Advertisement
ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಕೇರಳ ಮಾದರಿಯ ಔಟ್ ಡೋರ್ ಬಂದರು ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ನಡುವೆ ಉತ್ತರ ಮತ್ತು ದಕ್ಷಿಣದ ತಡೆಗೋಡೆಯ ಮಧ್ಯ ಭಾಗದಲ್ಲಿ ಗಾಳಿಯ ಒತ್ತಡ ಅಧಿಕಗೊಂಡು ಕಡಲಿನ ಆರ್ಭಟ ಹೆಚ್ಚುತ್ತಿದೆ. ಕಳೆದ ಮಳೆಗಾಲದಿಂದೀಚೆಗೆ ಬುದ್ಧಿವಂತರ ಮನೆ ಮಂಜುನಾಥ, ಬಬ್ಬರ್ಯ ಕೋಡಿ ಮನೆ ರಾಮಚಂದ್ರ, ದೇವಿ, ಸುಬ್ರಹ್ಮಣ್ಯ, ಅಣ್ಣಪ್ಪ, ಸುಕ್ರ ಅವರ ಮನೆಯ ಅಂಗಳಕ್ಕೆ ನೀರು ನುಗ್ಗುತ್ತಿದೆ. ಸರಕಾರವನ್ನು ನಂಬಿ ಕೂತರೆ ಈ ಮಳೆಗಾಲದಲ್ಲಿ ಆಸ್ತಿಪಾಸ್ತಿ ಉಳಿಸಿಕೊಳ್ಳಲು ಸಾಧ್ಯವಾಗದು ಎಂದು ನಿರ್ಧರಿಸಿ ತಾವೇ ಕ್ರಮಕ್ಕೆ ಮುಂದಾಗಿದ್ದಾರೆ. 10 ಲಕ್ಷ ರೂ. ವೆಚ್ಚದಲ್ಲಿ 100ರಿಂದ 500 ಕಿಲೋ ಸಾಮರ್ಥ್ಯದ 1 ಸಾವಿರ ದೊಡ್ಡ ಚೀಲ ಗಳಲ್ಲಿ ಮರಳು ತುಂಬಿ 120 ಮೀ. ದೂರದ ವರೆಗೆ ಇರಿಸಿ ಅಲೆಗಳು ಅಂಗಳಕ್ಕೇರದಂತೆ ತಡೆಯಲು ಯತ್ನಿಸಿದ್ದಾರೆ.
ಕಳೆದ ಬಾರಿ ಅಲೆಗಳ ಹೊಡೆತಕ್ಕೆ ಮೀನುಗಾರರ 6 ಮನೆಗಳು ಸಂಪೂರ್ಣ ಜಖಂಗೊಂಡಿದ್ದವು. ಸ್ಥಳಕ್ಕಾಗಮಿಸಿದ್ದ ಮೀನುಗಾರಿಕೆ ಸಚಿವ ವೆಂಕಟರಾವ್
ನಾಡ ಗೌಡ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಸಂತ್ರಸ್ತ ರಿಗೆ ಪರ್ಯಾಯ ಜಾಗ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಮರವಂತೆಯ ಗಾಂಧಿನಗರದ ಸರ್ವೆ ನಂಬ್ರ 57ಎಯಲ್ಲಿ ಪಂಚಾಯತ್ ಜಾಗ ಇದ್ದು, ಅದನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಕಾರ್ಯಗತಗೊಂಡಿಲ್ಲ. ಮರಳು ಚೀಲದ ತಡೆಗೋಡೆ
ಇಲ್ಲಿ ಸುಮಾರು 400 ಮೀ. ಉದ್ದಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಅಲೆಗಳ ಹೊಡೆತಕ್ಕೆ ಕಲ್ಲುಗಳು ಕಡಲಾಳ ಸೇರುತ್ತಿವೆ. ಬೇಸಗೆಯಲ್ಲೂ ಕಂಡು ಬಂದಿದ್ದ ಕೊರೆತ ಈಗ ತೀವ್ರ ಸ್ವರೂಪದಲ್ಲಿದ್ದು, ತೀರ ಪ್ರದೇಶದ ರಸ್ತೆ, ಮನೆ, ತೆಂಗಿನ ಮರಗಳು, ಮೀನುಗಾರಿಕೆ ಶೆಡ್‌ಗಳು ಅಪಾಯದಲ್ಲಿವೆ.
Related Articles
ತಡೆಗೋಡೆ ಅವೈಜ್ಞಾನಿಕವಾಗಿರುವುದರಿಂದ ಒಳ ಭಾಗದಿಂದ ಮರಳು ಕೊಚ್ಚಿ ಹೋಗುತ್ತಿದೆ. ತಡೆಗೋಡೆ ನೆಲಮಟ್ಟದಿಂದ 2 ಅಡಿ ಕೆಳಗಡೆ ಇರುವುದರಿಂದ ಅಲೆಗಳು ಮೇಲೇರಿ ಬರುತ್ತಿವೆ. 2 ಮೀ. ಎತ್ತರದ ಗೋಡೆ ನಿರ್ಮಿಸುವ ಚಿಂತನೆ ಇದೆ. ಮೀನುಗಾರಿಕೆ ಸ. ಎಂಜಿನಿ ಯರ್ 50 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿದ್ದು, ಕೂಡಲೇ ಕಾರ್ಯಗತಗೊಳಿಸುವಂತೆ ಮೀನುಗಾರರು ಮನವಿ ಮಾಡುತ್ತಿದ್ದಾರೆ. ಆದರೆ ಇಲಾಖಾಧಿಕಾರಿಗಳು ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
Advertisement
ಹಣ ಬಿಡುಗಡೆ ಮಾಡಿಅಪಾಯದಲ್ಲಿರುವ ಮೀನು ಗಾರರಿಗೆ ಪರ್ಯಾಯ ನಿವೇಶನ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಜಾಗ ಮಂಜೂರಾಗಿಲ್ಲ. ಹೊರ ಬಂದರು ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸಬೇಕು. ಪ್ರಸ್ತುತ ಮೀನುಗಾರರು ತಮ್ಮ ಹಣದಿಂದ ಮರಳು ತುಂಬಿದ ಚೀಲಗಳನ್ನಿಟ್ಟು ತಾತ್ಕಾಲಿಕ ರಕ್ಷಣೆ ಮಾಡಿಕೊಂಡಿದ್ದಾರೆ. ಶಾಶ್ವತ ಯೋಜನೆಗೆ ಸರಕಾರ ಕೂಡಲೇ ಹಣ ಬಿಡುಗಡೆ ಮಾಡಲಿ.
– ಮೋಹನ ಖಾರ್ವಿ,ಮೀನುಗಾರರ ಮುಖಂಡ
ಕೃಷ್ಣ ಬಿಜೂರು