ಮಾನ್ವಿ: ಮಕ್ಕಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಹಿತ್ಯ ಪ್ರೇರೇಪಿಸುತ್ತದೆ. ಸಾಹಿತ್ಯದಿಂದ ಶುದ್ಧ ನಡತೆ, ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದು ಬೆಳಕು ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎಸ್. ಮಹಾಂತಪ್ಪಗೌಡ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಪಟ್ಟಣದ ಕಲ್ಮಠ ಪ್ರೌಢಶಾಲೆ ಆವರಣದಲ್ಲಿ ನಡೆದ ಸ್ವಪ್ನ ಆರ್.ಎ ಅವರ ಭಾವಲಹರಿ ಕವನ ಸಂಕಲನ ಅವಲೋಕನ ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕಿದೆ. ಅತಿಯಾದ ತಂತ್ರಜ್ಞಾನದಿಂದ ಇಂದಿನ ಯುಗದಲ್ಲಿ ಮಕ್ಕಳು ಸೃಜನಾತ್ಮಕತೆ ಕಳೆದುಕೊಳ್ಳುತ್ತಿದ್ದಾರೆ. ಕಥೆ, ಕವನ, ಕವಿತೆಗಳು ಮಕ್ಕಳಿಗೆ ನೈಜ ಬದುಕನ್ನು ಕಟ್ಟಿಕೊಡುತ್ತವೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶಂಕರದೇವರು ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ತಿಂಗಳು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಮಕ್ಕಳಿಗೆ ವೇದಿಕೆಗಳು ಸಿಗುವುದು ಅಪರೂಪವಾಗಿದೆ. ಮಕ್ಕಳಲ್ಲಿ ಸಾಹಿತ್ಯ ಪ್ರೇಮ ಬೆಳೆಸಲು ಮುಂದಿನ ದಿನಗಳಲ್ಲಿ ಮಕ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವ ಉದ್ದೇಶವಿದೆ. ಮಕ್ಕಳಿಗಾಗಿಯೇ ಚೆಲುವ ಚಿನ್ನಾರಿ ಎನ್ನುವ ಮಾಸ ಪತ್ರಿಕೆ ಹೊರತರಲಾಗುವುದು. ಹೀಗಾಗಿ ಇವೆಲ್ಲವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಸಾಹಿತ್ಯವನ್ನು ಉಳಿಸಿ ಬೆಳೆಸಿ ನಾಡಿನ ಕೀರ್ತಿ ಹೆಚ್ಚಿಸಬೇಕು ಎಂದರು.
ಸ್ವಪ್ನ ಆರ್.ಎ. ಅವರ ಭಾವಲಹರಿ ಕವನ ಸಂಕಲನ ಪುಸ್ತಕ ಕುರಿತು ನಿವೃತ್ತ ಶಿಕ್ಷಕ ಹುಸೇನಪ್ಪ ಕುರ್ಡಿ ಮಾತನಾಡಿದರು. ನಂತರ ಚೆಲುವ ಚಿನ್ನಾರಿ ಮಾಸ ಪತ್ರಿಕೆಯನ್ನು ಅನಾವರಣಗೊಳಿಸಿದರು. ಹಿರಿಯ ಸಾಹಿತಿ ವೀರೇಶ ಹಾಗೂ ಕಲ್ಮಠ ಪ್ರೌಢಶಾಲೆ ಮುಖ್ಯೋಪಾಧ್ಯಯರಾದ ಪ್ರಭಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಅಂಬಮ್ಮ, ಚುಟುಕು ಸಾಹಿತ್ಯ ಪರಿಷತ್‌ನ ತಾಜುದ್ದೀನ್, ಯಲ್ಲಪ್ಪ ನಿಲೋಗಲ್, ಬೆಳಕು ಸಂಸ್ಥೆ ಜಿಲ್ಲಾ ಅಧ್ಯಕ್ಷ ನರಸಿಂಹ ವಡವಾಟಿ, ಕೃತಿ ಲೇಖಕರಾದ ಸ್ವಪ್ನ ಆರ್.ಎ., ಹಿರಿಯ ಸಾಹಿತಿ ಶರಣೇಗೌಡ ಯರದೊಡ್ಡಿ, ಪಕ್ಷಿ ಪ್ರೇಮಿ ಸಲ್ಲಾವುದ್ದೀನ್, ಗೋಪಾಲ ನಾಯಕ ಜೂಕೂರು, ಸಂಗಮೇಶ ಮುಧೋಳ ಇದ್ದರು. ಡಾ|
ಸೈಯ್ಯದ್ ಮುಜೀಬ್ ನಿರೂಪಿಸಿದರು. ಸಾಹಿತಿ ಉಮರ್ ಸ್ವಾಗತಿಸಿದರು. ಕುಮಾರಿ ಪ್ರಾರ್ಥಿಸಿದರು.