ಗುಳೇದಗುಡ್ಡ: ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಗರದಲ್ಲಿ ಶನಿವಾರ ಘೋಷದೊಂದಿಗೆ ಘನವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು.
ಪಟ್ಟಣದ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದಿಂದ ಮಧ್ಯಾಹ್ನ 3.45 ಗಂಟೆಗೆ ಆರಂಭಗೊಂಡ ಪಥಸಂಚಲನ ನಗರದ ಕೆಳಗಿನ ಮಾರ್ಕೆಟ್, ಪವಾರ ಕ್ರಾಸ್, ಪುರಸಭೆ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಗುಗ್ಗರಿ ಪೇಟೆ, ಸಾಲೇಶ್ವರ ದೇವಸ್ಥಾನ, ಕಮತಗಿ ರಸ್ತೆ ಮೂಲಕ ಭಂಡಾರಿ ಹಾಗೂ ರಾಠಿ ಕಾಲೇಜು ಮೈದಾನ ತಲುಪಿತು.
ಪಥಸಂಚಲನದಲ್ಲಿ ಪ್ರಾಥಮಿಕ ಶಿಕ್ಷಾವರ್ಗದಲ್ಲಿ ಭಾಗವಹಿಸಿದ ಸ್ವಯಂಸೇವಕರು, ನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿದ ಗಣವೇಷಧಾರಿ ಸ್ವಯಂಸೇವಕರು, ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು.
ನಗರದ ಕಟ್ಟಡಗಳ ಮೇಲೆ ಭಗವಾಧ್ವಜ ರಾರಾಜಿಸುತ್ತಿದ್ದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು. ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀ, ಒನಕೆ ಓಬವ್ವ, ಭಗತ್‌ಸಿಂಗ್, ಶ್ರೀರಾಮ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನವನ್ನು ಸ್ವಾಗತಿಸಿದರು. ಪಟಾಕಿ ಸಿಡಿಸಿ ಪಥಸಂಚಲನಕ್ಕೆ ಸಂಭ್ರಮದ ಸ್ವಾಗತ ನೀಡಲಾಯಿತು.
ಮಳೆಯಲ್ಲಿಯೇ ಸಾಗಿದ ಪಥಸಂಚಲನ: ಜೋರು ಮಳೆಯಲ್ಲೂ ಸ್ವಯಂ ಸೇವಕರು ಜಗ್ಗದೇ ಗುಡುಗು ಮಿಂಚಿನೊಂದಿಗೆ ಸುರಿದ ಭಾರೀ ಮಳೆಯ ನಡುವೆಯ ಹೆಜ್ಜೆ ಹಾಕಿದರು. ಪಥಸಂಚಲನ ಮುಗಿಯುವ ವರೆಗೂ ಮಳೆ ಸುರಿಯುತ್ತಲೇ ಇತ್ತು. ರಸ್ತೆಯುದ್ದಕ್ಕೂ ಹಾಕಿದ್ದ ರಂಗೋಲಿ ಮಳೆಗೆ ಕರಗಿಹೋಯಿತು.
ಕಲ್ಯಾಣ ಮರಳಿ, ವಿಠ್ಠಲ ಪತ್ತಾರ, ಈರಣ್ಣ ಕಂಠಿ, ಬಸವರಾಜ ಕುಂಬಾರ, ವಿವೇಕಾನಂದ ದೇವಾಂಗಮಠ, ಬಸವರಾಜ ಒಣರೊಟ್ಟಿ, ಮಾಜಿ ಶಾಸಕ ರಾಜಶೇಖರ ಶೀಲವಂತ. ಪೋಲಿಸಪ್ಪ ರಾಮದುರ್ಗ, ರವಿ ಶೇಬಿನಕಟ್ಟಿ, ಸುಧೀರ ಗುಡ್ಡದ, ಸಿದ್ದು ಅರಕಾಲಚಿಟ್ಟಿ, ಶಂಕರ ಕಾಟವಾ, ಸಂಜಯ ಕಾರಕೂನ, ಭುವನೇಶ ಪೂಜಾರ, ಪ್ರಕಾಶ ರೋಜಿ, ಪ್ರವೀಣ ದೇವಗಿರಿಕರ, ಮಹಾದೇವ ಜಗತಾಪ, ಮುತ್ತು ಚಿಕ್ಕನರಗುಂದ, ಮಲ್ಲಿಕಾರ್ಜುನ ಶೀಲವಂತ, ಕಮಲು ಮಾಲಪಾಣಿ, ಅತ್ರೇಶ ದೊಡಮನಿ, ಆರ್.ಎಸ್.ಜಿರ್ಲಿ, ಜ್ಞಾನೇಶ್ವರ ಬೊಂಬಲೇಕರ, ವಿಜಯ ಕವಿಶೆಟ್ಟಿ, ಪುರುಷೋತ್ತಮ ಪಸಾರಿ, ಮಹೇಶ ಸೂಳಿಭಾವಿ. ಶಿವು ಬಾದವಾಡಗಿ, ಚೇತನ ಮಂಗಳಗುಡ್ಡ ಪಥಸಂಚಲನದಲ್ಲಿ ಭಾಗವಹಿಸಿದ್ದರು.