Advertisement

ಮಾನ್ವಿಯಲ್ಲಿ ಮೂತ್ರಾಲಯಗಳೇ ಇಲ್ಲ!

01:23 PM Sep 13, 2019 | Naveen |

ಮಾನ್ವಿ: ಪಟ್ಟಣದ ಜನನಿಬಿಡ ರಸ್ತೆ, ಸ್ಥಳಗಳಲ್ಲಿ ಶೌಚಾಲಯ, ಮೂತ್ರಾಲಯ ಇಲ್ಲದ್ದರಿಂದ ಸಾರ್ವಜನಿಕರು, ಪರಸ್ಥಳದ ಜನತೆ ಪರದಾಡುವಂತಾಗಿದೆ.

Advertisement

ಸರ್ಕಾರ ಪರಿಸರದಲ್ಲಿ ನೈರ್ಮಲ್ಯ ಕಾಪಾಡಲು, ಬಹಿರ್ದೆಸೆ ಮುಕ್ತಕ್ಕಾಗಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಹೇಳುತ್ತಿದೆ. ಆದರೆ ಇಲ್ಲಿನ ಪುರಸಭೆ ಮಾತ್ರ ಪ್ರಮುಖ ಜನನಿಬಿಡ ಸ್ಥಳ, ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕನಿಷ್ಠ ಪಕ್ಷ ಮೂತ್ರಾಲಯಗಳನ್ನು ನಿರ್ಮಿಸಿಲ್ಲ. ಹೀಗಾಗಿ ಜನ ರಸ್ತೆ ಬದಿ ಗೋಡೆ, ಬಯಲಲ್ಲೇ ಮೂತ್ರ ವಿಸರ್ಜಿಸುವಂತಾಗಿದೆ.

ಸಾರ್ವಜನಿಕ ಶೌಚಾಲಯಗಳಿಲ್ಲ: ಪಟ್ಟಣದ ಜನದಟ್ಟಣೆ ಪ್ರದೇಶಗಳಾದ ಬಸವ ವೃತ್ತ, ವಾಲ್ಮೀಕಿ ವೃತ್ತ, ಪ್ರವಾಸಿಮಂದಿರ ವೃತ್ತ, ತಹಶೀಲ್ದಾರ್‌ ಕಚೇರಿ, ತಾಲೂಕ ಪಂಚಾಯಿತಿ, ಪಂಪಾ ಕಾಂಪ್ಲೆಕ್ಸ್‌, ಪಂಪಾಗಾರ್ಡನ್‌, ಪುರಸಭೆ, ಉಪನೋಂದಣಾಧಿಕಾರಿ ಕಚೇರಿ, ಟಿಎಪಿಸಿಎಂಎಸ್‌, ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರ ಬಳಕೆಗಾಗಿ ಶೌಚಾಲಯಗಳಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು ಬಯತಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಬಯಲಲ್ಲೇ ಪುರುಷರು ಮೂತ್ರ ವಿಸರ್ಜಿಸುವುದರಿಂದ ಮಹಿಳೆಯರು ಮುಜುಗರಕ್ಕೀಡಾಗಿ ತಲೆ ತಗ್ಗಿಸಿಕೊಂಡು ಸಂಚರಿಸಬೇಕಿದೆ.

ಮಹಿಳೆಯರ ಪರದಾಟ: ಪಟ್ಟಣದಲ್ಲಿ ಸುಲಭ ಶೌಚಾಲಯ ಇಲ್ಲದ್ದರಿಂದ ಪಟ್ಟಣಕ್ಕೆ ಆಗಮಿಸುವ ಪರಸ್ಥಳದ ಮಹಿಳೆಯರು ಮಲ, ಮೂತ್ರ ವಿಸರ್ಜನೆಗೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಬಸ್‌ ನಿಲ್ದಾಣ ಹೊರತುಪಡಿಸಿದರೆ ಪಟ್ಟಣದ ಯಾವ ಸ್ಥಳದಲ್ಲೂ ಸಾರ್ವಜನಿಕವಾಗಿ ಮಹಿಳೆಯರಿಗೆ ಶೌಚಾಲಯಗಳ ವ್ಯವಸ್ಥೆ ಮಾಡಿಲ್ಲ. ಸರ್ಕಾರಿ ಕಚೇರಿಗಳಿಗೆ ಬರುವ ಮಹಿಳೆಯರು ಮೂತ್ರ ವಿಸರ್ಜನೆಗೆ ಜಾಲಿಗಿಡಗಳ ಮರೆ ಹುಡುಕಬೇಕಿದೆ. ಇನ್ನು ಶೌಚಕ್ಕೆ ಬಸ್‌ ನಿಲ್ದಾಣದಲ್ಲಿನ ಶೌಚಾಲಯವೇ ಆಸರೆ. ಕೆಲ ಸರ್ಕಾರಿ ಕಚೇರಿಗಳಲ್ಲಿನ ಮಹಿಳಾ ಸಿಬ್ಬಂದಿಗೂ ಈ ತೊಂದರೆ ತಪ್ಪಿದ್ದಲ್ಲ.

ನಿರ್ವಹಣೆ ಕೊರತೆ: ಪಟ್ಟಣದ ಪುರಸಭೆ, ತಹಶೀಲ್ದಾರ್‌ ಕಚೇರಿಯಲ್ಲಿ ಶೌಚಾಲಯಗಳಿದ್ದರೂ ನಿರ್ವಹಣೆ ಕೊರತೆ ಇದೆ. ಸ್ವಚ್ಛತೆ ಮಾಯವಾಗಿದ್ದು, ದುರ್ವಾಸನೆ ಬೀರುತ್ತಿವೆ.

Advertisement

ಹಾಳಾದ ತಾತ್ಕಾಲಿಕ ಮೂತ್ರಾಲಯ: ಪಟ್ಟಣದಲ್ಲಿ ಅಲ್ಲಲ್ಲಿ ಇಡಲಾಗಿದ್ದ ತಾತ್ಕಾಲಿಕ ಟಿನ್‌ಶೆಡ್‌ ಮೂತ್ರಾಲಯಗಳು ಸಹ ಇಟ್ಟ ಸ್ಥಳದಲ್ಲೇ ಕುಸಿದು ಬಿದ್ದಿವೆ. ಇವುಗಳ ದುರಸ್ತಿಗೆ ಪುರಸಭೆ ಮುಂದಾಗಿಲ್ಲ. ಬಸ್‌ ನಿಲ್ದಾಣದ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಗಬ್ಬೆದ್ದಿವೆ. ಹೀಗಾಗಿ ಜನ ಹೊರಗಡೆ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ.

ಇನ್ನಾದರೂ ಪುರಸಭೆ ಅಧಿಕಾರಿಗಳು ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯ, ಶೌಚಾಲಯಗಳನ್ನು ನಿರ್ಮಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ, ಜನತೆಗೆ ಮೂತ್ರಾಲಯ, ಶೌಚಾಲಯದಂತಹ ಕನಿಷ್ಠ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲವಾಗಿದೆ. ಎಲ್ಲೆಂದರಲ್ಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಮದ ಮೂಗು ಮುಚ್ಚಿಕೊಂಡು, ಮಹಿಳೆಯರು ತಲೆ ತಗ್ಗಿಸಿಕೊಂಡು ತಿರುಗಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪಟ್ಟಣದ ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ತಹಶೀಲ್ದಾರ್‌ ಕಚೇರಿ, ತಾಲೂಕ ಪಂಚಾಯಿತಿ ಸೇರಿದಂತೆ ವಿವಿಧೆಡೆ ಮೂತ್ರಾಲಯ ನಿರ್ಮಿಸಬೇಕು.
•ಸಂತೋಷ ನಾಯಕ,
ಮಾನ್ವಿ ನಿವಾಸಿ

ಜನದಟ್ಟಣೆ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಡಲಾಗಿದ್ದ ಟಿನ್‌ಶೆಡ್‌ ಶೌಚಾಲಯಗಳು ದುರಸ್ತಿಗೀಡಾಗಿದ್ದರಿಂದ ಅವುಗಳನ್ನು ತೆರವುಗೊಳಿಸಲಾಗಿದೆ. ಪುರಸಭೆಯಲ್ಲಿ ಆಡಳಿತ ಮಂಡಳಿ ರಚನೆಯಾದ ನಂತರ ಸುಲಭ ಶೌಚಾಲಯಗಳ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಸರ್ಕಾರಿ ಜಾಗೆ ಗುರುತಿಸಿ ಶೌಚಾಲಯ ನಿರ್ಮಿಸಿ ನಿರ್ವಹಣೆಗೆ ಗುತ್ತಿಗೆ ನೀಡಲಾಗುವುದು.
ವಿಜಯಲಕ್ಷ್ಮೀ,
ಮುಖ್ಯಾಧಿಕಾರಿ, ಪುರಸಭೆ ಮಾನ್ವಿ.

Advertisement

Udayavani is now on Telegram. Click here to join our channel and stay updated with the latest news.

Next