Advertisement

ಮರಾಠ ಆಂದೋಲನ 2ನೇ ದಿನಕ್ಕೆ: ಮತ್ತೋರ್ವ ಪ್ರತಿಭಟನಕಾರ ಆತ್ಮಹತ್ಯೆ

11:51 AM Jul 25, 2018 | Team Udayavani |

ಮುಂಬಯಿ : ಇಂದು ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿರುವ ಮರಾಠ ಮೀಸಲಾತಿ ಚಳವಳಿ ರಾಜ್ಯಾದ್ಯಂತ ಇನ್ನಷ್ಟು ತೀವ್ರತೆಯನ್ನು ಕಂಡಿದೆ. ಇಂದು ಬೆಳಗ್ಗೆ ಮತ್ತೋರ್ವ ಪ್ರತಿಭಟನಕಾರ ಜಗನ್ನಾಥ ಸೋನವಾನೆ ಎಂಬವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

Advertisement

ಸೋನವಾನೆ ಸಾವನ್ನು ಅನುಸರಿಸಿ ಕೋಪೋದ್ರಿಕ್ತರಾಗಿರುವ ಪ್ರತಿಭಟನಕಾರರು ಮುಂಬಯಿಯಲ್ಲಿ ಮಾತ್ರವಲ್ಲದೆ ಇನ್ನೂ ಹಲವು ಕಡೆಗಳಲ್ಲಿ  ರಸ್ತೆಗಳನ್ನು ಬ್ಲಾಕ್‌ ಮಾಡಿ ವಾಹನ ಸಂಚಾರವನ್ನು ತಡೆದಿದ್ದಾರೆ. 

ಮೊನ್ನೆ ಸೋಮವಾರ ಮೀಸಲಾತಿ ಪ್ರತಿಭಟನಕಾರ ಕಾಕಾಸಾಹೇಬ್‌ ಶಿಂಧೆ ಔರಂಗಾಬಾದ್‌ ಸಮೀಪ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮರಾಠ ಸಮುದಾಯದವರು ತಮಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಆಂದೋಲನ ನಡೆಸುತ್ತಿದ್ದಾರೆ. 

ಆತ್ಮಾಹುತಿ ಮಾಡಿಕೊಂಡಿರುವ ಕಾಕಾಸಾಹೇಬ್‌ ಶಿಂಧೆ ಮತ್ತು ಜಗನ್ನಾಥ ಸೋನವಾನೆ ಅವರಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದೂ ಮರಾಠ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಮರಾಠ ಕ್ರಾಂತಿ ಸಮಾಜ ಇಂದು ಬುಧವಾರ ಶಾಂತಿಯುತ ಬಂದ್‌ ಗೆ ಕರೆ ನೀಡಿದೆ. ಪ್ರತಿಭಟನಕಾರರು ಮುಂಬಯಿ ಬಂದ್‌ ಗೆ ಕರೆ ನೀಡಿದ್ದಾರೆ. 

Advertisement

ನಿನ್ನೆಯ ಆಂದೋಲನ ಹಿಂಸೆಗೆ ತಿರುಗಿದ ಪರಿಣಾಮವಾಗಿ ಕಲ್ಲೆಸೆತಕ್ಕೆ ಗುರಿಯಾಗಿ ಓರ್ವ ಕಾನ್‌ಸ್ಟೆಬಲ್‌ ಮೃತಪಟ್ಟು ಇತರ 9 ಮಂದಿ ಪೊಲೀಸರು ಗಾಯಗೊಂಡಿದ್ದರು. ಮೂವರು ಪ್ರತಿಭಟನಕಾರರು ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸ್‌ ಮತ್ತು ಇತರ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. 

ಈ ನಡುವೆ ಔರಂಗಾಬಾದ್‌ ಜಿಲ್ಲೆಯಲ್ಲಿ ಗಾಳಿ ಸುದ್ದಿಯನ್ನು ತಡೆಯುವ ನಿಟ್ಟಿನಲ್ಲಿ ಇಂಟರ್‌ ನೆಟ್‌ ಸೇವೆಯನ್ನು ಅಮಾನತುಗೊಳಿಸಲಾಗಿದೆ. ಜಲ್‌ನಾ ದಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡೆಸೆದು ಪ್ರತಿಭಟನಕಾರರನ್ನು ಚದುರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next