Advertisement
ಮಾನ್ವಿ ಕ್ಷೇತ್ರದಲ್ಲಿ ಕಳೆದ ನಾಲ್ಕು ಅವಧಿಯಲ್ಲಿ ತಲಾ ಎರಡು ಬಾರಿ ಕಾಂಗ್ರೆಸ್‌ನ ಎನ್.ಎಸ್. ಬೋಸರಾಜು ಮತ್ತು ಹಂಪಯ್ಯ ನಾಯಕ ಶಾಸಕರಾಗಿದ್ದರು. ಈಗ ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ ಶಾಸಕರಾಗಿದ್ದಾರೆ. ಸುಮಾರು 10-15 ವರ್ಷಗಳಿಂದ ತಾಲೂಕಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅಭಿವೃದ್ಧಿ ಬಾಗಿಲು ತೆರೆದಿಲ್ಲ. ಹೀಗಾಗಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ನಾಡಿನ ದೊರೆ ಸಿಎಂ ಕುಮಾರಸ್ವಾಮಿ ಈ ಸಮಸ್ಯೆಗೆ ಪರಿಹಾರ ಒದಗಿಸಿ ಮಾನ್ವಿಯಲ್ಲಿ ಅಭಿವೃದ್ಧಿ ಶಕೆ ಆರಂಭಿಸುವರೇ ಎಂದು ಜನ ಕಾದಿದ್ದಾರೆ.
Related Articles
Advertisement
ಮಿನಿ ವಿಧಾನಸೌಧ: ಪಟ್ಟಣ ತಾಲೂಕು ಕೇಂದ್ರವಾಗಿದ್ದರೂ ಮಿನಿ ವಿಧಾನಸೌಧ ಇಲ್ಲ. ಮಿನಿ ವಿಧಾನಸೌಧಕ್ಕೆ ಜಾಗೆ ಆಯ್ಕೆ ಗೊಂದಲವೇ ಮುಗಿದಿಲ್ಲ. ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿರುವ ಪಿಡಬ್ಲ್ಯೂಡಿ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದ ಜಾಗೆ ಇದೆ. ಅಲ್ಲಿ ಮಿನಿವಿಧಾನಸೌಧ ನಿರ್ಮಿಸಬೇಕೆಂಬ ಪ್ರಯತ್ನ ನಡೆದಿತ್ತು. ಆದರೆ ಪ್ರಕ್ರಿಯೆ ಎಲ್ಲಿಗೆ ಬಂದಿದೆ ಎಂಬ ಮಾಹಿತಿ ಇಲ್ಲ. ಅಲ್ಲದೆ ಪಟ್ಟಣದಲ್ಲಿ ಕೆಲ ಇಲಾಖೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನು ಕೆಲವು ಖಾಸಗಿ ಕಟ್ಟಡದಲ್ಲಿವೆ.
ಬಸ್ ನಿಲ್ದಾಣ ಸ್ಥಳಾಂತರ: ಪಟ್ಟಣದಲ್ಲಿನ ಬಸ್ ನಿಲ್ದಾಣ ಜಿಲ್ಲೆಯಲ್ಲೇ ಅತ್ಯಂತ ಚಿಕ್ಕದಾಗಿದೆ. ಬಸ್‌ಗಳ ನಿಲುಗಡೆಗೂ ಜಾಗ ಇಲ್ಲದ್ದರಿಂದ ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರೂ ತೊಂದರೆ ಅನುಭವಿಸುವಂತಾಗಿದೆ. ಬಸ್ ನಿಲ್ದಾಣ ಸ್ಥಳಾಂತರಿಸಬೇಕಿದೆ.
ರಸ್ತೆ ಮತ್ತು ಸೇತುವೆ: ದದ್ದಲ, ಉಮಳಿಪನ್ನೂರು, ಹರನಹಳ್ಳಿ, ಜಾನೇಕಲ್, ಸುಂಕೇಶ್ವರ ಗ್ರಾಮದ ರಸ್ತೆಗಳು ಹದಗೆಟ್ಟಿವೆ. ತಾಲೂಕಿನ ಮುಸ್ಟೂರು ಗ್ರಾಮದ ಹಳ್ಳದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ದಶಕದ ಹಿಂದೆಯೇ ಅರ್ಧಕ್ಕೆ ನಿಂತಿದೆ. ಮಾನ್ವಿಯಿಂದ ಆಂಧ್ರಕ್ಕೆ ಸಂಪರ್ಕ ಕಲ್ಪಿಸಲು ಚೀಕಲಪರ್ವಿ ಹತ್ತಿರ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಮಾಡಬೇಕು ಎನ್ನವುದು ಸಹ ಬಹುಜನರ ಬೇಡಿಕೆಯಾಗಿದೆ. ಈ ಸೇತುವೆ ನಿರ್ಮಾಣ ಆದಲ್ಲಿ ವ್ಯಾಪಾರ ವಹಿವಾಟು ವೃದ್ಧಿಗೆ ಸಹಕಾರಿ ಆಗಲಿದೆ.
ಶೈಕ್ಷಣಿಕ ಸಮಸ್ಯೆ: ಡಿಪ್ಲೋಮಾ, ನರ್ಸಿಂಗ್, ಪಾಲಿಟೆಕ್ನಿಕ್ ಸೇರಿದಂತೆ ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ. ರೈಲ್ವೆ ಲೈನ್ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಪಟ್ಟಣದಲ್ಲಿ ಸುವ್ಯವಸ್ಥಿತ ಕ್ರೀಡಾಂಗಣ ಇಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸಿಎಂ ಕುಮಾರಸ್ವಾಮಿ ಪರಿಹಾರ ಕಲ್ಪಿಸಲಿ ಎಂಬುದು ತಾಲೂಕಿನ ಜನರ ಆಶಯವಾಗಿದೆ.