Advertisement

ರಾಜಕೀಯ ನಾಯಕರನ್ನು ಮೀರಿಸಿದ ಶಿಕ್ಷಕರು!

11:19 AM Jun 03, 2019 | Naveen |

ಮಾನ್ವಿ: ಮಾನ್ವಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ ಪ್ರಕ್ರಿಯೆ ನಡೆದಿದ್ದು, ತಾಲೂಕಿನ ಶಿಕ್ಷಕರು ರಾಜಕೀಯ ನಾಯಕರನ್ನು ಮೀರಿಸುವಂತೆ ಪೈಪೋಟಿಗೆ ಇಳಿದಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

2019-2024ರ ಅವಧಿಗೆ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಮೇ 27ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಜೂ.3 ಕೊನೆ ದಿನವಾಗಿದೆ. ಜೂ.13ರಂದು ಮತದಾನ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ. ಒಟ್ಟು 25 ಸರ್ಕಾರಿ ಇಲಾಖೆಗಳ ನೌಕರರ ಸಂಘದ 35 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ ಚುನಾವಣಾ ಕಣದಲ್ಲಿ ಶಿಕ್ಷಕರೇ ಮುಂಚೂಣಿಯಲ್ಲಿದ್ದಾರೆ. ಇದುವರೆಗೂ ಕೆಲವೇ ಕೆಲವು ಪ್ರಭಾವಿ ಶಿಕ್ಷಕರು ಸೇರಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಇತರೆ ಇಲಾಖೆ ನೌಕರರಿಗಿಂತ ಶಿಕ್ಷಕರ ದರ್ಬಾರ್‌ ಹೆಚ್ಚಿದೆ.

ಪೈಪೋಟಿ: ತಾಲೂಕು ನೌಕರರ ಸಂಘದಲ್ಲಿ ವಿವಿಧ ಇಲಾಖೆಗಳಿಗಿಂತ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಮತದಾರರ ಸಂಖ್ಯೆ ಹೆಚ್ಚಿದ್ದು 5 ಸ್ಥಾನಗಳಿವೆ. ಇತರೆ ಇಲಾಖೆಗಳಿಗಿಂತ ಸಂಘದ ಅಧಿಕಾರಕ್ಕಾಗಿ ಪಿಂಚಣಿ ಸಹಿತ ಶಿಕ್ಷಕರ ವರ್ಗ ಮತ್ತು ಪಿಂಚಣಿ ರಹಿತ ಶಿಕ್ಷಕರ ನಡುವೆ ಭಾರಿ ಪೈಪೋಟಿ ನಡೆದಿದೆ. ಚುನಾವಣೆ ನಡೆಯದಿದ್ದರೆ ಪ್ರಭಾವಿ ಶಿಕ್ಷಕರೇ ಅಧಿಕಾರ ಹಿಡಿಯುತ್ತಾರೆ. ಇವರಿಂದ ಶಿಕ್ಷಕರ ಯಾವುದೆ ಸಮಸ್ಯೆಗೆ ಸ್ಪಂದನೆ ಸಿಗುವುದಿಲ್ಲ. ಕೇವಲ ರಾಜಕೀಯ ವಲಯದಲ್ಲಿ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು, ಶಿಕ್ಷಕರ ವರ್ಗಾವರ್ಗಿಯಲ್ಲಿ ಲಾಬಿ ನಡೆಸಲು ಅಧಿಕಾರ ಹಿಡಿಯುತ್ತಾರೆ ಎನ್ನುವ ಆರೋಪ ಪಿಂಚಣಿ ರಹಿತ ಶಿಕ್ಷಕರದ್ದಾಗಿದೆ. ಹೀಗಾಗಿ ಬಂಡಾಯ ಎದ್ದಿರುವ ಯುವ ಶಿಕ್ಷಕರು ಪ್ರತಿಸ್ಪರ್ಧೆಗೆ ಮುಂದಾಗಿದ್ದು ಪೈಪೋಟಿ ಏರ್ಪಟ್ಟಿದೆ.

ಹೆಸರು ನಾಪತ್ತೆ: ಮತದಾರರ ಪಟ್ಟಿಯಲ್ಲಿ ಪಿಂಚಣಿ ರಹಿತ ಶಿಕ್ಷಕರ (ಎನ್‌ಪಿಎಸ್‌) ಬಣದ ಸುಮಾರು 50ಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ. ಇದು ಎರಡು ಬಣಗಳ ವೈಮನಸ್ಸಿಗೆ ಕಾರಣವಾಗಿದೆ. ಇತರೆ ಇಲಾಖೆಗಳ ಸುಮಾರು 200ಕ್ಕೂ ಅಧಿಕ ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಎನ್‌ಪಿಎಸ್‌ ಶಿಕ್ಷಕರಿಂದ ಪ್ರತಿ ವರ್ಷ ಸರ್ಕಾರಿ ನೌಕರರ ಸಂಘದ ಸದಸ್ಯತ್ವಕ್ಕಾಗಿ ವಂತಿಗೆ ಪಡೆಯಲಾಗಿದೆ. ಆದರೂ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ತೆಗೆದು ಹಾಕಿರುವುದು ಅನುಮಾನಕ್ಕೆಡೆ ಮಾಡಿದೆ. ಇಲಾಖೆಯಿಂದಲೇ ನೌಕರರ ಸಂಘಕ್ಕೆ ಶಿಕ್ಷಕರ ಸಂಬಳದಿಂದ ವಂತಿಗೆ ನೀಡಿದ್ದರೂ ನ್ಯಾಯ ಕೊಡಿಸುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ ವಿಫಲವಾಗಿದ್ದಾರೆ.

ಕುತಂತ್ರ: ಕೆಲ ಪ್ರಭಾವಿ ಶಿಕ್ಷರು ಪ್ರತಿಸ್ಪರ್ಧೆಗೆ ಅವಕಾಶ ನೀಡಬಾರದು ಎನ್ನುವ ಕುತಂತ್ರದಿಂದ ಉದ್ದೇಶಪೂರ್ವಕವಾಗಿ ಹೆಸರುಗಳನ್ನು ತೆಗೆದುಹಾಕಿದ್ದಾರೆ ಎಂದು ಎನ್‌ಪಿಎಸ್‌ ಶಿಕ್ಷಕರು ಆರೋಪಿಸುತ್ತಿದ್ದಾರೆ. ಇಷ್ಟೆ ಅಲ್ಲ ಸುಮಾರು 10ಕ್ಕೂ ಹೆಚ್ಚು ಜನರ ಸರ್ಕಾರಿ ಶಿಕ್ಷಕ-ಶಿಕ್ಷಕಿಯಾಗಿರುವ ಗಂಡ ಹೆಂಡತಿ ಹೆಸರುಗಳು ಸಹ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ. ನಾಮಪತ್ರ ಸಲ್ಲಿಕೆ ದಿನಾಂಕದವರೆಗೂ ಮತದಾರರ ಪಟ್ಟಿ ಬಹಿರಂಗವಾದಂತೆ ನೋಡಿಕೊಳ್ಳಲಾಗಿದೆ. ಸಂಘದ ಬೈಲಾದ ಹೆಸರಿನಲ್ಲಿ ಕುತಂತ್ರ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Advertisement

ಸುಳ್ಳು ಆರೋಪ: ಸಂಘ ವಿರೋಧಿ ಚಟುವಟಿಕೆ ಕಾರಣಕ್ಕೆ ಮತದಾರರ ಪಟ್ಟಿಯಿಂದ ಕೆಲ ಶಿಕ್ಷಕರನ್ನು ಕೈಬಿಡಲಾಗಿದೆ ಎನ್ನುತ್ತಾರೆ ತಾಲೂಕು ಅಧ್ಯಕ್ಷ ಸುರೇಶ ಕುರ್ಡಿ. ಆದರೆ ಯಾವ ಸಂಘ ವಿರೋಧಿ ಚಟುವಟಿಕೆ ಕಾರಣಕ್ಕೆ ಎನ್ನುವ ಬಗ್ಗೆ ನಮಗೆ ನೋಟಿಸ್‌ ನೀಡಿಲ್ಲ. ಹೆಸರು ತೆಗೆದಿರುವ ಬಗ್ಗೆಯೂ ಮಾಹಿತಿ ನೀಡಿಲ್ಲ. ಇದೊಂದು ಉದ್ದೇಶ ಪೂರ್ವಕ ಕೆಲಸ ಎನ್ನುತ್ತಾರೆ ಶಿಕ್ಷಕ ಆದೇಶ. ಈಗಾಗಲೇ ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಕೈಬಿಟ್ಟ ಹೆಸರುಗಳನ್ನು ಸೇರಿಸಲು ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಜಾಪ್ರಭುತ್ವದ ಅಡಿಪಾಯದಲ್ಲಿ ಚುನಾವಣೆ ಬಡೆಸು ಸೋಲು-ಗೆಲುವನ್ನು ಸ್ಪರ್ಧಾತ್ಮಕ ಮನೋಭಾವನೆಯಿಂದ ಸೀಕರಿಸಿ ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಶಿಕ್ಷಕರು ಅನ್ಯಾಯ, ಅಕ್ರಮ ಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ನಾವು ನೇಮಕ ಆಗಿದ್ದಾಗಿನಿಂದಲೂ ಸರ್ಕಾರಿ ನೌಕರರ ಸಂಘಕ್ಕೆ ವಂತಿಗೆ ಕಟ್ಟುತ್ತಿದ್ದೇವೆ. ಆದರೂ 70ಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರ ಹೆಸರುಗಳನ್ನು ಕೈಬಿಡಲಾಗಿದೆ. ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ತಮಗೆ ಬೇಕಾದ ಮತದಾರ ನೌಕರರ ಹೆಸರು ಮಾತ್ರ ಉಳಿಸಿಕೊಂಡು ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡಲಾಗುತ್ತಿದೆ. ನಮ್ಮ ಸಹದ್ಯೋಗಿ ಶಿಕ್ಷಕರನ್ನು ಕಣಕ್ಕೀಳಿಸುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ.
ಸಂಗಮೇಶ ಮುಧೋಳ,
ಅಧ್ಯಕ್ಷರು, ಎನ್‌ಪಿಎಸ್‌ ನೌಕರರ ಸಂಘ, ಮಾನ್ವಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯಮಗಳ ಅಡಿಯಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಸಂಘ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಕೆಲವು ಶಿಕ್ಷಕರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ.
ಸುರೇಶ ಕುರ್ಡಿ,
ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ, ಮಾನ್ವಿ

Advertisement

Udayavani is now on Telegram. Click here to join our channel and stay updated with the latest news.

Next