ಮೈಸೂರು: ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಬೇಕು, ಪ್ರಧಾನಿ ನರೇಂದ್ರ ಮೋದಿ ಶೈಲಿಯ ಆಡಳಿತವನ್ನು ರಾಜ್ಯದಲ್ಲೂ ಕಾಣಬೇಕು ಎಂಬ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲೂ ಬಿಜೆಪಿ ಪರ ರಾಜಕೀಯ ಧ್ರುವೀಕರಣ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ನಂಜನಗೂಡು ಪಟ್ಟಣದ ದೊಡ್ಡ ಒಕ್ಕಲಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಪರ ಮನೆ ಮನೆಗೆ ತೆರಳಿ ಮತಯಾಚಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಂತಹ ನಾಯಕರು ಕಾಂಗ್ರೆಸ್ ಪಕ್ಷದೊಳಗಿನ ಇತ್ತೀಚಿನ ವಿದ್ಯಮಾನಗಳು, ಕೆಟ್ಟಚಾಳಿ, ದೇಶದ ಹಿತಾಸಕ್ತಿ ಬದಲು ಪಕ್ಷದ ಹಿತಾಸಕ್ತಿ ಕಾಯಲು ಮುಂದಾಗುವುದನ್ನು ಕಂಡು ಹೊರಬಂದು ಬಿಜೆಪಿ ಸೇರಿದ್ದಾರೆ. ಅದೇ ಹಾದಿಯಲ್ಲಿ ಸಿದ್ದರಾಮಯ್ಯ ಸಂಪುಟದ ಹಲವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ.
ಆದರೆ, ಇನ್ನೂ ಒಂದು ವರ್ಷ ಅಧಿಕಾರಾವಧಿ ಇರುವುದರಿಂದ ಈಗಲೇ ಪಕ್ಷ ಬಿಡಲಾಗದೆ ಸುಮ್ಮನಿದ್ದಾರೆ. ಜೆಡಿಎಸ್ ನಿಂದಲೂ ಹಲವರು ಬಿಜೆಪಿಗೆ ಬರುವವರಿದ್ದಾರೆ. ಆದರೆ, ರಾಜಕೀಯ ಸೂಕ್ಷ್ಮತೆಗಳ ಕಾರಣಕ್ಕೆ ನಮ್ಮ ಸಂಪರ್ಕದಲ್ಲಿರುವವರ ಹೆಸರನ್ನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಬಿಡುವವರ ಪಟ್ಟಿ ನಮ್ಮ ಬಳಿ ಇದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಸದಾನಂದಗೌಡ ಅವರು, ಗೃಹಸಚಿವರಾಗಿರುವ ನಿಮ್ಮ ಬಳಿಯೇ ಇಂಟಲಿಜೆನ್ಸ್ ಕೂಡ ಇದೆ. ಹಾಗಿದ್ದರೆ, ನಿಮ್ಮ ಪಟ್ಟಿಯಲ್ಲಿ ಎಸ್.ಎಂ. ಕೃಷ್ಣ, ಜಯಪ್ರಕಾಶ್ ಹೆಗಡೆ, ದಿನಕರ ಶೆಟ್ಟಿ ಹೆಸರು ಕೂಡ ಇತ್ತಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರ ಸಹವಾಸ ಸಾಕು, 5 ವರ್ಷಗಳ ಕಾಲ ಜನಪರ ಆಡಳಿತ ನೀಡಿದ ಬಿಜೆಪಿ ಸರ್ಕಾರ ಮತ್ತೆ ಬರಬೇಕು ಎಂಬ ಅಪೇಕ್ಷೆ ರಾಜ್ಯದ ಜನರಿಗಿದೆ. ಹೀಗಾಗಿ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಪ್ರಚಾರಕ್ಕೆ ಸಿದ್ದರಾಮಯ್ಯ ಅವರ ಇಡೀ ಸಂಪುಟವೇ ಬಂದರೂ ಜನ ಬಿಜೆಪಿಯನ್ನು ಗೆಲ್ಲಿಸುತ್ತಾರೆ. ಉತ್ತರ ಪ್ರದೇಶ, ಉತ್ತರಾಖಂಡ ಚುನಾವಣೆಗಳ ಫಲಿತಾಂಶ ಇಲ್ಲಿ ಪುನರಾವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಯುಪಿಎ ಸರ್ಕಾರ ಕಲ್ಲಿದ್ದಲಿನಿಂದ ಹಿಡಿದು 2ಜಿ ತರಂಗಗಳ ವರೆಗೆ ಹಣ ನುಂಗಿದರೆ, ಸಿದ್ದರಾಮಯ್ಯ ಸರ್ಕಾರ ತಲೆದಿಂಬಿನಿಂದ ಹಿಡಿದು ಸ್ಟೀಲ್‌ಬಿಡ್ಜ್ವರೆಗೆ ಹಣ ನುಂಗಿದ್ದು ಜನತೆಗೆ ಗೊತ್ತಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ಸಿಗರ ಆಟ ನಡೆಯುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ಮುಖಂಡರಾದ ಎಲ್. ನಾಗೇಂದ್ರ, ನಂದೀಶ್‌ಪ್ರೀತಂ, ಸಿ. ಬಸವೇಗೌಡ ಇತರರು ಉಪಸ್ಥಿತರಿದ್ದರು.