ಸಿರುಗುಪ್ಪ: ತಾಲೂಕಿನಲ್ಲಿ ಈ ಬಾರಿ ಶುಕ್ರವಾರ ಮತ್ತು ಶನಿವಾರ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತಿದ್ದು, ಗುರುವಾರ ಮತ್ತು ಶುಕ್ರವಾರ ಮಣ್ಣೆತ್ತುಗಳನ್ನು ರೈತರು ಖರೀದಿಸುವ ದೃಶ್ಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಂಡುಬಂತು. ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಮಣ್ಣೆತ್ತುಗಳ ವ್ಯಾಪಾರವು ಜೋರಾಗಿಯೇ ನಡೆದಿದೆ.
ಕಾರಹುಣ್ಣಿಮೆ ನಂತರ ಬರುವುದೇ ಮಣ್ಣೆತ್ತಿನ ಅಮಾವಾಸ್ಯೆ. ಮಣ್ಣೆತ್ತಿನ ಅಮವಾಸ್ಯೆಯಂದು ರೈತರು ಹೊಲಕ್ಕೆ ಹೋಗಿ ಜಿಗುಟಾದ ಮಣ್ಣನ್ನು ತಂದು ಮನೆಯಲ್ಲಿ ಮಣ್ಣಿನಿಂದ ಜೋಡಿ ಎತ್ತುಗಳನ್ನು ಮಾಡುತ್ತಾರೆ. ನಂತರ ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ.
ಕೆಲವರು ಬಣ್ಣ ಹಚ್ಚಿದರೆ, ಇನ್ನು ಕೆಲವರು ಅಲಂಕಾರಿಕ ವಸ್ತುಗಳನ್ನು ಹಚ್ಚಿ ಅವುಗಳಿಗೆ ಸಿಂಗಾರ ಮಾಡುತ್ತಾರೆ. ನಂತರ ದೇವರ ಕೋಣೆಯಲ್ಲಿಟ್ಟು ಪೂಜೆ ಸಲ್ಲಿಸುತ್ತಾರೆ. ನಂತರ ಗ್ರಾಮದಲ್ಲಿರುವ ದೇವಸ್ಥಾನಗಳಿಗೆ ತೆರಳಿ ಮಣ್ಣಿನ ಎತ್ತುಗಳನ್ನು ಪೂಜೆ ಮಾಡಿಕೊಂಡು ಬಂದು ನಂತರ ದೇವರಕೋಣೆಯಲ್ಲಿಟ್ಟು ಹೋಳಿಗೆ, ಹುಗ್ಗಿ ನೈವೇದ್ಯವನ್ನು ಸಮರ್ಪಿಸುತ್ತಾರೆ. ನಂತರ ತಮ್ಮ ಮನೆಯ ಹಿತ್ತಲು ಅಥವಾ ಜಮೀನಿನ ಮಣ್ಣಿನಲ್ಲಿಎತ್ತುಗಳನ್ನು ತೆಗೆದುಕೊಂಡು ಹೋಗಿ ಇಡುತ್ತಾರೆ. ಆ ಮೂಲಕ ಭೂಮಿತಾಯಿ ಮತ್ತು ಎತ್ತುಗಳು ನಮ್ಮನ್ನು ಕಾಪಾಡಿಯೆಂದು ಪ್ರಾರ್ಥಿಸುತ್ತಾರೆ.
ಗ್ರಾಮೀಣ ಭಾಗದಲ್ಲಿ ಕೆಲವೇ ಕೆಲ ರೈತರು ತಮ್ಮ ಜಮೀನಿನ ಮಣ್ಣನ್ನು ತಂದು ಎತ್ತುಗಳನ್ನು ಮಾಡುತ್ತಾರೆ. ಆದರೆ ಅನೇಕ ರೈತರು ಮಾರಾಟಗಾರರಿಂದ ಮಣ್ಣಿನ ಎತ್ತುಗಳನ್ನು ಖರೀದಿಸುತ್ತಾರೆ. ಈ ಬಾರಿ ರೂ. 20ರಿಂದ 200ರ ವರೆಗೆ ಬೆಲೆಗಳಿಗೆ ಮಣ್ಣಿನ ಎತ್ತುಗಳುಮಾರಾಟವಾಗುತ್ತಿವೆ. ನಮ್ಮ ಕುಟುಂಬದವರು ತಲೆಮಾರುಗಳಿಂದಲೂ ಮಣ್ಣೆತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ ಕೆಂಚನಗುಡ್ಡ ಗ್ರಾಮದಿಂದ ಎತ್ತುಗಳ ತಯಾರಿಕೆಗೆ ಬೇಕಾದ ಮಣ್ಣನ್ನು ತಂದು ಅದನ್ನು ಹದಮಾಡಿ ಎತ್ತುಗಳನ್ನು ತಯಾರಿಸಿ ವಿವಿಧ ಬಣ್ಣಗಳಿಂದ ಕೊಂಬು, ಹಣೆ, ಬೆನ್ನು ಸಿಂಗರಿಸಲಾಗುತ್ತದೆ. ನಮ್ಮ ಕುಟುಂಬದ ಇಬ್ಬರು ಸದಸ್ಯರೊಂದಿಗೆ ಎತ್ತುಗಳನ್ನು ತಯಾರಿಸುತ್ತೇವೆ. ಎತ್ತುಗಳ ತಯಾರಿಕೆ ನಾವು ಸುಮಾರು ರೂ. 10 ಸಾವಿರದವರೆಗೆ ಖರ್ಚು ಬರುತ್ತದೆ. ನಾವು ತಯಾರಿಸಿದ ಎತ್ತುಗಳು ಮಾರಾಟವಾದರೆ ನಮಗೆ ಸುಮಾರು ರೂ. 10 ಸಾವಿರ ಲಾಭ ಬರುತ್ತದೆ ಎಂದು ನಗರದ ಕುಂಬಾರ ಎನ್. ಈರಣ್ಣ ತಿಳಿಸಿದ್ದಾರೆ.