ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲು ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಸರ್ಕಾರ ನೀಡಿದ್ದ ಗಡುವು ಮೀರಿದೆ. ಹೀಗಾಗಿ ಜೂ.27ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಲಿಂಗಾಯತರಲ್ಲಿ ಶೇ.80ರಷ್ಟಿರುವ ಪಂಚಮಸಾಲಿ ಸಮುದಾಯ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷ ಬೆಂಬಲಿಸುತ್ತ ಬಂದಿದೆ. ಮೀಸಲು ಸೌಲಭ್ಯ ಕಲ್ಪಿಸುವ ಭರವಸೆಯೊಂದಿಗೆ ನಮ್ಮ ಸಮಾಜ ದಿಕ್ಕು ತಪ್ಪಿಸುತ್ತ ಬರಲಾಗಿದೆ. ಇಷ್ಟಕ್ಕೂ ನಾವು ಸಮಾಜದ ಹಿಂದುಳಿದ ಬಡ ಸಮುದಾಯ ಮಕ್ಕಳಿಗೆ ಮೀಸಲು ಸೌಲಭ್ಯ ಕೇಳುತ್ತಿದ್ದೇಯೇ ಹೊರತು ಮುಖ್ಯಮಂತ್ರಿ ಕುರ್ಚಿಯನ್ನಲ್ಲ ಎಂದರು.
ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಭರವಸೆ ನೀಡಿದ್ದರು. ಅವರ ಮಾತಿನ ಮೇಲೆ ವಿಶ್ವಾಸ ಇರಿಸಿ ಹೋರಾಟ ಹಿಂಪಡೆದಿದ್ದೆವು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆಯಲಿಲ್ಲ. ಅವರ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಇದರಿಂದ ಪಂಚಮಸಾಲಿ ಸಮಾಜದ ತಾಳ್ಮೆ ಪರೀಕ್ಷೆ ಮಾಡುವ ಸರ್ಕಾರಕ್ಕೆ ಎಚ್ಚರಿಕೆ ನೀಡಲೇಬೇಕಿದೆ ಎಂದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಕೊಡಲು ಸಾಧ್ಯವೋ-ಇಲ್ಲವೋ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಬೇಕೇ ಹೊರತು ನಮ್ಮ ಸಹನೆ ಪರೀಕ್ಷೆ ಮಾಡಬಾರದು. ನಾವು ಹೋರಾಟ ಮಾಡಿದ ಸಂದರ್ಭದಲ್ಲೆಲ್ಲ ಕಾಲಮಿತಿ ನೀಡುತ್ತ, ಸುಳ್ಳು ನಂಬಿಕೆ ಹುಟ್ಟಿಸುವ ಮೂಲಕ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು.
ಪರಿಣಾಮ ನಮ್ಮ ಹಕ್ಕಿಗಾಗಿ ಜೂ.27ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಎದುರು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಸರ್ಕಾರ ಮಣಿಯದಿದ್ದರೆ ಬಳಿಕ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಿರಂತರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಸುಮಾರು 25 ಲಕ್ಷ ಸಮಾಜ ಬಾಂಧವರು ಸೇರಿಸಿ ಬೃಹತ್ ಧರಣಿ ನಡೆಸುವ ಚಿಂತನೆ ನಡೆದಿದೆ. ಮೀಸಲಾತಿ ದೊರಕಿದರೆ ಬೃಹತ್ ಜನಸಮೂಹದಲ್ಲಿ ಸರ್ಕಾರಕ್ಕೆ ಸನ್ಮಾನ ನೆರವೇರಿಸಲಾಗುವುದು.
ಮುಖ್ಯಮಂತ್ರಿಗಳಿಗೆ ಶೇಂಗಾ ಹೋಳಿಗೆ ತಿನ್ನಿಸಿ, ಕಲ್ಲು ಸಕ್ಕರೆ ತುಲಾಭಾರದ ಗೌರವ ಸಮರ್ಪಿಸಲಿದ್ದೇವೆ. ಮಾತು ತಪ್ಪಿದರೆ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೋರಾಟದ ವಿವರ ನೀಡಿದರು.
ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ, ಎಂ.ಎಸ್. ರುದ್ರಗೌಡರ, ಶಂಕರಗೌಡ ಬಿರಾದಾರ, ನಿಂಗನಗೌಡ ಸೊಲಾಪೂರ, ಶೋಭಾ ಬಿರಾದಾರ ಸೇರಿದಂತೆ ಇತರರು ಇದ್ದರು.