Advertisement
ರೋಶನ್ ಮೃತದೇಹವು ಸೋಮವಾರ ಅಪರಾಹ್ನ 3 ಗಂಟೆಯ ಸುಮಾರಿಗೆ ಹೊಸಾಡು ಗ್ರಾಮದ ಕಂಚುಗೋಡು ಸಮೀಪದ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಹುಡುಕಾಟದ ವೇಳೆ ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ರೋಶನ್ ಆಚಾರ್‌ಗಾಗಿ ರವಿವಾರ ದಿನವಿಡೀ ಹುಡುಕಾಟ ನಡೆಸಿದ್ದು, ಆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋಮವಾರವೂ ಬೆಳಗ್ಗೆಯಿಂದಲೇ ಸ್ಕೂಬಾ ಡ್ರೈವ್ ನಿಪುಣ, ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು. ಅವರೊಂದಿಗೆ ಸ್ಥಳೀಯ ಮುಳುಗು ತಜ್ಞ ದಿನೇಶ್ ಖಾರ್ವಿಯವರು ಹುಡುಕಾಟ ಮುಂದುವರಿಸಿದ್ದರು. ಆದರೆ ಸೋಮವಾರ ಮಧ್ಯಾಹ್ನದವರೆಗೂ ಪತ್ತೆಯಾಗಿರಲಿಲ್ಲ. ಅಪರಾಹ್ನ 3 ಗಂಟೆಯ ವೇಳೆಗೆ ಕಂಚುಗೋಡಲ್ಲಿ ಮೃತದೇಹ ಪತ್ತೆಯಾಗಿದೆ. ಈ ಸ್ಥಳವು ಮರವಂತೆಯ ಘಟನೆ ನಡೆದ ಸುಮಾರು 3 ಕಿ.ಮೀ. ಅಂತರದಲ್ಲಿದೆ. ಇದನ್ನೂ ಓದಿ : ಬಿಜೆಪಿ ಲಾಭಕ್ಕಾಗಿ ಕ್ರಿಮಿನಲ್ ಗಳನ್ನು ಬಳಸಿಕೊಳ್ಳುತ್ತದೆ : ಮೆಹಬೂಬಾ ಮುಫ್ತಿ
Related Articles
ಕಂದಾವರ ಗ್ರಾಮದ ಕಾಡಿನಕೊಂಡದ ನಿವಾಸಿ ನಾರಾಯಣ ಆಚಾರ್ ಅವರ ಪುತ್ರ ರೋಶನ್ ಆಚಾರ್ (25) ಕಾಲೇಜು ವ್ಯಾಸಂಗ ಮುಗಿಸಿ ತಂದೆಯ ಕೆಲಸಕ್ಕೆ ನೆರವಾಗುತ್ತಿದ್ದರು. ತಂದೆ ಖಾಸಗಿ ಗುತ್ತಿಗೆದಾರರಾಗಿದ್ದು, ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದುದಲ್ಲದೆ, ಬಂಧು-ಬಳಗ, ಸ್ನೇಹಿತರೆಲ್ಲರಿಗೂ ಆಪ್ತವಾಗಿದ್ದರು. ನಾರಾಯಣ ಆಚಾರ್‌ಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿಯಿದ್ದು, ಆ ಪೈಕಿ ಮನೆಗೆ ಆಧಾರವಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ದಿನಕಳೆಯುವಂತಾಗಿದೆ.
Advertisement
ಬಂಡೆ ಕಲ್ಲುಗಳಿಗೆ ಅಪ್ಪಳಿಸಿ ಕಾರು ಅಪ್ಪಚ್ಚಿ !ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಕುಂದಾಪುರದಿಂದ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ವಿರಾಜ್ ಹಾಗೂ ಅವರ ಸಹೋದರ ಬಂಧುಗಳಾದ ಮೂವರು ಕುಂದಾಪುರ ಕಡೆಯಿಂದ ಕುಮಟಾಗೆ ಪ್ರಯಾಣ ಬೆಳೆಸಿದ್ದರು. ಮರವಂತೆಯ ಮಾರಸ್ವಾಮಿ ದೇಗುಲಕ್ಕಿಂತ ಸ್ವಲ್ಪ ಹಿಂದೆ ಬೀಚ್ ಬದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಚಾಲಕನ ನಿಯಂತ್ರಣ ತಪ್ಪಿ 40 ಅಡಿ ಆಳದ ಸಮುದ್ರಕ್ಕೆ ಕಲ್ಲಿನ ಮೇಲಿಂದ ಉರುಳಿಕೊಂಡು ಹೋಗಿ ಪಲ್ಟಿಯಾಗಿದೆ. ಕಾರು ಮೊದಲಿಗೆ ಕಡಲ್ಕೊರೆತ ತಡೆಗಾಗಿ ಹಾಕಲಾದ ಕಲ್ಲು ಬಂಡೆಗೆ ಅಪ್ಪಳಿಸಿ ಪಲ್ಟಿಯಾಗಿ, ಸಮುದ್ರಕ್ಕೆ ಬಿದ್ದು, ಸಂಪೂರ್ಣ ಜಖಂಗೊಂಡಿತ್ತು. ಕಾರು ಚಲಾಯಿಸುತ್ತಿದ್ದ ವಿರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ರೋಶನ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಕಾರಿನಲ್ಲಿದ್ದ ಸಂದೇಶ್ ಹಾಗೂ ಕಾರ್ತಿಕ್ ಕಾರಿನಿಂದ ಹೊರಕ್ಕೆ ಬಿದ್ದು, ಪಾರಾಗಿದ್ದರು.