Advertisement
ಜಮಖಂಡಿ ತಾಲೂಕಿನ ತೇರದಾಳದ ಸಾವಯವ ಕೃಷಿಕ ಧರೆಪ್ಪ ಕಿತ್ತೂರ ತಮ್ಮ 20 ಗುಂಟೆ ಭೂಮಿಯಲ್ಲಿ ಸೇವಂತಿಗೆ ತಳಿ “ಮಾರಿಗೋಲ್ಡ್’ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಾಡಿರುವ ಯಶಸ್ವೀ ಪ್ರಯೋಗಗಳಿಗಾಗಿ ಕಿತ್ತೂರ ಅವರಿಗೆ ಈವರೆಗೆ ಹಲವಾರು ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿವೆ.
ಮೊದಲು ನೆಲ ಉಳುಮೆ ಮಾಡುವ ಮೂಲಕ ಅದನ್ನು ಹದಗೊಳಿಸಿದರು. ತಿಪ್ಪೆ ಗೊಬ್ಬರ, ಕುರಿ ಗೊಬ್ಬರ ಮತ್ತು ಬೇವಿನ ಹಿಂಡಿ ಮಣ್ಣಿಗೆ ಸೇರಿಸಿ 3 ಅಡಿ ಅಗಲ, 1 ಅಡಿ ಎತ್ತರದ ಅಳತೆಯ ಮಡಿ ತಯಾರಿಸಿಕೊಂಡರು. ರೂ. 1.5/ಸಸಿ ದರದಲ್ಲಿ ತಮಿಳುನಾಡಿನ ನರ್ಸರಿಯಿಂದ ಸಸಿಗಳನ್ನು ತರಿಸಿಕೊಂಡು, 20 ಗುಂಟೆ ಜಮೀನಿನಲ್ಲಿ ನೆರಳು ಪರದೆ ಮಾದರಿಯಲ್ಲಿ 10,000 ಸಸಿಗಳನ್ನು ನಾಟಿಮಾಡಿದರು.
Related Articles
Advertisement
ನಾಟಿ ಮಾಡಿದ ಮೇಲೆ ಕಳೆ ನಿರ್ವಹಣೆ ಮಾಡಿ, 30 ದಿನಗಳ ನಂತರ ತುದಿ ಚಿವುಟಿರುವುದರಿಂದ, ಸಸಿಗಳು ಕವಲೊಡೆದು, ಮೊಗ್ಗುಗಳ ಸಂಖ್ಯೆ ಕಣ್ಣು ಕುಕ್ಕುವಂತಿದೆ. ಹೂವಿನ ಭಾರ ತಡೆಯಲು ಗಿಡದ ಆಸರೆಗಾಗಿ ಕೋಲು ಮತ್ತು ತಂತಿಯಿಂದ ಕಟ್ಟಿದ್ದಾರೆ. ರೋಗಪೀಡಿತ, ಮಣ್ಣಿಗೆ ಸಮೀಪದ ಗಿಡದ ಎಲೆಗಳನ್ನು ಆಗಾಗ ಕಿತ್ತು ಹಾಕಿದ್ದರಿಂದ ರೋಗ ರಹಿತ ಬೆಳೆ ಪಡೆದಿದ್ದಾರೆ.
ರಸ ಹೀರುವ ಕೀಟಗಳ ನಿರ್ವಹಣೆಗೆ ಹಳದಿ ಮತ್ತು ನೀಲಿ ಅಂಟಿನ ಬಲೆಗಳನ್ನು ಬಳಸಿದ್ದಾರೆ. ಜಿಗಿ ಹುಳುವಿನ ಬಾಧೆ ಕಂಡುಬಂದಿದ್ದು, ಆಗ ಹವಾಮಾನಕ್ಕೆ ತಕ್ಕಂತೆ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಕೀಟನಾಶಕವನ್ನು ಸಿಂಪರಣೆ ಮಾಡಿ ಹತೋಟಿಗೆ ತಂದಿದ್ದಾರೆ. ನೆಟ್ ಹೌಸ್ ಮೂಲಕ ಬೆಳೆಯುವುದರಿಂದ ರೋಗಗಳ ಬಾಧೆಯೂ ಕಡಿಮೆಯಾಗಿದೆ.
ಈಗಾಗಲೇ ಹೂವಿನ ಮಾರಾಟ ಶುರುವಾಗಿದ್ದು, ಪ್ರತಿ ಗಿಡಕ್ಕೆ 0.75 ಕಿ.ಗ್ರಾಂ ನಂತೆ ಇಳುವರಿ ಸಿಗುತ್ತಿದೆ. ಸ್ಥಳೀಯ ಹಾಗೂ ಮುಂಬೈ ಮಾರುಕಟ್ಟೆಗೆ ಹೂ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆ ದರ ಕಿ.ಗ್ರಾಂಗೆ 100 ರಿಂದ 120 ರೂ.ನಂತೆ ಎರಡುಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಕೇವಲ 20 ಗುಂಟೆಯಲ್ಲಿ ಎರಡು ಲಕ್ಷ ಲಾಭ ಎಂದರೆ ಹುಡುಗಾಟವೇ?
* ಕಿರಣ ಶ್ರೀಶೈಲ ಆಳಗಿ, ಬನಹಟ್ಟಿಮಾಹಿತಿಗೆ: 9916238273