Advertisement

ಮರಾಠಿ ದಂಪತಿ ಶಿವಶಂಕರ-ಕಾವ್ಯಾ ಕನ್ನಡ ರಂಗಭೂಮಿ ಪ್ರೇಮ

09:49 AM Jul 08, 2019 | Suhan S |

ಬಾಗಲಕೋಟೆ: ಇವರು ಪಕ್ಕಾ ಮರಾಠಿ ನೆಲದವರಾದರೂ ಇವರನ್ನು ಸೆಳೆದದ್ದು ಕನ್ನಡ ವೃತ್ತಿ ರಂಗಭೂಮಿ. ವೃತ್ತಿ ರಂಗಭೂಮಿಯಲ್ಲಿ ಹಲವಾರು ಕಷ್ಟ-ನಷ್ಟ-ನೋವು ಅನುಭವಿಸಿದ್ದರೂ ಕನ್ನಡ ಸೆಳೆತ ಇವರನ್ನು ಹಿಡಿದಿಟ್ಟುಕೊಂಡಿದೆ.

Advertisement

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಉಮದಿ ಗ್ರಾಮದ ಶಿವಶಂಕರ ರಡ್ಡಿ ಮತ್ತು ಕಾವ್ಯಾ ದಂಪತಿ. ಕಳೆದ 22 ವರ್ಷಗಳಿಂದ ಕನ್ನಡ ವೃತ್ತಿ ರಂಗಭೂಮಿಯಲ್ಲಿದ್ದು, ಅದರಲ್ಲೇ ಅನ್ನ-ನೆಮ್ಮದಿ ಕಾಣುತ್ತಿದ್ದಾರೆ.

ಕಲಿತದ್ದು ಮರಾಠಿ-ಕೈ ಹಿಡಿದದ್ದು ಕನ್ನಡ: ಉಮದಿಯಲ್ಲಿ ಮರಾಠಿ ಶಿಕ್ಷಣ ಪಡೆದಿರುವ ಶಿವಶಂಕರ ರಡ್ಡಿಯವರ ತಂದೆ ಗಂಗಪ್ಪ ಮರಾಠಿ ಶಿಕ್ಷಕರು. ಇವರ ಕುಟುಂಬದಲ್ಲಿ ಯಾರೂ ಕಲಾವಿದರಿಲ್ಲ. 1ರಿಂದ 4ನೇ ತರಗತಿವರೆಗೆ ಮರಾಠಿ ಮಾಧ್ಯಮ, 5ರಿಂದ 10ನೇ ತರಗತಿವರೆಗೆ ಮರಾಠಿ ವಿಷಯದೊಂದಿಗೆ ಕನ್ನಡವನ್ನೂ ಕಲಿತ ಶಿವಶಂಕರ, 10ನೇ ತರಗತಿ ಮುಗಿಯುತ್ತಲೇ ಕನ್ನಡ ವೃತ್ತಿ ರಂಗಭೂಮಿಗೆ ಸೆಳೆತಕ್ಕೊಳಗಾದರು.

ತಮಗೆ 15 ವರ್ಷ ಮುಗಿಯುತ್ತಲೇ, ಗುಡಗೇರಿ ಎನ್‌. ಬಸವರಾಜ ಅವರ ಸಂಗಮೇಶ್ವರ ನಾಟ್ಯ ಸಂಘ (ಗಡಿನಾಡ ಭಾಗದಲ್ಲಿ ನಾಟಕ ಪ್ರದರ್ಶನ ಮಾಡುವಾಗ ಸೆಳೆತಕ್ಕೆ ಒಳಗಾದವರು)ದಲ್ಲಿ ಹಾಸ್ಯ ಪಾತ್ರ ಮಾಡಲು ಆರಂಭಿಸಿದರು. ಅವರೊಂದಿಗೆ ಬರೋಬ್ಬರಿ 14 ವರ್ಷಗಳ ಕಾಲ ಕೆಲಸ ಮಾಡಿದ ಶಿವಶಂಕರ, ಹಲವು ಪಾತ್ರಗಳ ಮೂಲಕ ಕಲಾಸಕ್ತರ ಗಮನ ಸೆಳೆದರು. ನೀ ಹುಟ್ಟಿದ್ದು ಯಾರಿಗೆ ಎಂಬ ನಾಟಕದ ವೈದ್ಯನ ಪಾತ್ರ ಇವರಿಗೆ ಇಡೀ ವೃತ್ತಿ ರಂಗಭೂಮಿಯಲ್ಲಿ ತಿರುವು ನೀಡಿತು. ಮರಾಠಿಗರಾದರೂ, ನಿರರ್ಗಳವಾಗಿ ಕನ್ನಡ ಮಾತನಾಡುತ್ತಿದ್ದುದಕ್ಕೆ ಸ್ವತಃ ಗುಡಗೇರಿ ಎನ್‌. ಬಸವರಾಜ್‌ ಭೇಷ್‌ ಎಂದಿದ್ದರಂತೆ.

ಕನ್ನಡ ಕಂಪನಿ ಜವಾಬ್ದಾರಿ ಹೆಗಲಿಗೆ: ವೃತ್ತಿ ರಂಗಭೂಮಿಯ ಸಂಕಷ್ಟದ ದಿನಗಳಲ್ಲೂ ಶಿವಶಂಕರ ಮತ್ತು ಕಾವ್ಯ ದಂಪತಿ ತಾವು ಮರಾಠಿಗರಾದರೂ, ಅನ್ನ ಕೊಟ್ಟ ಕನ್ನಡ ನಾಟಕ ಕಂಪನಿಯೊಂದನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಇನ್ನೇನು ಬಾಗಿಲು ಮುಚ್ಚುವ ಹಂತದಲ್ಲಿದ್ದ ಅವರದೇ ತಾಲೂಕಿನ (ಅಕ್ಕಲಕೋಟ ತಾಲೂಕಿನ ಮೈಂದರ್ಗಿ) ಶ್ರೀ 1008 ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘವನ್ನು ಕಳೆದ ಮೂರು ವರ್ಷದಿಂದ ಮುನ್ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಹಲವು ಸಮಸ್ಯೆ ಎದುರಾದರೂ, ಕನ್ನಡ ಮತ್ತು ಕನ್ನಡ ವೃತ್ತಿ ರಂಗಭೂಮಿಯಿಂದ ಹಿಂದೆ ಸರಿದಿಲ್ಲ.ಮರಾಠಿ ನೆಲದವರು ಕಲಾವಿದರಾಗಿ ಪಾತ್ರ ಮಾಡುತ್ತಾರೆ ಹೊರತು ಕನ್ನಡ ನಾಟಕ ಕಂಪನಿ ಹೊಣೆ ಹೊತ್ತು ಮುನ್ನಡೆಸುವ ಸಾಹಸಕ್ಕೆ ಮುಂದಾಗಲ್ಲ. ಆದರೆ ಈ ಹಿಂದೆ ಮರಾಠಿ ನೆಲದ ರೇಣುಕಾ ಅಕ್ಕಲಕೋಟ ಎಂಬ ಮಹಿಳೆ, ಕನ್ನಡ ನಾಟಕ ಕಂಪನಿ ನಡೆಸುತ್ತಿದ್ದರು. ಅವರು ಕಾಲವಾದ ಬಳಿಕ, ಮರಾಠಿ ನೆಲದವರು ಕನ್ನಡ ನಾಟಕ ಕಂಪನಿಗಳ ಜವಾಬ್ದಾರಿ ಯಾರೂ ಹೊತ್ತಿರಲಿಲ್ಲ. ಆದರೀಗ ಮರಾಠಿ ನೆಲದ ಶಿವಶಂಕರ-ಕಾವ್ಯ ದಂಪತಿ ಮುನ್ನಡೆದಿದ್ದಾರೆ.

Advertisement

ಸಿನಿಮಾ ನಂಟು: ಶಿವಶಂಕರ ರಡ್ಡಿ, ಹಾಸ್ಯ, ನಾಯಕ, ವಿಲನ್‌ ಹೀಗೆ ಎಲ್ಲ ಪಾತ್ರಗಳಿಗೂ ಜೀವ ತುಂಬುವ ಉತ್ತಮ ನಟ. ಹೀಗಾಗಿಯೇ ಅವರಿಗೆ ಹಲವು ಸಿನೆಮಾಗಳಲ್ಲಿ ಪೋಷಕ ನಟನ ಪಾತ್ರಕ್ಕೆ ಅವಕಾಶ ಸಿಕ್ಕಿತ್ತು. ಆದರೆ, ನಾಟಕಗಳು ಚೆನ್ನಾಗಿ ನಡೆದಾಗಲೇ ಅವರಿಗೆ ಸಿನೆಮಾಕ್ಕಾಗಿ ಕರೆ ಬರುತ್ತಿತ್ತು. ಹೀಗಾಗಿ ಕನ್ನಡ ನಾಟಕ ಪ್ರೇಮ ಮುಂದುವರಿಸಲು, ಅವರು ಸಿನಿಮಾಗೆ ಹೋಗಲಿಲ್ಲ. ಆದರೆ, ಅವರ ಪತ್ನಿ ಕಾವ್ಯಾ, 3 ಸಿನಿಮಾ ಹಾಗೂ 13-14 ಕನ್ನಡ ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದಾರೆ.

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next