Advertisement

Marathi ಭಾಷಿಕರನ್ನು ನಿಗ್ರಹಿಸಲಾಗುತ್ತಿದೆ, ಬೆಳಗಾವಿಗೆ ಯುಟಿ ಸ್ಥಾನಮಾನ ನೀಡಬೇಕು:ಆದಿತ್ಯ

12:43 AM Dec 10, 2024 | Team Udayavani |

ಮುಂಬೈ: ಬೆಳಗಾವಿಯಲ್ಲಿ ಮರಾಠಿ ಮಾತನಾಡುವ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ, ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು(Union Territory) ಘೋಷಿಸಬೇಕು ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೋಮವಾರ(ಡಿ9) ಒತ್ತಾಯಿಸಿದ್ದಾರೆ.

Advertisement

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ಠಾಕ್ರೆ, ಮಹಾರಾಷ್ಟ್ರದಲ್ಲಿ ಹೊಸ ಸರಕಾರ ರಚನೆಯ ಸಂಭ್ರಮಾಚರಣೆ ನಡೆಯುತ್ತಿರುವಾಗ, ನೆರೆಯ ರಾಜ್ಯದ ಬೆಳಗಾವಿಯಲ್ಲಿ ಪರಿಸ್ಥಿತಿ ಹದಗೆಡುತ್ತಿದೆ.ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ವಿವಾದಿತ ಪ್ರದೇಶದಲ್ಲಿ ವಾಸಿಸುವ ಮರಾಠಿ ಮಾತನಾಡುವ ಜನರಿಗೆ ಹೆಚ್ಚುವರಿ ಆರ್ಥಿಕ ನೆರವನ್ನು ನೀಡುವುದಾಗಿ ಹಿಂದಿನ ‘ಅಸಂವಿಧಾನಿಕ’ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆ ಭರವಸೆ ಏನಾಯಿತು? ”ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸಭೆಯನ್ನು ಆಯೋಜಿಸಿದ್ದು, ರಾಜ್ಯ ಸರಕಾರ ಸಭೆಯನ್ನು ನಿಷೇಧಿಸಿ ಮಹಾರಾಷ್ಟ್ರದ ನಾಯಕರು ರಾಜ್ಯಕ್ಕೆ ಪ್ರವೇಶಿಸುವುದಕ್ಕೆ ತಡೆ ವಿಧಿಸಿದೆ.

ಹೇಳಿಕೆ ಬಾಲಿಶ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂಬ ಉದ್ದವ್‌ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ ಹೇಳಿಕೆ ಅತ್ಯಂತ ಬಾಲಿಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಆದಿತ್ಯ ಠಾಕ್ರೆ ನೀಡಿದ ಹೇಳಿಕೆ ಬಗ್ಗೆ ಸುವರ್ಣಸೌಧದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನಮಗೆ ಮಹಾಜನ್‌ ವರದಿಯೇ ಅಂತಿಮ. ಮಹಾಜನ್‌ ವರದಿಯನ್ನು ಒಪ್ಪಿಕೊಂಡ ಮೇಲೆ ಮುಗಿಯಿತು. ಯಾರಾದರೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಸಿಎಂ, ಈ ಕಾರಣಕ್ಕೇ ಇದೊಂದು ಬಾಲಿಶ ಹೇಳಿಕೆ ಎಂದರು.

ಆದಿತ್ಯ ಠಾಕ್ರೆ ಹುಚ್ಚ
ಶಿವಸೇನೆಯ ಉದ್ಧವ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಒಬ್ಬ ಹುಚ್ಚ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಈ ರೀತಿ ಹುಚ್ಚು ಹೇಳಿಕೆ ನೀಡಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದರಲ್ಲಿ ಎರಡು ಮಾತಿಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

Advertisement

ಬೆಳಗಾವಿ ಕನ್ನಡಿಗರ ಆಸ್ತಿ
ಬೆಳಗಾವಿ ಕರ್ನಾಟಕ ಮತ್ತು ಕನ್ನಡಿಗರ ಆಸ್ತಿ. ಇದನ್ನು ಕರ್ನಾಟಕದಿಂದ ಬೇರ್ಪಡಿಸುವ ಪ್ರಶ್ನೆಯೇ ಇಲ್ಲ. ಆದಿತ್ಯ ಠಾಕ್ರೆ ಹಾಗೂ ಮಹಾರಾಷ್ಟ್ರ ನಾಯಕರು ಇದೇ ರೀತಿಯಾಗಿ ಪದೇಪದೆ ಹೇಳಿಕೆ ಕೊಟ್ಟರೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಾರೆ. ಮತ್ತೂಮ್ಮೆ ಬೆಳಗಾವಿಗೆ ಸುದ್ದಿಗೆ ಬರಬೇಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next