ಬೆಂಗಳೂರು: ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ಗದ್ದಲ ಎಬ್ಬಿಸಿದ
ಪ್ರಕರಣಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗದ್ದಲ ಎಬ್ಬಿಸಿದವರು ಬಿಜೆಪಿ ಹಾಗೂ ಆರ್‌ಎಸ್‌ಎಸ್
ಕಾರ್ಯಕರ್ತರು ಎಂದು ಆರೋಪಿಸಿ, ಬಿಜೆಪಿಯೇ ಇದಕ್ಕೆ ಹೊಣೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೆಲವು ಪಟ್ಟಭದ್ರ ಶಕ್ತಿಗಳು ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿವೆ. ಅಲ್ಲಿ ಬಂದು ಬೇಕೆಂತಲೇ ಘೋಷಣೆ ಹಾಕಿವೆ. ನಮಗೂ ಆ ರೀತಿ ಮಾಡಲು ಬರುವುದಿಲ್ಲವೇ? ಮೋದಿ ಬಂದಾಗ ನಮ್ಮ ಕಾರ್ಯಕರ್ತರೂ ಆ ರೀತಿ ಮಾಡಬಹುದಲ್ಲವೇ? ಬಿಜೆಪಿ ಎಲಿಮೆಂಟ್ಸ್ ಕ್ರಿಯೇಟೆಡ್ ನ್ಯೂಸೆನ್ಸ್, ಇಟ್ಸ್ ವೆರಿ ಬ್ಯಾಡ್ ಎಂದು ಕಿಡಿಕಾರಿದರು.
ಎಚ್‌ಡಿಕೆ ಸಲಹೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಅಮಿತ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ನಡವಳಿಕೆ ಮೊದಲು ಕಲಿಸಲಿ. ಗಣ್ಯರೊಬ್ಬರು ರಾಜ್ಯಕ್ಕೆ ಬಂದರೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ಬಿಜೆಪಿಯವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.