Advertisement

ಹಲಸಿನಿಂದ ಹಲವು ತಿಂಡಿ

07:30 AM Apr 25, 2018 | |

ಬೇಸಿಗೆಯ ಜೊತೆಗೇ ಬರುವುದು ಹಲಸಿನ ಸೀಸನ್‌. ಮಲೆನಾಡು ಮತ್ತು ಕರಾವಳಿಯಲ್ಲಿ ಈಗ ಮನೆ ಮನೆಗಳಲ್ಲಿ ಹಲಸಿನ ಹಪ್ಪಳ, ಸಂಡಿಗೆ, ಹಣ್ಣಿನ ದೋಸೆ, ಕಡಬು ಹೀಗೆ ವಿವಿಧ ಪದಾರ್ಥಗಳನ್ನು ಮಾಡುವುದು ಸಾಮಾನ್ಯ. ಬಯಲುಸೀಮೆಯಲ್ಲಿ ಎಳೆಯ ಹಲಸಿನ ಕಾಯಿ ಬಳಸಿ ಪಲ್ಯ ಮಾಡುವುದುಂಟು. ಹಲಸಿನ ಹಣ್ಣಿಗೆ ಪುಡಿ ಮಾಡಿದ ಬೆಲ್ಲ, ಕಾಯಿತುರಿ ಸೇರಿಸಿ ಫ‌ಲಾಹಾರ ಎಂದು ಚಪ್ಪರಿಸುವುದುಂಟು. ಹಲಸಿನ ಕಾಯಿ ಮತ್ತು ಹಣ್ಣಿನ ಕೆಲವು ರೆಸಿಪಿಗಳು…

Advertisement

1.ಹಲಸಿನಕಾಯಿ ವಡೆ
ಬೇಕಾಗುವ ಸಾಮಗ್ರಿ: ಚೆನ್ನಾಗಿ ಬಲಿತ ಹಲಸಿನ ಕಾಯಿ ತೊಳೆ 10-15, ಅಕ್ಕಿ 2 ಕಪ್‌, ಹಸಿ ಮೆಣಸಿನಕಾಯಿ 3-4, ತೆಂಗಿನತುರಿ- 1/2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಹಿಟ್ಟನ್ನು ತಟ್ಟಲು ಬಾಳೆ ಎಲೆ ಅಥವಾ ಬೈಂಡಿಂಗ್‌ ಪೇಪರ್‌.

ತಯಾರಿಸುವ ವಿಧಾನ: ಅಕ್ಕಿಯನ್ನು ನೀರಿನಲ್ಲಿ ಒಂದು ಗಂಟೆ ನೆನೆಸಿ, ನಂತರ ನೀರು ಬಸಿದು ಇಡಿ. ತೊಳೆಯನ್ನು ಚಿಕ್ಕದಾಗಿ ಹೆಚ್ಚಿ. ಅಕ್ಕಿ, ಹೆಚ್ಚಿದ ತೊಳೆ, ತೆಂಗಿನ ತುರಿ, ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ಸ್ವಲ್ಪ ಮಾತ್ರ ನೀರು ಸೇರಿಸಿ ನುಣ್ಣಗೆ ಗಟ್ಟಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಬಾಳೆಲೆಗೆ ಎಣ್ಣೆ ಸವರಿ, ರುಬ್ಬಿದ ಹಿಟ್ಟನ್ನು  ನಿಂಬೆ ಗಾತ್ರದ  ಉಂಡೆಗಳನ್ನು ಮಾಡಿ ತೆಳುವಾಗಿ ತಟ್ಟಿ ಕೆಂಬಣ್ಣ ಬರುವವರೆಗೆ ಕರಿಯಿರಿ.

2. ಹಲಸಿನಕಾಯಿಯ ಖಾರದ ದೋಸೆ
ಬೇಕಾಗುವ ಸಾಮಗ್ರಿ: ಬಲಿತ ಹಲಸಿನ ತೊಳೆ-15, ಅಕ್ಕಿ ಎರಡು ಕಪ್‌, ತೆಂಗಿನತುರಿ ಅರ್ಧ ಕಪ್‌, ಹಸಿಮೆಣಸಿನಕಾಯಿ 4-5, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೆನೆಸಿಡಿ. ನಂತರ ನೀರು ತೆಗೆದು ಬಿಡಿ. ಹಲಸಿನ ತೊಳೆಯನ್ನು ಚಿಕ್ಕದಾಗಿ ಹೆಚ್ಚಿ, ಅಕ್ಕಿ,ತೆಂಗಿನತುರಿ, ಹಸಿ ಮೆಣಸಿನಕಾಯಿ, ಉಪ್ಪು ಸೇರಿಸಿ ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕಾವಲಿಗೆ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹಾಕಿ. ಎರಡೂ ಬದಿಯಲ್ಲಿ ಬೇಯಿಸಿ ತುಪ್ಪ, ಬೆಣ್ಣೆಯೊಂದಿಗೆ ಅಥವಾ ತೆಂಗಿನಕಾಯಿ ಚಟ್ನಿಜೊತೆಗೆ ಸವಿಯಿರಿ.

Advertisement

3. ಹಲಸಿನ ಹಣ್ಣಿನ ಕಡಬು(ಗಟ್ಟಿ)
ಬೇಕಾಗುವ ಸಾಮಗ್ರಿ: ಅಕ್ಕಿ ಎರಡು ಕಪ್‌, ಬೆಲ್ಲ ಒಂದು ಕಪ್‌, ಹಲಸಿನ ಹಣ್ಣಿನ ತೊಳೆ 20-25, ತೆಂಗಿನ ತುರಿ ಒಂದು ಕಪ್‌. (ಬೇಯಿಸಲು ಸಾಗುವಾನಿ ಅಥವಾ ಬಾಳೆಲೆ) ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಅಕ್ಕಿಯನ್ನು  ಒಂದು ಗಂಟೆ ನೆನೆಸಿ, ಬಸಿದಿಡಿ. ಹಲಸಿನ ಹಣ್ಣಿನ ತೊಳೆಯನ್ನು ಚಿಕ್ಕದಾಗಿ ಹೆಚ್ಚಿ. ಅಕ್ಕಿ, ತೊಳೆ, ಕಾಯಿತುರಿ, ಬೆಲ್ಲ, ಉಪ್ಪು ಹಾಕಿ ನೀರು ಸೇರಿಸದೆ ನುಣ್ಣಗೆ ರುಬ್ಬಿ. ಈ ಹಿಟ್ಟನ್ನು ಸಾಗುವಾನಿ ಅಥವಾ ಬಾಳೆಲೆಯಲ್ಲಿಟ್ಟು ನಾಲ್ಕು ಬದಿಯಲ್ಲಿ ಮಡಚಿ. ನಂತರ ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಒಳಗಡೆ ತಟ್ಟೆ ಇಟ್ಟು ಹಬೆಯಲ್ಲಿ ಬೇಯಿಸಿ. ಬೇಯಲು ಅರ್ಧ ಗಂಟೆ ಬೇಕಾಗುತ್ತದೆ. ಬೆಂದ ನಂತರ ಕೆಂಬಣ್ಣದ ಕಡಬು ಸವಿಯಲು ಸಿದ್ಧ. ತುಪ್ಪ, ಬೆಣ್ಣೆ ಅಥವಾ ಜೇನುತುಪ್ಪದೊಂದಿಗೆ ಸವಿದರೆ ಬಲುರುಚಿ. 

4. ಹಲಸಿನ ಹಣ್ಣಿನ ಅಪ್ಪ(ಮುಳ್ಕ)
ಬೇಕಾಗುವ ಸಾಮಗ್ರಿ:
ಅಕ್ಕಿ ಎರಡು ಕಪ್‌, ಹಲಸಿನ ಹಣ್ಣಿನ ತೊಳೆ 30, ತೆಂಗಿನ ತುರಿ ಒಂದು ಕಪ್‌, ಬೆಲ್ಲದ ಪುಡಿ ಒಂದು ಕಪ್‌ (ಸಿಹಿ ಬೇಕಿದ್ದರೆ) ಎಳ್ಳು ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.

ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೆನೆಸಿ, ನಂತರ ತೊಳೆದು ನೀರು ಬಸಿದುಕೊಳ್ಳಿ. ಅಕ್ಕಿ, ಹಣ್ಣಿನ ತೊಳೆ, ಬೆಲ್ಲ ಮತ್ತು ಉಪ್ಪನ್ನು ಹಾಕಿ ನೀರು ಸೇರಿಸದೆ ನುಣ್ಣಗೆ ರುಬ್ಬಿ. ಹಿಟ್ಟು ಗಟ್ಟಿಯಾಗಿರಲಿ. ಹಿಟ್ಟಿಗೆ ಎಳ್ಳನ್ನು ಸೇರಿಸಿ ಸಣ್ಣ ಉಂಡೆ ಮಾಡಿ ಎಣ್ಣೆಯಲ್ಲಿ ಕೆಂಬಣ್ಣ ಬರುವವರೆಗೆ ಬೇಯಿಸಿ. ಸರಿಯಾಗಿ ಇಟ್ಟರೆ ಮುಳ್ಕ 2-3 ದಿನ ಕೆಡುವುದಿಲ್ಲ. ತುಪ್ಪ, ಜೇನುತುಪ್ಪದೊಂದಿಗೆ ತಿಂದರೆ ರುಚಿ ಜಾಸ್ತಿ. 

ವೇದಾವತಿ ಎಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next