Advertisement

“ಇ’ಮತದಾನ ಬೇಡ, “ಆ’ಮತದಾನವೇ ಬೇಕು

06:00 AM Aug 28, 2018 | Team Udayavani |

ನವದೆಹಲಿ: ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ಕಾರ್ಯವೈಖರಿ ಹಾಗೂ ವಿಶ್ವಾಸಾರ್ಹತೆಗಳ ಬಗ್ಗೆ ಅನೇಕ ಸಂದೇಹಗಳಿರುವ ಹಿನ್ನೆಲೆಯಲ್ಲಿ, ಮುಂದಿನ ಲೋಕಸಭೆ ಚುನಾವಣೆಯಿಂದ ಹಳೆಯ ಮತಪತ್ರ ಆಧಾರಿತ ಚುನಾವಣಾ ಪದ್ಧತಿ ಜಾರಿಗೊಳಿಸಬೇಕೆಂದು ನಾನಾ ರಾಜಕೀಯ 
ಪಕ್ಷಗಳು ಚುನಾವಣಾ ಆಯೋಗವನ್ನು (ಇಸಿ) ಆಗ್ರಹಿಸಿವೆ. 

Advertisement

ಚುನಾವಣಾ ಪ್ರಕ್ರಿಯೆಗಳಲ್ಲಿ ಹೊಸ ಸುಧಾರಣೆಗಳನ್ನು ಕೈಗೊಳ್ಳಲು ನಿರ್ಧರಿಸಿರುವ ಇಸಿ, ಸೋಮವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ಬಲವಾದ ಆಗ್ರಹ ವ್ಯಕ್ತವಾಗಿದೆ. ಇದಲ್ಲದೆ, ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಗಳನ್ನು ನಡೆಸಲು ವಿಪಕ್ಷಗಳು ಅಸಮ್ಮತಿ ವ್ಯಕ್ತಪಡಿಸಿವೆ. ಸಭೆಯಲ್ಲಿ, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ, ಪ್ರಮುಖ ವಿಪಕ್ಷ ಕಾಂಗ್ರೆಸ್‌, ತೃಣ ಮೂಲ ಕಾಂಗ್ರೆಸ್‌, ಬಿಎಸ್‌ಪಿ ಸೇರಿ 7 ರಾಷ್ಟ್ರೀಯ ಪಕ್ಷಗಳು ಹಾಗೂ 51 ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಬ್ಯಾಲೆಟ್‌ ಪೇಪರ್‌ ಬರಲಿ: ಅನೇಕ ಪಕ್ಷಗಳು ಚುನಾವಣೆಗಳಲ್ಲಿ ಈ ಹಿಂದೆ ಬಳಕೆಯಲ್ಲಿದ್ದ ಬ್ಯಾಲೆಟ್‌ ಪೇಪರ್‌ ಪದ್ಧತಿಯನ್ನೇ ಪುನಃ ಜಾರಿ ಮಾಡ‌ಬೇಕೆಂದು ಆಗ್ರಹಿಸಿದವು. ಇದಕ್ಕೆ ಪೂರಕವಾಗಿ, ಇವಿಎಂ ಕಾರ್ಯ ವೈಖರಿಯ ಬಗ್ಗೆ ಅನುಮಾನಿಸಿದ ಕಾಂಗ್ರೆಸ್‌, ಎಸ್ಪಿ, ಬಿಎ ಸ್ಪಿ, ಟಿಎಂಸಿ ಮತ್ತಿತರ ಪಕ್ಷಗಳು, ಒಮ್ಮೆ ದೋಷ ಪೂರಿತ ಇವಿಎಂನಲ್ಲಿ ಯಾವ ಗುಂಡಿ ಒತ್ತಿದರೂ ಒಂದು ಪಕ್ಷಕ್ಕೇ ಮತ 
ದಾಖಲಾಗುತ್ತವೆ. ಈ ಇವಿಯಂಗಳನ್ನು ಎಲ್ಲಿ ದುರಸ್ತಿ ಮಾಡಿಸಲಾಗುತ್ತಿದೆ ಎಂಬುದರ ಮಾಹಿತಿ ನೀಡಬೇಕೆಂದು ಕೋರಿದರು.  ಇದೇ ವೇಳೆ, ಮತದಾರರ ಆಧಾರ್‌ ಸಂಖ್ಯೆಯನ್ನೂ ಮತದಾರರ ಪಟ್ಟಿಗೆ ಲಿಂಕ್‌ ಮಾಡುವ ಮೂಲಕ, ಅಕ್ರಮವನ್ನು ತಡೆಗಟ್ಟುವಂತೆಯೂ ಕೆಲವು ಪಕ್ಷಗಳು ಮನವಿ ಮಾಡಿದವು.

ಮತ ಪತ್ರ ಆಗ್ರಹ ಖೇದಕರ: ಆಯೋಗ ಸಭೆಯ ನಂತರ ನಡೆದ ಸುದ್ದಿ ಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌, ವಿಪಕ್ಷಗಳು ಬ್ಯಾಲೆಟ್‌ ಪೇಪರ್‌ ಪದ್ಧತಿಗೆ ಆಗ್ರಹಿಸಿರುವುದನ್ನು “ಖೇದಕರ’ ಎಂದು ಬಣ್ಣಿಸಿದರು. ಮತಪತ್ರ ಪದ್ಧತಿ ಮರು ಜಾರಿಗೊಂಡರೆ ಈ ಹಿಂದೆ ಆಗುತ್ತಿದ್ದ ಮತಗಟ್ಟೆಗಳ ಮೇಲೆ ಮುತ್ತಿಗೆ ಹಾಕುವಂಥ ಘಟನೆಗಳು ನಡೆಯುತ್ತವೆ. ಆಯೋಗಕ್ಕೆ ಇಂಥ ಘಟನೆಗಳು ಪುನರಾವರ್ತನೆಗೊಳ್ಳುವುದು ಇಷ್ಟವಿಲ್ಲ. ಇನ್ನು, ವಿವಿಪ್ಯಾಟ್‌ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. “ಒಂದೇ ದೇಶ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಅನೇಕ ಪಕ್ಷಗಳು ತಿರಸ್ಕರಿಸಿವೆ. ಕೆಲ ಪಕ್ಷಗಳು ಏಕಕಾಲ ಚುನಾವಣೆಯಿಂದ ಆಗುವ ಅನುಕೂಲಗಳ ಬಗ್ಗೆಯೂ ಮಾತನಾಡಿವೆ. ಈ ಎಲ್ಲಾ ಅಭಿಪ್ರಾಯಗಳ ವಿಶ್ಲೇಷಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. 

ಶೇ. 30ರಷ್ಟು ತಾಳೆಗೆ ಆಗ್ರಹ
ಅನೇಕ ಕ್ಷೇತ್ರಗಳಲ್ಲಿ ಮತದಾನದ ನಂತರ ನೀಡಲಾಗುವ ವಿವಿ ಪ್ಯಾಟ್‌ ಚೀಟಿಗೂ, ಚುನಾವಣಾ ಫ‌ಲಿತಾಂಶಕ್ಕೂ ಪರಸ್ಪರ ತಾಳೆಯಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ ಪಕ್ಷಗಳು, ಈ ಗೊಂದಲ ಪರಿಹರಿಸಲು, ಪ್ರತಿ ಮತ ಕ್ಷೇತ್ರಗಳಲ್ಲಿ ಕನಿಷ್ಠ ಶೇ. 30ರಷ್ಟು ವಿವಿ ಪ್ಯಾಟ್‌ ತಾಳೆಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದಿವೆ. ಈ ಮೊದಲು, ಕನಿಷ್ಠ ಶೇ. 5ರಷ್ಟು ವಿವಿ ಪ್ಯಾಟ್‌ಗಳ ತಾಳೆಗೆ ಆಯೋಗ ಒಲವು ತೋರಿದ್ದನ್ನು ವಿಪಕ್ಷಗಳು ತಿರಸ್ಕರಿಸಿವೆ.

Advertisement

ಈ ವಾರವೇ ರೂಪುರೇಷೆ
ಏಕಕಾಲದ ಚುನಾವಣೆ ಬಗ್ಗೆ ಎಲ್ಲ ಕ್ರಮಗಳ ರೂಪುರೇಷೆಯನ್ನು ಈ ವಾರದಲ್ಲಿ ಕಾನೂನು ಆಯೋಗವು ಶಿಫಾರಸು ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂವಿಧಾನ ಹಾಗೂ ಕಾನೂನಲ್ಲಿ ಆಗಬೇಕಿರುವ ತಿದ್ದುಪಡಿಯ ವಿವರಗಳನ್ನೂ ಇದು ಪ್ರಸ್ತಾಪಿಸಲಿದೆ. ಆದರೆ ಈ ಶಿಫಾರಸನ್ನು ಸರ್ಕಾರ ಜಾರಿಗೊಳಿಸಲೇಬೇಕೆಂದಿಲ್ಲ. ಬದಲಿಗೆ ಈ ವರದಿ ಆಧರಿಸಿ ರಾಜಕೀಯ ಪಕ್ಷಗಳು ಚರ್ಚಿಸಬಹುದಾಗಿದೆ.

ಸಭೆಯಲ್ಲಿ ಶೇ.70ರಷ್ಟು ಪ್ರತಿನಿಧಿಗಳು ಇವಿಎಂಗಳ ಪಾರದರ್ಶಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕ ಸಭೆ ಚುನಾವಣೆಯಿಂದ ಹಳೆಯ ಬ್ಯಾಲೆಟ್‌ ಪೇಪರ್‌ ಪದ್ಧತಿಯನ್ನು ಪುನಃ ಜಾರಿಗೊಳಿಸಲು ಆಗ್ರಹಿಸಿದ್ದಾರೆ. 
ಅಭಿಷೇಕ್‌ ಸಿಂಘ್ವಿ, ಕಾಂಗ್ರೆಸ್‌ ವಕ್ತಾರ 

Advertisement

Udayavani is now on Telegram. Click here to join our channel and stay updated with the latest news.

Next