ದೇವದುರ್ಗ: ಪುರಸಭೆ ಮುಖ್ಯಾಧಿಕಾರಿ ಹುದ್ದೆ ಸೇರಿ 40ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಆಡಳಿತ ಅಭಿವೃದ್ಧಿಗೆ ಮಂಕು ಕವಿದಿದೆ. ಸರ್ಕಾರ ಹುದ್ದೆಗಳ ಭರ್ತಿಗೆ ಮುಂದಾಗದ ಹಿನ್ನೆಲೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹರಸಾಹಸ ಪಡುವಂತಾಗಿದೆ. ಹೀಗಾಗಿ ವಾರ್ಡ್‌ಗಳ ಅಭಿವೃದ್ಧಿ ಕೆಲಸಗಳು ಆಮೆಗತಿಯಲ್ಲಿ ಸಾಗಿವೆ.
ಪುರಸಭೆಯಲ್ಲಿ ಮುಖ್ಯಾಧಿಕಾರಿ ಹುದ್ದೆ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಮಂಜೂರು ಹುದ್ದೆಗಳು 97 ಇದ್ದು ಅದರಲ್ಲಿ 48 ಭರ್ತಿ 49 ಹುದ್ದೆಗಳು ಸುಮಾರು ವರ್ಷಗಳಿಂದ ಖಾಲಿ ಇವೆ. ಆರೇಳು ತಿಂಗಳಿಗೊಮ್ಮೆ ಪ್ರಭಾರಿ ಮುಖ್ಯಾಧಿ ಕಾರಿ ಬದಲಾಗುತ್ತಿರುವ ಹಿನ್ನೆಲೆ ವಾರ್ಡ್‌ಗಳ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಸಮುದಾಯ ಸಂಘಟನಾ ಧಿಕಾರಿ, ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಸಮುದಾಯ ಸಂಘಟಕರು, ದ್ವಿತೀಯ ದರ್ಜೆ ಸಹಾಯಕರು, ಜೆಇ 15 ಪೌರ ಕಾರ್ಮಿಕರು ಸೇರಿದಂತೆ ಹಲವು ಹುದ್ದೆಗಳು ಪುರಸಭೆಯಲ್ಲಿ ಖಾಲಿ ಖಾಲಿ ಎಂಬಂತಾಗಿದೆ. ಸರ್ಕಾರ ಹುದ್ದೆಗಳ ಭರ್ತಿಗೆ ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಹುದ್ದೆಗಳೇ ಅಡ್ಡಿಯಾದಂತಾಗಿದೆ.
ತಾತ್ಕಾಲಿಕ ಜೆಇ ನೇಮಕ: ಪಟ್ಟಣದಲ್ಲಿ ಮೂರನೇ ಹಂತದ ನಗರೋತ್ಥಾನ ಯೋಜನೆಡಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಶಾಸಕರ ಅನುದಾನ ಸೇರಿ ಇತರೆ ಯೋಜನೆ ಮೂಲಕ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಎರಡು ಇಂಜಿನಿಯರ್ ಹುದ್ದೆಗಳು ಖಾಲಿರುವ ಕಾರಣ ಜಿಲ್ಲಾಧಿಕಾರಿ ಕೆಎಂಆರ್‌ಪಿ ಯೋಜನೆಯಲ್ಲಿ ಮಲ್ಲಣ್ಣ ಎಂಬುವರನ್ನು ನೇಮಕ ಮಾಡಲಾಗಿದ್ದು, ನಾಲ್ಕೈದು ವರ್ಷಗಳ ಹಿಂದೆ ಜಾಕೀರ್ ಎಂಬುವರನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಲಾಗಿದೆ. ತಾತ್ಕಾಲಿಕ ಇಂಜಿನಿಯರ್‌ಗಳು ಇದ್ದು, ಕಾಮಗಾರಿ ಪರಿಶೀಲನೆ ಸ್ಥಳಕ್ಕೆ ಅಪರೂಪ ಭೇಟಿ ಎನ್ನಲಾಗುತ್ತಿದೆ. ಕಳಪೆ ಕಾಮಗಾರಿ ಕುರಿತು ವಾರ್ಡ್ ನಿವಾಸಿಗಳಿಂದ ದೂರು ಬಂದಲ್ಲಿ ಕ್ರಮ ಕೈಗೊಳ್ಳುವವರು ಇಲ್ಲದಂತಾಗಿದೆ.
ವಿದ್ಯಾರ್ಥಿಗಳಿಗೆ ಸೌಲಭ್ಯವಿಲ್ಲ: ಪುರಸಭೆ ಇಲಾಖೆಯಿಂದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯ ಒದಗಿಸಲಾಗುತ್ತದೆ. ಸಮುದಾಯ ಸಂಘಟನಾ ಧಿಕಾರಿ ಹುದ್ದೆ ಖಾಲಿ ಇರುವ ಕಾರಣ ಪ್ರತಿ ವರ್ಷ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಎಸ್‌ಸಿ ವಿದ್ಯಾರ್ಥಿಗಳಿಗೆ ಶೇ.20ರಲ್ಲಿ ಎಸ್‌ಟಿ ವಿದ್ಯಾರ್ಥಿಗಳಿಗೆಶೇ.7ರಲ್ಲಿ ಹಲವು ಸೌಲಭ್ಯ ನೀಡಲಾಗುತ್ತಿದೆ. ಕೋವಿಡ್ ವೈರಸ್ ಭೀತಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಯೋಜನೆ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಜಾರಿಗೆ ತರುವಂತ ಪ್ರತಿಯೊಂದು ಯೋಜನೆಗಳು ಸಕಾಲಕ್ಕೆ ಅನುಷ್ಠಾನಗೊಳಿಸಲು ಅಧಿಕಾರಿಗಳ ಹುದ್ದೆ ಖಾಲಿಯಾದ ಹಿನ್ನೆಲೆಯಲ್ಲಿ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.
ಅಧ್ಯಕ್ಷರ ಮುಂದೆ ಸವಾಲು: ದಿನಗೂಲಿ ಪೌರ ಕಾರ್ಮಿಕರ ಸುಮಾರು ತಿಂಗಳ ವೇತನ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ನಿವಾಸಿಗಳು ಪೇಚಾಡುವಂತಾಗಿದೆ. ಸಾರ್ವಜನಿಕ ಕ್ಲಬ್ ಆವರಣದಿಂದ ಡಾ|ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ರಸ್ತೆಯ ಎರಡು ಬದಿ ಹೈಮಾಸ್ಟ್ ದೀಪಗಳು ಬೆಳಕು ನೀಡಲಾರದಷ್ಟು ಸಮಸ್ಯೆ ಎದುರಾಗಿದೆ. ಬಹುತೇಕ ವಾರ್ಡ್‌ನಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ. ಇಲ್ಲಿನ ಸಮಸ್ಯೆ ನೂತನ ಅಧ್ಯಕ್ಷರ ಮುಂದಿನ ಸವಾಲುಗಳು ಎಂಬಂತಾಗಿದೆ.
ಕಚೇರಿಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಇರುವುದು ಮೇಲಾಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಕೆಎಂಆರ್‌ಪಿ ಯೋಜನೆ ಮೂಲಕ ಜೆಇ ನೇಮಕ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತದೆ. –
ಶರಣಪ್ಪ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ
ಇತ್ತೀಚೆಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಪುರಸಭೆ ಇಲಾಖೆ ಸಮಸ್ಯೆ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುತ್ತದೆ. –
ಹನುಮಗೌಡ ಶಂಕರಬಂಡಿ, ಪುರಸಭೆ ಅಧ್ಯಕ್ಷ
-ನಾಗರಾಜ ತೇಲ್ಕರ್