Advertisement

ಯೋಜನೆಗಳ ಜಾರಿಗೆ ಮಾರ್ಚ್‌ ಗಡುವು

08:22 AM Nov 08, 2017 | Team Udayavani |

ಬೆಂಗಳೂರು: ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಸರ್ಕಾರದ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

Advertisement

ರಾಜ್ಯದಲ್ಲಿ ಗ್ರಾಮೀಣ ಅಕ್ರಮ-ಸಕ್ರಮ (94ಸಿ) ಮತ್ತು ನಗರ- ಪಟ್ಟಣಗಳ ಅಕ್ರಮ-ಸಕ್ರಮ (94ಸಿಸಿ) ಯೋಜನೆಯಡಿ ಸಲ್ಲಿಸಿರುವ ಅರ್ಜಿಗಳನ್ನು ಮೂರು ತಿಂಗಳೊಳಗೆ ಇತ್ಯರ್ಥಗೊಳಿಸಿ ಅರ್ಹ ಕಟ್ಟಡಗಳನ್ನು ಸಕ್ರಮಗೊಳಿಸಬೇಕು. ಅರಣ್ಯ ಹಕ್ಕು ಸಮಿತಿಯ ಶಿಫಾರಸಿನನ್ವಯ ಅರಣ್ಯ ವಾಸಿಗಳಿಗೆ ಸ್ವಾಧೀನ ಪತ್ರ ಕೊಡುವ ಕಾರ್ಯವನ್ನು ಮುಂದಿನ ಐದು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಇನ್ನೂ ಸ್ಥಾಪನೆಯಾಗದೆ ಬಾಕಿ ಇರುವ 859 ಸೇವಾ ಕೇಂದ್ರಗಳನ್ನು ಮುಂದಿನ ಎರಡು ತಿಂಗಳೊಳಗೆ ಪ್ರಾರಂಭಿಸಬೇಕು. ಐದು ವರ್ಷ ಅವಧಿಯಲ್ಲಿ 15 ಲಕ್ಷ ಮನೆ ನಿರ್ಮಾಣದ ಪೈಕಿ ಬಾಕಿ ಇರುವ ಮೂರು ಲಕ್ಷ ಮನೆಗಳನ್ನು ಮುಂದಿನ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು.

ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಗೊಳಿಸಲು 100 ತಾಲೂಕುಗಳಲ್ಲಿ ಬಾಕಿ ಇರುವ 23 ಲಕ್ಷ ಶೌಚಾಲಯಗಳನ್ನು
ಮಾರ್ಚ್‌ ಅಂತ್ಯದೊಳಗೆ ನಿರ್ಮಿಸಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಟ್ಟಾರೆ ಸರ್ಕಾರದಲ್ಲಿ ಜಾರಿಯಲ್ಲಿರುವ ಎಲ್ಲಾ ಯೋಜನೆಗಳನ್ನೂ 2018ರ ಮಾರ್ಚ್‌ ಅಂತ್ಯದ ವೇಳೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. 

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿರುವ ಮನೆಗಳನ್ನು 94 ಸಿ ಮತ್ತು 94 ಸಿಸಿ ಅಡಿ ಸಕ್ರಮಗೊಳಿಸಲು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಫ‌ಲಾನುಭವಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ದಂಡದ ಮೊತ್ತವನ್ನೂ ಕಡಿಮೆ ಮಾಡಲಾಗಿದೆ. ಹೀಗಿದ್ದರೂ ಅಕ್ರಮ-ಸಕ್ರಮ ಯೋಜನೆಯಡಿ ಮನೆಗಳನ್ನು ಸಕ್ರಮಗೊಳಿಸುವ
ಪ್ರಕ್ರಿಯೆ ಚುರುಕುಗೊಳ್ಳದ ಹಿನ್ನೆಲೆಯಲ್ಲಿ ಮನೆಗಳನ್ನು ಸಕ್ರಮ ಗೊಳಿಸಲು ಮುಖ್ಯಮಂತ್ರಿಗಳು 3 ತಿಂಗಳ ಗಡುವು ನೀಡಿದ್ದಾರೆ.

ಅರಣ್ಯ ಹಕ್ಕು ಸಮಿತಿ ಶಿಫಾರಸಿನನ್ವಯ ಅರಣ್ಯವಾಸಿಗಳಿಗೆ ಅವರು ವಾಸಿಸುವ ಭೂಮಿಯ ಸ್ವಾಧೀನ ಪತ್ರ ಕೊಡುವ ಕಾರ್ಯವನ್ನು ಚುರುಕುಗೊಳಿಸಿ ಮುಂದಿನ ಐದು ತಿಂಗಳಲ್ಲಿ ಮುಗಿಸಬೇಕು. ಈ ವಿಚಾರದಲ್ಲಿ ಕಳಕಳಿ, ಕಾಳಜಿ, ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಬೇಕು. ರಾಜ್ಯದಲ್ಲಿ 6000 ಬಾಪೂಜಿ ಸೇವಾ ಕೇಂದ್ರ ನಿರ್ಮಿಸುವ ಗುರಿಗೆ ಬದಲಾಗಿ 5141 ಬಾಪೂಜಿ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ನೂರಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿರುವುದರಿಂದ ಉಳಿಕೆ 859 ಸೇವಾ ಕೇಂದ್ರಗಳನ್ನು ಮುಂದಿನ ಎರಡು ತಿಂಗಳೊಳಗೆ ಪ್ರಾರಂಭಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

Advertisement

ರಾಜ್ಯದ 176 ತಾಲೂಕುಗಳ ಪೈಕಿ ಈವರೆಗೆ 76 ತಾಲೂಕುಗಳು ಮಾತ್ರ ಬಯಲು ಬಹಿರ್ದೆಸೆ ಮುಕ್ತವಾಗಿವೆ. ರಾಜ್ಯದಲ್ಲಿ 15 ಲಕ್ಷ ಮನೆ ನಿರ್ಮಾಣ ಗುರಿ ಪೈಕಿ 12 ಲಕ್ಷ ಮಾತ್ರ ನಿರ್ಮಾಣವಾಗಿದ್ದು, ಉಳಿದ 3 ಲಕ್ಷ ಮನೆಗಳನ್ನು ಮುಂದಿನ ಮಾರ್ಚ್‌ ಅಂತ್ಯದೊಳಗೆ ನಿರ್ಮಿಸಬೇಕು ಎಂದೂ ತಾಕೀತು ಮಾಡಿದರು. ಸಭೆಯಲ್ಲಿ ಬಹುತೇಕ ಎಲ್ಲಾ ಸಚಿವರು, ದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ
ಪ್ರತಿನಿಧಿ, ಅಪ್ಪಾಜಿ ಸಿ.ಎಸ್‌.ನಾಡಗೌಡ, ಅಪರ ಪ್ರತಿನಿಧಿ ಸಲೀಂ ಅಹಮದ್‌, ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.

ಕಾಲ ಕಾಲಕ್ಕೆ ಸಭೆ ನಡೆಸಿ
ಕರ್ನಾಟಕ ಅಭಿವೃದ್ಧಿ ಮಂಡಳಿ ಸಭೆ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ರೂಪಿಸಿರುವ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆ ಸೇರಿ ಅಭಿವೃದ್ಧಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಸಭೆಗಳನ್ನು ಕಾಲಕಾಲಕ್ಕೆ ನಡೆಸಿ ಪ್ರಗತಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲೆಗಳಿಗೆ ಹಠಾತ್‌ ಭೇಟಿ ನೀಡಿ ಪರಿಶೀಲಿಸಿ, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಜ. 1ರಿಂದ ರಾಜ್ಯದ ವಿವಿಧೆಡೆ ಇಂದಿರಾ ಕ್ಯಾಂಟೀನ್‌ ಆರಂಭ
ಬೆಂಗಳೂರು: ರಾಜಧಾನಿ ಬೆಂಗಳೂರು ಮಾದರಿಯಲ್ಲಿ ರಾಜ್ಯದ ಇತರೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ 2018ರ ಜ. 1ರಿಂದ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರಾರಂಭಿಸಿರುವ ಇಂದಿರಾ ಕ್ಯಾಂಟೀನ್‌ ಮಾದರಿ ಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳು ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಜ. 1ರಿಂದ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುವುದು. ಆದ್ದರಿಂದ ಇದಕ್ಕೆ ಅಗತ್ಯ ಜಮೀನು ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ. ಭೂಮಿ ಲಭ್ಯವಿಲ್ಲದ ಕಡೆ ಮೊಬೈಲ್‌ ಕ್ಯಾಂಟೀನ್‌ ಆರಂಭಕ್ಕೆ ಕ್ರಮ ಕೈಗೊಳ್ಳಿ ಎಂದು ಮಂಗಳವಾರ ನಡೆದ ಡೀಸಿಗಳ ಮತ್ತು ಜಿಪಂ ಸಿಇಒಗಳ ಸಭೆಯಲ್ಲಿ ಸೂಚಿಸಿದರು.

ಕೆಲವು ನಗರ-ಪಟ್ಟಣಗಳಲ್ಲಿ ಜನಸಂಖ್ಯೆ ಒಂದು ಲಕ್ಷ ಇಲ್ಲ. ಕೇವಲ 75 ಸಾವಿರ ಇದೆ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ. ಅವಶ್ಯಕತೆ ಕಂಡುಬಂದಲ್ಲಿ ಅಂತಹ ಪ್ರದೇಶದಲ್ಲೂ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲು ಮುಂದಾಗಿ. ಅದೇ ರೀತಿ ಒಂದು ಲಕ್ಷ ಜನಸಂಖ್ಯೆಯ ಬದಲು ಎರಡು ಲಕ್ಷ ಜನಸಂಖ್ಯೆ ಇದ್ದಲ್ಲಿ ನಿಯಮಾನುಸಾರ ಒಂದೇ ಕ್ಯಾಂಟೀನ್‌ ಎಂಬ ತತ್ವಕ್ಕೆ ಬದ್ಧರಾಗುವುದು ಬೇಡ. ಮತ್ತೂಂದು ಕ್ಯಾಂಟೀನ್‌ ಪ್ರಾರಂಭಿಸುವ ಔದಾರ್ಯ ತೋರಿಸಿ ಎಂದು ತಾಕೀತು ಮಾಡಿದರು.

ಸಿಎಂ ನಿರ್ದೇಶನಗಳು
ನಿವೇಶನ ರಹಿತ ಹಾಗೂ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಮನೆ, ನಿವೇಶನ ನೀಡಲಾಗುತ್ತಿದ್ದು, ಜಿಲ್ಲಾ, ತಾಲೂಕು ಹಾಗೂ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಹಂಚಿಕೆಗೆ ಲಭ್ಯವಿರುವ ಭೂಮಿ ಗುರುತಿಸಿ ಮನೆ ಮತ್ತು ನಿವೇಶನ ಹಂಚಿಕೆಗೆ ಕಾರ್ಯೋನ್ಮುಖರಾಗಬೇಕು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕೆ ಮಲೆನಾಡು ಜಿಲ್ಲೆಗಳಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದು, ಈ ಸಮಸ್ಯೆ ನಿವಾರಿಸಿ ಯೋಜನೆ ಅನುಷ್ಠಾನಕ್ಕೆ ವಿಶೇಷ ಕ್ರಮ ಕೈಗೊಳ್ಳಬೇಕು.

ಮುಖ್ಯಮಂತ್ರಿಯವರ ಅನಿಲ ಭಾಗ್ಯ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ಗ್ಯಾಸ್‌ ಸಂಪರ್ಕ ಒದಗಿಸುವ ಗುರಿ ಇದ್ದು, ತಕ್ಷಣದಿಂದಲೇ ಅದನ್ನು ಕಾರ್ಯಗತಗೊಳಿಸಬೇಕು, ಬಿಪಿಎಲ್‌ ಕುಟುಂಬಗಳಿಗೆ ಆದ್ಯತೆ ಮೇಲೆ ಕಾರ್ಡ್‌ ವಿತರಿಸಬೇಕು.

ಬೆಳೆ ಸಮೀಲ್ಲಾ ಕಾರ್ಯವನ್ನು ನ. 10ರವರೆಗೆ ಅಧಿಕಾರಿಗಳು ಮಾಡಲಿ. ನಂತರ ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಅತ್ಯಾವಶ್ಯಕವೆನಿಸಿರುವ ತಮ್ಮ ಭೂಮಿಗೆ ಸಂಬಂಧಿತ ಮಾಹಿತಿಯನ್ನು ರೈತರೇ ಬೆಳೆ ಸಮೀಲ್ಲಾ ಆ್ಯಪ್‌ ಮೂಲಕ ದಾಖಲಿಸಲು ಪ್ರೇರೇಪಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next