Advertisement

Davanagere: ಮಹಿಷಮರ್ದನ ರೀತಿಯಲ್ಲೇ ರಾಜ್ಯ ಸರ್ಕಾರದ ಮರ್ದನ: ರೇಣುಕಾಚಾರ್ಯ

06:44 PM Oct 12, 2024 | Team Udayavani |

ದಾವಣಗೆರೆ: ಮಹಿಷಾಸುರ ಮರ್ದನ ರೀತಿಯಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ಮರ್ದನವಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (MP Renukacharya) ಭವಿಷ್ಯ ನುಡಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರೂ ಆಪರೇಷನ್ ಕಮಲ ಮಾಡುವುದೇ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಜಗಳ ಮತ್ತು ಸ್ವಯಂಕೃತ ಅಪರಾಧದಿಂದಲೇ ಪತನವಾಗುತ್ತದೆ ಎಂದರು.

ಮುಡಾ ಹಗರಣದ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್‌ನವರೇ ಮುಖ್ಯಮಂತ್ರಿ ಕುರ್ಚಿ ಮೇಲೆ ಟವೆಲ್ ಹಾಕಿದ್ದಾರೆ. ಡಾ| ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಮಹತ್ವಾಕಾಂಕ್ಷಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದಾರೆ. ರಾಜ್ಯ ಸರ್ಕಾರ ತಾನೇ ತಾನಾಗಿ ಪತನವಾಗಲಿದೆ ಎಂದು ತಿಳಿಸಿದರು.

ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳುತ್ತಿರುವಂತೆ ಯಾವಾಗಲೂ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಯೋಜನೆಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್ ಅವರಂತಹ ಹಿರಿಯ ಶಾಸಕರೇ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಬೇಸರಗೊಂಡಿದ್ದಾರೆ. ಇನ್ನು ಕೆಲವು ಶಾಸಕರು, ಕಾಂಗ್ರೆಸ್ ಟಿಕೆಟ್‌ನಿಂದ ಎಲೆಕ್ಷನ್ ನಿಲ್ಲುವುದಿಲ್ಲ ಎಂಬುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚಲು ಪ್ರಯತ್ನ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದಂತಹವರ ವಿರುದ್ಧ ಬಿಜೆಪಿ ಆಡಳಿತದಲ್ಲಿ ದಾಖಲಿಸಿದ್ದ ಮೊಕದ್ದಮೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆದಿದೆ. ರಾಜ್ಯದಲ್ಲಿ ದೇಶದ್ರೋಹ ಮಾಡಿದಂತಹ ಸರ್ಕಾರ ಆಡಳಿತ ಮಾಡುತ್ತಿದೆ. ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ತಿಳಿಸಿದರು.

Advertisement

ಸಿದ್ದರಾಮಯ್ಯ ರಾಜೀನಾಮೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಭಿಮಾನದ ರಾಜಕಾರಣ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್, ಜನಪ್ರತಿನಿಧಿಗಳ ನ್ಯಾಯಾಲಯ ಜೊತೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರು ತಾವೇ ತಾವಾಗಿ ರಾಜೀನಾಮೆ ನೀಡುತ್ತಾರೆ. ಅವರು ರಾಜೀನಾಮೆ ನೀಡಿದರೆ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next