ಬೀದರ: ರಾಜ್ಯದಲ್ಲಿ ಮರಾಠಿ ಸಮಾಜವನ್ನು 2(ಎ)ಗೆ ಸೇರಿಸುವಂತೆ ಮತ್ತೂಮ್ಮೆ ಜನಾಂದೋಲನ ಶುರುವಾಗಿದ್ದು, ಗುರುವಾರ ಬೀದರ್ ಸೇರಿ ಜಿಲ್ಲೆಯಾದ್ಯಂತ ಬೃಹತ್ ಮರಾಠಾ ಕ್ರಾಂತಿ(ಮೌನ) ಮೋರ್ಚಾ(ರ್ಯಾಲಿ) ನಡೆಸಲಾಯಿತು.
ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ಹಾಕಿದರಲ್ಲದೇ ಮೋರ್ಚಾ ಮೂಲಕ ಮರಾಠಾ ಸಮಾಜವನ್ನು 2(ಎ) ಪ್ರವರ್ಗಕ್ಕೆ ಸೇರ್ಪಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಔರಾದನಲ್ಲಿ ನಡೆದ ಮೋರ್ಚಾದಲ್ಲಿ 25ಸಾವಿರಕ್ಕೂ ಅಧಿ ಕ ಜನ ಭಾಗವಹಿಸಿದ್ದರು. ಶಾಸಕ ಪ್ರಭು ಚವ್ಹಾಣರಿದ್ದರು. ಭಾಲ್ಕಿ ಮತ್ತು ಬಸವಕಲ್ಯಾಣದಲ್ಲಿ ನಡೆದ ರ್ಯಾಲಿಯಲ್ಲಿ 10-15 ಸಾವಿರ ಜನರು ಭಾಗವಹಿಸಿದ್ದರು. ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಬಸವರಾಜ ಪಾಟೀಲ ಅಟ್ಟೂರ, ಬಿ. ನಾರಾಯಣ, ಡಿ.ಕೆ.ಸಿದ್ರಾಮ್ ಮತ್ತಿತರರು ಬೆಂಬಲ ಸೂಚಿಸಿದರು.ಹುಮನಾಬಾದನಲ್ಲಿ 500ಕ್ಕೂ ಹೆಚ್ಚು ಜನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬೀದರನಲ್ಲಿ ಗಣೇಶ ಮೈದಾನದಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾ ಧಿಕಾರಿ ಕಚೇರಿವರೆಗೆ ಮೋರ್ಚಾ ನಡೆಸಲಾಯಿತು. ಕೈಯಲ್ಲಿ ಭಗವಾಧ್ವಜ ಹಿಡಿದು “ಏಕ ಮರಾಠಾ ಲಾಕ್ ಮರಾಠಾ’ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು.
ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಜಿಜಾವ್ ಗಣೇಶ, ಅಂಬಿಕಾ ಟಾಕಳೆ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಡಾ| ಮಹಾದೇವ ಅವರಿಗೆ ಸಲ್ಲಿಸಿದರು.
ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಹೊಣೆಯಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮರಾಠಾ ಸಮಾಜದ ಬೇಡಿಕೆಗಳು
– ರಾಜ್ಯದ ಹಿಂದುಳಿದ ಆಯೋಗದ ಶಿಫಾರಸಿನಂತೆ ಮರಾಠಾ ಸಮಾಜವನ್ನು ಪ್ರವರ್ಗ 3ಬಿಯಿಂದ 2ಎಗೆ ಸೇರಿಸಬೇಕು.
– ರೈತರ ಉತ್ಪಾದನೆಗೆ ಬೆಂಬಲ ಬೆಲೆ ಘೋಷಿಸಿ ಡಾ| ಸ್ವಾಮಿನಾಥನ್ ಆಯೋಗದ ಶಿಫಾರಸು ಅನುಷ್ಠಾನಗೊಳಿಸಬೇಕು.
– ಶಾಹೂ ಮಹಾರಾಜ ಮರಾಠಾ ಅಭಿವೃದ್ಧಿ ಮಹಾಮಂಡಳಿ ಸ್ಥಾಪಿಸಿ ಮರಾಠಾ ಸಮುದಾಯಕ್ಕೆ ಆರ್ಥಿಕ ಮತ್ತು ಇತರೆ ಸೌಲಭ್ಯ ಒದಗಿಸಬೇಕು.
– ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ(ಫೆ.19) ದಿನದಂದು ಸಾರ್ವತ್ರಿಕ ರಜೆ ಘೋಷಿಸಬೇಕು.
– ಮರಾಠಿ ಭಾಷೆಗೆ ಅಲ್ಪಸಂಖ್ಯಾತರ ಭಾಷಾ ಸ್ಥಾನಮಾನ ನೀಡಬೇಕು.