Advertisement
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಈಗಲೂ ಸಂಪರ್ಕದಲ್ಲಿದ್ದು, ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಸದ್ಯ ನಮಗೆ ಅಗತ್ಯವಿಲ್ಲ. ಆದರೆ ಬರುವವರನ್ನು ಬೇಡ ಎನ್ನಲಾಗದು. ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕಲ್ಲ ಎನ್ನುವ ಮೂಲಕ ಉಪಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಗೆಲ್ಲಲಾಗದಿದ್ದರೆ ಮತ್ತಷ್ಟು ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಪರೋಕ್ಷವಾಗಿ ತಿಳಿಸಿದರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್‌ನ ಸ್ಥಿತಿ ಗಂಭೀರವಾಗಲಿವೆ. ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಆ ಪಕ್ಷಗಳ ನಾಯಕರು ನೀಡಿರುವ ಗೊಂದಲದ ಹೇಳಿಕೆಗಳಿಂದ ಬಿಜೆಪಿಗೆ ಅನುಕೂಲವಾಗಲಿದೆಯೇ ಹೊರತು ಪ್ರತಿಕೂಲ ಪರಿಣಾಮ ಬೀರದು. ಇದಕ್ಕಾಗಿ ಆ ಪಕ್ಷಗಳ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
Related Articles
Advertisement
ಕುಮಾರಸ್ವಾಮಿಯವರು ಅವಕಾಶವಾದಿತನದ ಹಿನ್ನೆಲೆಯಲ್ಲಿ ಪರಿಸ್ಥಿತಿ ನೋಡಿಕೊಂಡು ಮಾತನಾಡುತ್ತಾರೆ. ಆದರೆ ದೇವೇಗೌಡರು ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯ ತಂದಿದೆ. ಆ ನಾಯಕರ ಹೇಳಿಕೆಗಳಿಂದ ನಮ್ಮ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ಮುಕ್ತ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಕಾಂಗ್ರೆಸ್ ಮುಕ್ತವಾಗಬೇಕಾದರೆ ಅವರೆಲ್ಲಾ ಬರಲೇ ಬೇಕಲ್ಲ. ಅವರು ಜೆಡಿಎಸ್‌ಗೆ ಹೋಗಲು ಸಾಧ್ಯವಿಲ್ಲ. ನಮ್ಮ ಪಕ್ಷಕ್ಕೆ ಬರುವವರನ್ನು ನಾವು ನೆಂಟರಂತೆ ಕಾಣುವುದಿಲ್ಲ. ಬದಲಿಗೆ ಬರುವವರೆಲ್ಲಾ ಕುಟುಂಬದವರೇ ಎಂದು ಸೇರ್ಪಡೆ ಮಾಡಿಕೊಳ್ಳುತ್ತೇವೆ. ಹಾಗೆಂದು ಪಕ್ಷದ ಮೂಲ ನಾಯಕರು, ಮುಖಂಡರನ್ನು ಕಡೆಗಣಿಸುವುದಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರದ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ನಾಯಕರು ರಾಜಕೀಯ ಹೇಳಿಕೆ ನೀಡುತ್ತಿದ್ದು, ನಾವು ಮುಖ್ಯಮಂತ್ರಿಯಾಗಬಹುದು ಎಂಬ ಆಸೆ ಕಾಂಗ್ರೆಸ್ ನಾಯಕರಲ್ಲಿ ಹುಟ್ಟುಕೊಂಡಿದೆ. ಬಿಜೆಪಿ ಸರ್ಕಾರ ಬೀಳಿಸಲು ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದ ಜೆಡಿಎಸ್ ಮಹಾರಾಷ್ಟ್ರ ಬೆಳವಣಿಗೆ ಬಳಿಕ ರಾಗ ಬದಲಿಸಿತು. ಇದೀಗ ಉಭಯ ಪಕ್ಷಗಳು ಮೈತ್ರಿಯ ಮಾತುಗಳನ್ನಾಡುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿದವು. ಆದರೆ ಎರಡು ಪಕ್ಷಗಳ ನಾಯಕರೇ ಗೊಂದಲಕ್ಕೆ ಸಿಲುಕಿದಂತಾಗಿದೆ. ದಿನಕ್ಕೊಂದು ಹೇಳಿಕೆ ಬದಲಾಯಿಸುವ ಮೂಲಕ ಬಿಜೆಪಿಗೆ ಸಹಾಯ ಮಾಡಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕೆಲವರೆಲ್ಲಾ ಹೊಸ ಬಟ್ಟೆ ಹೊಲಿಸಿಕೊಂಡು ಸಿದ್ದರಾಗುತ್ತಿದ್ದಾರೆ ಎಂಬ ಮಾತಿದೆ. ಅವರು ಇನ್ನು ಮೂರುವರೆ ವರ್ಷ ಕಾಲ ಆ ಬಟ್ಟೆಯನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಮೈತ್ರಿ ಸರ್ಕಾರ ರಚಿಸುವದಾಗಿ ಹೇಳುವ ಉಭಯ ಪಕ್ಷಗಳ ನಾಯಕರಿಗೆ ರಾಜ್ಯಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. 12 ಸ್ಥಾನ ಗೆಲ್ಲುವ ವಿಶ್ವಾಸವಿದ್ದಿದ್ದರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿತ್ತು. ಜನರನ್ನು ತಪ್ಪು ದಾರಿಗೆ ಎಳೆಯುವ ಸಲುವಾಗಿಯೇ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಕಾಂಗ್ರೆಸ್‌ನ ಉನ್ನತ ನಾಯಕರ ನಿಯೋಗ ಡಿ.6ರಂದು ವರಿಷ್ಠರನ್ನು ಭೇಟಿಯಾಗಲಿದೆ ಎಂಬ ಮಾಹಿತಿ ಇದೆ. ಇದು ನಿಜವಾಗಿದ್ದರೆ ಕಾಂಗ್ರೆಸ್ ಒಡೆದ ಮನೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ಪರಿಸ್ಥಿತಿ ಹೀಗಿದ್ದರೆ ಉಪಚುನಾವಣೆ ಬಳಿಕ ಜೆಡಿಎಸ್‌ನ ಅನೇಕರು ಬಿಜೆಪಿ ಸೇರುತ್ತಾರೆ. ಈಗಾಗಲೇ ಮಾತನಾಡುತ್ತಿದ್ದಾರೆ ಎಂದು ಹೇಳಿದರು.