ಉಪ್ಪುಂದ: ಇಲ್ಲಿನ ತ್ರಾಸಿ ಮರವಂತೆ ಬೀಚ್‌ನಲ್ಲಿ ನೀರಿಗೆ ಇಳಿದ ಸಂದರ್ಭ ಯುವಕ ಸಮುದ್ರ ಪಾಲಾದ ಘಟನೆ ಜು. 18ರಂದು ಸಂಭವಿಸಿದೆ. ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ (21) ಸಮುದ್ರಪಾಲಾದ ವ್ಯಕ್ತಿ.
ಗದಗ ಮೂಲದ ಮೂವರು ಯುವಕರು ಮನೆಯವರೊಂದಿಗೆ ಮಂಗಳೂರಿನಲ್ಲಿ ಇದ್ದು ಜು. 18ರಂದು ತಮ್ಮೂರಿಗೆ ಹೋಗಲು ಟ್ಯಾಂಕರ್ ಮೂಲಕ ಹೊರಟ್ಟಿದರು. ಯುವಕರು ಮರವಂತೆ ಕಡಲ ತೀರಕ್ಕೆ ಬಂದಾಗ ಬೀಚ್ ನೋಡಲು ನಿಲ್ಲಿಸಲು ಹೇಳಿದರು.
ಬೀಚ್ ನೋಡುತ್ತ ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತ ನೀರಿಗೆ ಇಳಿದ ಸಂದರ್ಭ ಬೃಹತ್ ಅಲೆ ಅಪ್ಪಳಿಸಿದ ಪರಿಣಾಮ ಓರ್ವ ಯುವಕ ಅಲೆಯ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಸ್ಥಳೀಯ ಆ್ಯಂಬುಲೆನ್ಸ್ ಚಾಲಕ, ಸಮಾಜಸೇವಕ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡ, ಈಜುತಜ್ಞ ದಿನೇಶ್ ಖಾರ್ವಿ, ಅಗ್ನಿಶಾಮಕ ದಳ, ಕೋಸ್ಟಲ್ ಗಾರ್ಡ್ ಸಿಬಂದಿ ಹಾಗೂ ಗಂಗೊಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಜೆ ಸಮಯ ಭಾರೀ ಗಾಳೆ ಮಳೆಯಾಗಿದ್ದು ಹುಡುಕಾಟ ನಡೆಸಲು ಸಮಸ್ಯೆಯಾಗಿದೆ.
ಯುವಕರು ಮೊಬೈಲ್‌ನಲ್ಲಿ ಮಗ್ನರಾಗಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸಮುದ್ರದ ಅಬ್ಬರದ ಅಲೆ ಇರುವುದರಿಂದ ಕಾರ್ಯಾಚರಣೆಯನ್ನು ಸದ್ಯ ನಿಲ್ಲಿಸಲಾಗಿದೆ. ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿಲ್ಲ.