಾನಪದಕಲೆಯಲ್ಲಿ ಇಷ್ಟೆಲ್ಲಾ ಬೆಳೆದರೂ ಮಂಜಮ್ಮ ಜೋಗತಿಗೆ ವಾಸಿಸಲು ಸ್ವಂತ ಸೂರು ಇಲ್ಲವಾಗಿದೆ. ಆಕೆಯ ಬಳಿ ಒಬ್ಬ ವೃದ್ಧೆ, ಮೂವರು ಅನಾಥ ಮಕ್ಕಳು ಅಲ್ಲದೇ ಜೋಗತಿ ಗೌರಮ್ಮ ಇವರಿಗೆಲ್ಲಾ ತಾನೇ ಆಶ್ರಯ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next