ಹುಬ್ಬಳ್ಳಿ: ಕೆಲಸಕ್ಕಿದ್ದ ಅಂಗಡಿಯಲ್ಲಿಯೇ ಎಲ್‌ಇಡಿ ಟಿವಿಗಳನ್ನು ಕದ್ದು ಮಾಲೀಕರಿಗೆ ವಂಚಿಸಿದ ಟಿವಿ ಮಾರಾಟ ಮಳಿಗೆಯೊಂದರ ಮಾರುಕಟ್ಟೆ ವ್ಯವಸ್ಥಾಪಕ ಹಾಗೂ ಇಬ್ಬರು ಸಹಚರರನ್ನು ಬಂಧಿಸಿರುವ ಪೊಲೀಸರು ಅಂದಾಜು 5ಲಕ್ಷ ರೂ. ಮೌಲ್ಯದ 22 ಎಲ್‌ಇಡಿ ಟಿವಿ ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಎಲ್‌ಇಡಿ ಟಿವಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ ಮಾಬಸುಬಾನಿ ಕಟ್ಟೆ ಬಳಿಯ ನಿವಾಸಿ ಯು. ತಬ್ರೇಜ್ ಬೆಂಗಳೂರು, 10ನೇ ನಂಬರ್ ಕನ್ನಡ ಶಾಲೆ ಹಿಂಬದಿ ನಿವಾಸಿ ನಿಂಗರಾಜ ಕೆ. ಮುಗಳಿ, ಕಲಘಟಗಿ ತಾಲೂಕು ಕುರುವಿನಕೊಪ್ಪ ಗ್ರಾಮದ ಮಂಜುನಾಥ ಎಸ್. ರಾಯ್ಕರ ಬಂಧಿತರಾಗಿದ್ದಾರೆ ಎಂದರು.
ಗೋಕುಲ ರಸ್ತೆಯ ಸುರೇಶ ಎಂಟರ್‌ಪ್ರೈಸಸ್‌ನ ಇಲೆಕ್ಟ್ರಾನಿಕ್ ಡಿವಿಜನ್ ಟಿವಿ ಶೋರೂಮ್‌ನಲ್ಲಿ ತಬ್ರೇಜ್ ಮಾರುಕಟ್ಟೆ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. 2016ರ ಡಿ. 1ರಿಂದ 2017ರ ಮಾ. 20ರ ಅವಧಿಯಲ್ಲಿ ಶೋರೂಮ್‌ನ ಗೋದಾಮಿನಲ್ಲಿಟ್ಟಿದ್ದ ವಿವಿಧ ಕಂಪನಿಯ 92 ಎಲ್‌ಇಡಿ ಟಿವಿಗಳನ್ನು ಎಗರಿಸಿದ್ದ. ಬೆಳಗ್ಗೆ 7:00ರಿಂದ 10:00 ಗಂಟೆ ಅವಧಿಯಲ್ಲಿ ತನ್ನ ನಾಲ್ವರು ಸಹಚರರೊಂದಿಗೆ ಕಳವು ಮಾಡುತ್ತಿದ್ದ.
ನಂತರ ಅವುಗಳನ್ನು ಹಳ್ಳಿಗಳಿಗೆ ತೆರಳಿ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಶೋರೂಮ್‌ಗಳಲ್ಲಿ ಟಿವಿಗಳು ಕಳುವಾಗುತ್ತಿರುವ ಬಗ್ಗೆ ಮಳಿಗೆ ವ್ಯವಸ್ಥಾಪಕ ದತ್ತಾತ್ರೇಯ ಎಂಬುವರು ಗೋಕುಲ ರಸ್ತೆ ಠಾಣೆಯಲ್ಲಿ ದೂರು ಕೊಟ್ಟಿದ್ದರು. ದೂರಿನನ್ವಯ ಠಾಣಾಧಿಕಾರಿ ಡಿ.ಕೆ. ಪ್ರಭುಗೌಡ, ಸಿಬ್ಬಂದಿ ಎನ್.ಐ. ನೀಲಗಾರ, ಸಂಜು ಕುರಹಟ್ಟಿ, ಬಸವರಾಜ ಬೆಳಗಾವಿ, ಎಸ್. ಎಚ್. ತಹಶೀಲ್ದಾರ, ಎಸ್.ಆರ್. ಹೆಬಸೂರ, ಆರ್.ವೈ. ಕೋತಂಬ್ರಿ ಕಾರ್ಯಪ್ರವೃತ್ತರಾದರು.
ಮಳಿಗೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ μಲಿಪ್ಸ್ ಕಂಪನಿಯ 15 ಹಾಗೂ ಸ್ಕೈವರ್ಥ್ ಕಂಪನಿಯ 7 ಸೇರಿ ಒಟ್ಟು 22ಎಲ್‌ಇಡಿ ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಇನ್ನಿಬ್ಬರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.