Advertisement

ದಕ್ಷಿಣದಿಂದ ಹಲವು ಬೇಡಿಕೆ; ಜಿಎಸ್‌ಟಿ ಪರಿಹಾರ ಅವಧಿ ವಿಸ್ತರಣೆಗೂ ಕೋರಿಕೆ

12:45 AM Sep 04, 2022 | Team Udayavani |

ತಿರುವನಂತಪುರಂ: “ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ವಿತರಣೆಯ ಅವಧಿಯನ್ನು ಇನ್ನೂ ವರ್ಷ ವಿಸ್ತರಿಸಬೇಕು, ವಿದ್ಯುತ್ಛಕ್ತಿ ತಿದ್ದುಪಡಿ ಮಸೂದೆ, 2022 ಅನ್ನು ಕೇಂದ್ರ ಸರಕಾರ ವಾಪಸ್‌ ಪಡೆಯಬೇಕು. ಸರಕಾರಿ ಸ್ವಾಮ್ಯದ ವಿದ್ಯುತ್‌ ವಿತರಣಾ ಕಂಪೆನಿಗಳು ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್‌ ಸರಬರಾಜು ಮಾಡುವಂತಿರಬೇಕು. ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರಕಾರ ಹೆಚ್ಚಿನ ನೆರವು ನೀಡಬೇಕು.’

Advertisement

ಇವು ಕೇರಳದ ತಿರುವನಂತಪುರಂನಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 30ನೇ ಸಭೆಯಲ್ಲಿ ದಕ್ಷಿಣದ ರಾಜ್ಯಗಳು ಮಾಡಿರುವ ಮನವಿ.

ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಕೇರಳ ಸಿಎಂ ಪಿಣರಾಯಿ ವಿಜ ಯನ್‌, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ತಮಿಳ್‌ಸಾಯಿ ಸೌಂದರ್‌ರಾಜನ್‌ ಮಾತನಾಡಿ, ಕೇಂದ್ರ ಸರಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ತಮಿಳುನಾಡು ರಾಜ್ಯದೊಳಗೆ ಮತ್ತು ನೆರೆರಾಜ್ಯಗ ಳೊಂದಿಗೆ ಸಂಪರ್ಕ ಕಲ್ಪಿಸುವಂಥ ಹೈಸ್ಪೀಡ್‌ ರೈಲು ಕಾರಿಡಾರ್‌ಗಳನ್ನು ಸೃಷ್ಟಿಸುವಂತೆ ಕೇಂದ್ರ ಸರಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮನವಿ ಮಾಡಿದ್ದಾರೆ. ವಿಮಾನಗಳು ಮತ್ತು ಆಟೋ ಮೊಬೈಲ್‌ಗ‌ಳಿಗೆ ಹೋಲಿಸಿದರೆ ರೈಲ್ವೆ ಕಾರಿಡಾರ್‌ ನಿರ್ಮಾಣವು ಹೆಚ್ಚು ಅಗ್ಗ, ಹೆಚ್ಚು ಇಂಧನ ದಕ್ಷತೆಯುಳ್ಳ ಮತ್ತು ಕಡಿಮೆ ಮಾಲಿನ್ಯಕಾರಕ. ರಾಜ್ಯ ದೊಳಗಿನ ಸರಾಸರಿ ಪ್ರಯಾಣದ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚೆನ್ನೈ, ಕೊಯಮತ್ತೂರು, ಟ್ಯುಟಿಕೋರಿನ್‌ ಮತ್ತು ಮಧುರೆಯನ್ನು ಸಂಪರ್ಕಿಸುವ ಹೈಸ್ಪೀಡ್‌ ರೈಲು ಕಾರಿಡಾರ್‌ ಸ್ಥಾಪಿಸಬೇಕು.

ನೆರೆರಾಜ್ಯಗಳೊಂದಿಗೂ ಇಂತಹ ಸಂಪರ್ಕ ಸಾಧ್ಯ ವಾಗ ಬೇಕು ಎಂದೂ ಸ್ಟಾಲಿನ್‌ ಹೇಳಿದ್ದಾರೆ. ಇದೇ ವೇಳೆ, ದಕ್ಷಿಣದ ರಾಜ್ಯಗಳ ಗುಪ್ತಚರ ಮುಖ್ಯಸ್ಥರ ನಡುವೆ ಉತ್ತಮ ಸಮನ್ವಯತೆ ಮೂಡಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.

Advertisement

ಪುದುಚೇರಿ: ಕೇಂದ್ರಾಡಳಿತ ಪ್ರದೇಶದಲ್ಲಿ ವಿಮಾನ ನಿಲ್ದಾಣದ ವಿಸ್ತರಣೆ ಸೇರಿದಂತೆ ಪ್ರಮುಖ ಮೂಲ ಸೌಕರ್ಯ ಯೋಜನೆಗಳಿಗೆ ಕೇಂದ್ರ ಸರಕಾರ 2,200 ಕೋಟಿ ರೂ. ನೆರವು ನೀಡಬೇಕು ಎಂದು ಪುದುಚೇರಿ ಕೇಳಿಕೊಂಡಿದೆ. ಸಭೆಯಲ್ಲಿ ಮಾತನಾಡಿದ ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ತಮಿಳ್‌ಸಾಯಿ ಸೌಂದರ ರಾ ಜನ್‌, ಕೇಂದ್ರಾಡಳಿತ ಪ್ರದೇಶಗಳನ್ನು ಈ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಹೀಗಾಗಿ ಸರಕಾರವು 2,200 ಕೋಟಿ ರೂ.ಗಳ ವಿಶೇಷ ನೆರವನ್ನು ಘೋಷಿಸಬೇಕು ಎಂದಿದ್ದಾರೆ.

ಕೇರಳ: ಕೊರೊನಾ ಸೋಂಕಿನ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಲ್ಲ ಪರಸ್ಪರ ಸಹಕಾರ ದಿಂದ, ಸಮನ್ವಯತೆಯಿಂದ ಸವಾಲುಗಳನ್ನು ಎದುರಿಸಿವೆ. ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗೊತ್ತಿ, ಜನರ ನೆರವಿಗೆ ಧಾವಿಸಿವೆ. ಅದೇ ರೀತಿ, ಕೊರೊನಾದಿಂದ ಉಂಟಾಗಿರುವ ದೀರ್ಘಾವಧಿ ಆರ್ಥಿಕ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲೂ ನಾವು ಒಂದಾಗಬೇಕು. ಉತ್ಪಾದಕತೆ ಹೆಚ್ಚಿಸುವಂತೆ ಹಣ ವೆಚ್ಚ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಕೋರಿದ್ದಾರೆ. ಜತೆಗೆ, ಕರಾವಳಿಯಲ್ಲಿ ಮಣ್ಣಿನ ಸವೆತ, ರೈಲ್ವೆ ಮತ್ತು ವಿಮಾನನಿಲ್ದಾಣಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸುವಿಕೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದಾರೆ. ಶಬರಿಮಲೆ ದೇಗುಲಕ್ಕೆ ದಕ್ಷಿಣದ ರಾಜ್ಯಗಳ ಸಾವಿರಾರು ಯಾತ್ರಿಗಳು ಆಗಮಿಸುತ್ತಾರೆ. ಅವರಿಗೆ ಒದಗಿಸಲಾಗುವ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಸುಧಾರಿಸುವ ನಿಟ್ಟಿನಲ್ಲಿ ಎಲ್ಲ ಸಿಎಂಗಳು ಮತ್ತು ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆಯೂ ಮನವಿ ಮಾಡಿದ್ದಾರೆ.

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಖಚಿತ: ಶಾ
ಕೇರಳದಲ್ಲಿ ಬಿಜೆಪಿ ನಿಧಾನಕ್ಕೆ ಬೆಳೆಯುತ್ತಿದ್ದು, ರಾಜ್ಯದಲ್ಲಿ ಅಧಿಕಾರಕ್ಕೇರುವುದು ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಬಿಜೆಪಿ ಆಯೋಜಿಸಿದ್ದ ಪರಿಶಿಷ್ಟ ಪಂಗಡ ಸಮಾವೇಶದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ ಮತ್ತು ಕಮ್ಯೂನಿಸ್ಟ್‌ ಪಕ್ಷ ಭಾರತದಿಂದ ಕಣ್ಮರೆಯಾಗುತ್ತಿವೆ. ನಮ್ಮ ದೇಶದಲ್ಲಿ ಭವಿಷ್ಯವಿರುವ ಏಕೈಕ ಪಕ್ಷವೆಂದರೆ ಬಿಜೆಪಿ. ಪಕ್ಷಕ್ಕಾಗಿ ಕೆಲಸ ಮಾಡುವಾಗ ಪ್ರತಿಯೊಬ್ಬ ಕಾರ್ಯಕರ್ತನೂ ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಮತ್ತು ಕಮ್ಯೂನಿಸ್ಟ್‌ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ಈ ಪಕ್ಷಗಳು ಎಂದಿಗೂ ಪರಿಶಿಷ್ಟ ಪಂಗಡಗಳ ಕ್ಷೇಯೋಭಿವೃದ್ಧಿಗಾಗಿ ಕೆಲಸ ಮಾಡಲಿಲ್ಲ. ಅವರು ದಲಿತ ಸಮುದಾಯವನ್ನು ಕೇವಲ ವೋಟ್‌ಬ್ಯಾಂಕ್‌ಗಾಗಿ ದುರ್ಬಳಕೆ ಮಾಡಿಕೊಂಡರು ಎಂದೂ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next