ಮುಂಬಯಿ: ಪ್ರಸ್ತುತ ಒಂದೇ ತಿಂಗಳಲ್ಲಿ ವಿವಿಧೆಡೆಗಳಲ್ಲಿ ನಡೆದ ಮ್ಯಾರಥಾನ್‌ನಲ್ಲಿ ತುಳು-ಕನ್ನಡಿಗ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಪಟು ಶಿವಾನಂದ ಶೆಟ್ಟಿ ಅವರಿಗೆ ನಾಲ್ಕು ಪ್ರಶಸ್ತಿಗಳು ಲಭಿಸಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಾಂದ್ರಾದ ಜೀಯೋ ಗಾರ್ಡನ್‌ನಲ್ಲಿ ಜು. 22ರಂದು ನಡೆದ ಕನಾಕೀಯಾ ಮಾನ್ಸೂನ್ ಮ್ಯಾರಥಾನ್ ಚಾಲೆಂಜ್‌ನಲ್ಲಿ ತುಳು-ಕನ್ನಡಿಗ ಶಿವಾನಂದ ಶೆಟ್ಟಿ ಅವರು ದ್ವಿತೀಯ ಸ್ಥಾನಿಯಾಗಿದ್ದಾರೆ. 35-45 ವಯೋಮಿತಿಯ ವಿಭಾಗದಲ್ಲಿ ಅವರು 21 ಕಿ. ಮೀ. ಗಳನ್ನು 1 ಗಂಟೆ, 28 ನಿಮಿಷ, 29 ಸೆಕೆಂಡ್‌ನಲ್ಲಿ ಪೂರೈಸಿ ದ್ವಿತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಪರ್ಧೆಯನ್ನು ಮಾಜಿ ಕ್ರಿಕೆಟ್ ತಾರೆ ಜಾಹೀರ್‌ಖಾನ್ ಅವರು ಉದ್ಘಾಟಿಸಿದ್ದರು. ಶಿವಾನಂದ ಶೆಟ್ಟಿ ಅವರು ಒಟ್ಟು ಮ್ಯಾರಥಾನ್‌ನಲ್ಲಿ ಮೂರನೇ ಸ್ಥಾನಗಳಿಸಿದ್ದಾರೆ. ದೇಶದ ವಿವಿಧ ರಾಜ್ಯಗಳ ಸುಮಾರು 1500 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ 7 ವರ್ಷಗಳಿಂದ ಶಿವಾನಂದ ಶೆಟ್ಟಿ ಅವರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಕಳೆದ ಭಾರಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದರು.
ಜು. 15 ರಂದು ಲೋನವಾಲಾ ದಲ್ಲಿ ನಡೆದ ಲೋನವಾಲ ವರ್ಷಾ ಮ್ಯಾರಥಾನ್-2018 ರಲ್ಲಿ 35-45 ವಯೋಮಿತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 21 ಕೀ. ಮೀ. ಗಳನ್ನು ಅವರು 1 ಗಂಟೆ, 35 ನಿಮಿಷ, 19 ಸೆಕೆಂಡ್‌ಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಜು. 8ರಂದು ಬೆಂಗಳೂರಿನಲ್ಲಿ ಎನ್. ಇ. ಬಿ. ನ್ಪೋರ್ಟ್ಸ್ ಇದರ ನಾಗರಾಜ ಅಡಿಗ ಅವರ ನೇತೃತ್ವದಲ್ಲಿ ನೈಸ್‌ರೋಡ್‌ನಲ್ಲಿ ನಡೆದ ಬೆಂಗಳೂರು 10 ಕೆ ಚಾಲೆಂಜ್-2018 ಮ್ಯಾರಥಾನ್‌ನಲ್ಲಿ 40-45 ವಯೋಮಿತಿಯ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. 10 ಕಿ. ಮೀ. ಗಳನ್ನು ಇವರು 41 ನಿಮಿಷ, 41 ಸೆಕೆಂಡ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟು 11 ಸಾವಿರ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷತೆಯಾಗಿದೆ.
ಜು. 1 ರಂದು ಕರ್ನಾಟಕ ಗದಗ ದಲ್ಲಿ ನಡೆದ ಗದಗ ಮ್ಯಾರಥಾನ್‌ನಲ್ಲಿ 40 ರಿಂದ ಮೇಲ್ಪಟ್ಟ ವಯೋಮಿತಿಯ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. 5 ಕಿ. ಮೀ. ಗಳನ್ನು 18 ನಿಮಿಷ, 36 ಸೆಕೆಂಡ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಒಟ್ಟು 40 ಸ್ಪರ್ಧಿಗಳಿದ್ದರು. ಕಳೆದ ಒಂದು ದಶಕಗಳಿಗಿಂತಲೂ ಅಧಿಕ ಕಾಲದಿಂದ ಮ್ಯಾರಥಾನ್‌ಪಟುವಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವಾರು ಮ್ಯಾರಥಾನ್, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನೂರಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಮೂಲತ: ಮೂಡಬಿದ್ರೆ ನಿಡ್ಡೋಡಿ ನಂದಬೆಟ್ಟು ನಿವಾಸಿ.