ಮಾನ್ವಿ: ಪಟ್ಟಣದಲ್ಲಿ ಎರಡು ಅಲೆಮಾರಿ ಸಮುದಾಯಗಳ ಗ್ರಂಥಾಲಯಗಳಿವೆ. ಈ ಗ್ರಂಥಾಲಯಗಳಿಗೆ ನೂತನ ಕಟ್ಟಡ ನಿರ್ಮಿಸಿ ನಾಲ್ಕೈದು ವರ್ಷವಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಾಗಿಲು ತೆರೆಯದೇ ನಿರುಪಯುಕ್ತವಾಗಿವೆ.
2014-15ನೇ ಸಾಲಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ಪರಿಶಿಷ್ಟ ಜಾತಿಗಳ ಯೋಜನೆ ಅನುದಾನದಲ್ಲಿ ನಿರ್ಮಿತಿ ಕೇಂದ್ರದಿಂದ ಪಟ್ಟಣದಲ್ಲಿ ಎರಡು ಅಲೆಮಾರಿ ಸಮುದಾಯದ ಗ್ರಂಥಾಲಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ವಾರ್ಡ್ ನಂ.1ರ ರಾಜೀವ್ ಗಾಂಧಿ ನಗರದಲ್ಲಿ ಒಂದು ಮತ್ತು ಕೋನಾಪುರಪೇಟೆ ಹತ್ತಿರದ ಮಹಾತ್ಮ ಗಾಂಧಿ ನಗರದಲ್ಲಿ ಅಲೆಮಾರಿ ಸಮುದಾಯದ ಗ್ರಂಥಾಲಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. 2015ರಲ್ಲೇ ಕಟ್ಟಡ ನಿರ್ಮಿಸಿದ್ದರೂ ಇದುವರೆಗೆ ಉದ್ಘಾಟನೆ ಆಗಿಲ್ಲ. ಹೀಗಾಗಿ ಈ ಗ್ರಂಥಾಲಯ ಕಟ್ಟಡಗಳು ನಿರುಪಯುಕ್ತವಾಗಿವೆ.
ಆರೋಪ: ಈ ಗ್ರಂಥಾಲಯ ಕಟ್ಟಡ ಉದ್ಘಾಟನೆಗೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ನಿರ್ಲಕ್ಷ್ಯ ತಾಳಿದ್ದಾರೆ. ಅಲ್ಲದೆ ಅಲೆಮಾರಿ ಸಮುದಾಯದ ಜನರೇ ಇಲ್ಲದ ಪ್ರದೇಶದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ನಿಯಮಬಾಹಿರವಾಗಿ ಅಲೆಮಾರಿ ಸಮುದಾಯದವರಲ್ಲದವರನ್ನು ಗ್ರಂಥಪಾಲಕರನ್ನಾಗಿ ನೇಮಕ ಮಾಡಲಾಗಿದೆ. ಗ್ರಂಥಾಲಯ ತೆರೆಯದಿದ್ದರೂ ಗ್ರಂಥಪಾಲಕರಿಗೆ ವೇತನ ಪಾವತಿ ಆಗುತ್ತಿದೆ. ಅಲ್ಲದೇ ಗ್ರಂಥಾಲಯಕ್ಕೆ ಬರುವ ಪುಸ್ತಕಗಳು ಏನಾಗುತ್ತಿವೆ ಎಂಬ ಮಾಹಿತಿ ಇಲ್ಲದಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಅನುಕೂಲ: ವಾರ್ಡ್ ನಂ1ರ ರಾಜೀವ್ ಗಾಂಧಿ ನಗರದಲ್ಲಿ ನಿರ್ಮಿಸಿದ ಅಲೆಮಾರಿ ಸಮುದಾಯದ ಗ್ರಂಥಾಲಯದ ಹತ್ತಿರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್ ಇದೆ. ಇದು ಸ್ಲಂ ಆಗಿದೆ. ಗ್ರಂಥಾಲಯ ಬಾಗಿಲು ತೆರೆದಲ್ಲಿ ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮತ್ತು ಮಹಾತ್ಮ ಗಾಂಧಿ ನಗರದಲ್ಲಿಯೂ ಸಹ ಬಡ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಕೂಡಲೇ ಗ್ರಂಥಾಲಯಗಳನ್ನು ಪ್ರಾರಂಭಿಸಿದರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಯುವಕರಿಗೆ ಸಹಕಾರಿಯಾಗಲಿದೆ. ಗ್ರಂಥಾಲಯಕ್ಕೆ ಅಲೆಮಾರಿ ಸಮುದಾಯದವರನ್ನೇ ಗ್ರಂಥಪಾಲಕರನ್ನಾಗಿ ನೇಮಿಸಬೇಕೆಂದು ಅಖೀಲ ಕರ್ನಾಟಕ ಕೊರಮ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಆಗ್ರಹಿಸಿದ್ದಾರೆ.
ಗ್ರಂಥಾಲಯಗಳ ನಿರ್ವಹಣೆ ಬಗ್ಗೆ ಜಿಲ್ಲಾದ್ಯಂತ ಆಗಾಗ ಭೇಟಿ ನೀಡಿ ವೀಕ್ಷಣೆ ಮಾಡುತ್ತಿರುತ್ತೇನೆ. ಮಾನ್ವಿ ಪಟ್ಟಣದಲ್ಲಿ ನಿರ್ಮಿಸಿದ ಅಲೆಮಾರಿ ಸಮುದಾಯಗಳ ಗ್ರಂಥಾಲಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಸಮಸ್ಯೆ ಬಗೆಹರಿಸಲಾಗುವುದು. ದೂರು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಎಂ.ಎಸ್.ರೆಬಿನಾಳ,
ಜಿಲ್ಲಾ ಗ್ರಂಥಾಲಯ ಅಧಿಕಾರಿ, ರಾಯಚೂರು
ಮಾನ್ವಿ ಪಟ್ಟಣದಲ್ಲಿ ಕಳೆದ ಐದು ವರ್ಷಗಳ ಹಿಂದೆ ಅಲೆಮಾರಿ ಸಮುದಾಯಗಳ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಇದುವರೆಗೆ ಉದ್ಘಾಟನೆ ಆಗಿಲ್ಲ. ಗ್ರಂಥಾಲಯ ಬಾಗಿಲು ತೆರೆಯುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಗ್ರಂಥಾಲಯಗಳಿಗೆ ಬರುವ ಪುಸ್ತಕಗಳು, ಪೀಠೊಪಕರಣಗಳು ಏನಾಗುತ್ತಿವೆ ಎಂಬ ಅನುಮಾನ ಮೂಡುತ್ತಿದೆ. ಮೇಲಾಧಿಕಾರಿಗಳು ಗ್ರಂಥಾಲಯ ಪ್ರಾರಂಭಿಸಲು ಕ್ರಮ ವಹಿಸಬೇಕು.
ಪರಶುರಾಮ ಭಜಂತ್ರಿ ನಕ್ಕುಂದಿ,
ತಾಲೂಕು ಪ್ರಧಾನ ಕಾರ್ಯದರ್ಶಿ,
ಅಖೀಲ ಕರ್ನಾಟಕ ಕೊರಮ ಸಂಘ
ಮಾನ್ವಿ
ರವಿ ಶರ್ಮಾ