Advertisement

ವಿದ್ಯಾರ್ಥಿಗಳಿಗೆ ಗಂಜಿ ಕೇಂದ್ರಗಳಾದ ಹಾಸ್ಟೇಲ್‌

12:18 PM Mar 20, 2020 | Naveen |

ಮಾನ್ವಿ: ತಾಲೂಕಿನಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಇಲಾಖೆ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದ್ದರಿಂದ ಹಾಸ್ಟೆಲ್‌ಗ‌ಳು ನಿರಾಶ್ರಿತರಿಗೆ ಊಟಕ್ಕೆ ಮಾತ್ರ ತೆರಯಲಾದ ಗಂಜಿ ಕೇಂದ್ರಗಳಂತಾಗಿವೆ.

Advertisement

ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಪಾಮನಕಲ್ಲೂರು, ಕುರ್ಡಿ, ಕಲ್ಲೂರು ಅಡವಿ ಅಮರೇಶ್ವರ ಸೇರಿ ಆರು ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿದ್ದು, 245 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಪರಿಶಿಷ್ಟ ಪಂಗಡದ ವಸತಿ ನಿಲಯ ಇಲಾಖೆಯಡಿ ಕವಿತಾಳ ಮತ್ತು ಮಾನ್ವಿ ಸೇರಿ ಎರಡು ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿದ್ದು, 85 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಇನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 9 ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿದ್ದು, ಎಸ್ಸೆಸ್ಸೆಲ್ಸಿಯ 500 ವಿದ್ಯಾರ್ಥಿಗಳಿದ್ದಾರೆ.

ಟ್ಯೂಟರ್‌ ಇಲ್ಲ: ವಿವಿಧ ವಸತಿ ನಿಲಯಗಳಲ್ಲಿ ಟ್ಯೂಟರ್‌ ಯೋಜನೆ ಜಾರಿಯಲ್ಲಿದೆ. ಹಾಸ್ಟೆಲ್‌ ಗಳಲ್ಲಿ ವಿಜ್ಞಾನ, ಗಣಿತ, ಇಂಗ್ಲೀಷ್‌ ಭಾಷಾವಾರು ಪ್ರತ್ಯೇಕ ಅರೆಕಾಲಿಕ ಬೋಧಕ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿಶೇಷ ತರಗತಿಗಳನ್ನು ನಡೆಸಬೇಕು. ಅವರಿಗೆ ಇಂತಿಷ್ಟು ಗೌರವಧನ ನೀಡಬೇಕೆಂಬ ನಿಯಮವಿದೆ. ಆದರೆ ಹಾಸ್ಟೇಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆಯ ಆರು ವಸತಿ ನಿಲಯಗಳ ಟ್ಯೂಟರ್ಗಳಿಗೆ ಆರು ತಿಂಗಳಿಗೆ ಪ್ರತಿ ತಿಂಗಳಿಗೆ 1 ಸಾವಿರ ರೂ.ದಂತೆ ಗೌರವಧನ ನಿಗದಿಪಡಿಸಲಾಗಿದೆ. ಆದರೆ ಪಾಮನಕಲ್ಲೂರು, ಕಲ್ಲೂರು ಮತ್ತು ಕುರ್ಡಿ ಹಾಸ್ಟೆಲ್‌ಗ‌ಳಲ್ಲಿ ವಾರ್ಡನ್‌ ಗಳು ತರಗತಿಗಳನ್ನೇ ನಡೆಸುತ್ತಿಲ್ಲ. ಪಟ್ಟಣದಲ್ಲಿನ ಬಾಲಕಿಯರ ಮತ್ತು ಬಾಲಕರ ಹಾಸ್ಟೇಲ್‌ಗ‌ಳಲ್ಲಿ ಕಳೆದ ಎರಡು ತಿಂಗಳಿಂದ ವಾರದಲ್ಲಿ ಎರಡ್ಮೂರು ದಿನ ತರಗತಿ ನಡೆಸಲಾಗುತ್ತಿದೆ. ಕೊನೆ ಗಳಿಗೆಯಲ್ಲಿ ತರಗತಿ ನಡೆಸುವುದರಿಂದ ವಿಷಯ ಪರಿಪೂರ್ಣವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದಲ್ಲಿನ ಎಸ್‌ಸಿ ಬಾಲಕರ ಮತ್ತು ಬಾಲಕಿಯರ ಹಾಸ್ಟೇಲ್‌ ಹಾಗೂ ಎಸ್‌ಟಿ ಬಾಲಕರ ಹಾಸ್ಟೇಲ್‌ನಲ್ಲೂ ಸಹ ಸರ್ಕಾರಿ ಶಾಲೆ ಶಿಕ್ಷಕ ಅರ್ಜುನಗೌಡ ವಿಜ್ಞಾನ, ಗಣಿತ ವಿಷಯ ಮತ್ತು ಖಾಸಗಿ ಶಿಕ್ಷಕ ಜಾತಪ್ಪ ಎನ್ನುವವರು ಇಂಗ್ಲೀಷ್‌ ವಿಷಯ ಬೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇವರ ನೇಮಕದ ಬಗ್ಗೆ ಕಚೇರಿಯಲ್ಲಿ ಯಾವುದೆ ದಾಖಲೆಗಳು ಇಲ್ಲ ಎನ್ನುತ್ತಾರೆ ಎಸ್‌ಸಿ ವಸತಿ ನಿಲಯ ತಾಲೂಕು ಅಧಿಕಾರಿ ಜಯಮ್ಮ. ಇನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಾವ ಹಾಸ್ಟೇಲ್‌ನಲ್ಲೂ ತರಗತಿಗಳು ನಡೆಯುತ್ತಿಲ್ಲ.

Advertisement

ಕುಂಠಿತ: ತಾಲೂಕಿನ ವಿವಿಧ ಹಾಸ್ಟೇಲ್‌ಗ‌ಳಲ್ಲಿ ಒಂದು ಸಾವಿರಕ್ಕೂ ಅಧಿಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಗಣಿತ, ವಿಜ್ಞಾನ, ಇಂಗ್ಲಿಷ ವಿಷಯಗಳ ಬೋಧನೆ ಮಾಡದೆ ಇರುವುದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಜಿಲ್ಲಾಡಳಿತ ಎಸ್‌ಎಸ್‌ ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಒಟ್ಟಾರೆಯಾಗಿ ಶೈಕ್ಷಣಿಕ ವಾತಾವರಣ ಇರಬೇಕಾದ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವವರಿಲ್ಲದಂತಾಗಿದೆ. ಕೇಳ್ಳೋರೆ ಇಲ್ಲದ್ದರಿಂದ ವಿದ್ಯಾರ್ಥಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ.

ಕುಳಿತುಕೊಂಡು ಅಭ್ಯಾಸ ಮಾಡುವುದೇ ಇಲ್ಲ. ವಾರ್ಡನ್‌ಗಳು ಹಾಸ್ಟೇಲ್‌ಗ‌ಳತ್ತ ಸುಳಿಯುವುದೇ ಅಪರೂಪ. ಇನ್ನಾದರೂ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಿದೆ.

ಕಳೆದ ಎರಡು ವರ್ಷದ ಹಿಂದೆ ಹಾಸ್ಟೆಲ್‌ನಲ್ಲಿ ಗಣಿತ ಬೋಧನೆ ಮಾಡುತ್ತಿದ್ದೆ. ಆದರೆ ಗೌರವಧನ ನೀಡಲಿಲ್ಲ. ಇಲಾಖೆ ಕಚೇರಿಗೆ ಅಲೆದು ಸಾಕಾಯ್ತು. ವಾರ್ಡನ್‌ ಮತ್ತು ಮೇಲಾಧಿಕಾರಿಗಳು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟು ಬೀಳುತ್ತಿದೆ.
ಗಾಳಪ್ಪ ಅಮರಾವತಿ,
ಶಿಕ್ಷಕರು

ಹಾಸ್ಟೆಲ್‌ಗ‌ಳಲ್ಲಿನ ಪಾರ್ಟ್‌ಟೈಮ್‌ ಟ್ಯೂಟರ್ಗಳ ಬಗ್ಗೆ ಕಚೇರಿಯಲ್ಲಿ ಯಾವುದೇ ದಾಖಲೆಗಳನ್ನು ಹಿಂದಿನ ಅಧಿಕಾರಿಗಳು ಇಟ್ಟಿಲ್ಲ. ವಾರ್ಡನ್‌ಗಳನ್ನು ಕೇಳಿ ಮಾಹಿತಿ ಪಡೆದುಕೊಳ್ಳಲಾಗಿದೆ. ಕುರ್ಡಿ ಮತ್ತು ಪಾಮನಕಲ್ಲೂರು ಹಾಸ್ಟೆಲ್‌ಗ‌ಳಲ್ಲಿ ಮಾತ್ರ ಟ್ಯೂಟರ್ ತರಗತಿಗಳು ನಡೆಯುತ್ತಿಲ್ಲ. ಇವರಿಗೆ ಎರಡು ವರ್ಷಗಳಿಂದ ಗೌರವಧನ ಪಾವತಿಯಾಗಿಲ್ಲ. ಜಯಮ್ಮ,
ತಾಲೂಕು ಅಧಿಕಾರಿಗಳು, ಸಮಾಜ ಕಲ್ಯಾಣ
ಇಲಾಖೆ, ಮಾನ್ವಿ

ರವಿ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next