ಮಾನ್ವಿ: ತಾಲೂಕಿನ ರಾಜೊಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತು ಇತರ ಸಮಸ್ಯೆ ನಿವಾರಣೆಗೆ ಮತ್ತು ಕಟ್ಟಡ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಮಂಗಳವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕು ವರ್ಷಗಳಿಂದ ರಾಜೊಳ್ಳಿ ಪ್ರೌಢಶಾಲೆಗೆ ಸರ್ಕಾರ ಕಾಯಂ ಶಿಕ್ಷಕರನ್ನೇ ನೇಮಕ ಮಾಡಿಲ್ಲ. ಕೇವಲ ಅತಿಥಿ ಶಿಕ್ಷಕರನ್ನು ಮಾತ್ರ ನೇಮಕ ಮಾಡುತ್ತಿದೆ. ಮುಖ್ಯಗುರುಗಳು ಮಾತ್ರ ಇದ್ದು, ಅವರು ಸಹ ರಜೆ ಹಾಕಿದ್ದಾರೆ. ಹೀಗಾಗಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರೂ ಇಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿನ್ನಡೆ ಆಗಿದೆ. ಆದ್ದರಿಂದ ಕೂಡಲೇ ಶಿಕ್ಷಕರ ನೇಮಕ ಮಾಡಲು ಅನೇಕ ಬಾರಿ ಪ್ರಭಾರಿ ಮುಖ್ಯಗುರುಗಳಿಗೆ ತಿಳಿಸಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
8, 9, ಮತ್ತು 10ನೇ ತರಗತಿ ಸೇರಿ 100ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೂ ಪ್ರೌಢಶಾಲೆಗೆ ಕಟ್ಟಡವೇ ಇಲ್ಲ. ಪ್ರಾಥಮಿಕ ಶಾಲಾ ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಕೋಣೆಗಳಿಗೆ ಸರಿಯಾಗಿ ಬಾಗಿಲು, ಕಿಟಕಿಗಳಿಲ್ಲ. ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದು, ಶೌಚಾಲಯವಿಲ್ಲ. ಆಟದ ಮೈದಾನ, ಕ್ರೀಡಾ ಸಲಕರಣೆಗಳಿಲ್ಲ. ಕೆಲ ವಿಷಯದ ಪುಸ್ತಕಗಳನ್ನು ಇದುವರೆಗೂ ಹಂಚಿಕೆ ಮಾಡಿಲ್ಲ. ನಮಗೆ ತುಂಬಾ ತೊಂದರೆ ಆಗುತ್ತಿದ್ದು, ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿ ಕಾರಿ ವೆಂಕಟೇಶ ಗುಡಿಹಾಳ, ಗಣಿತ ಶಿಕ್ಷಕಿ ಹೆರಿಗೆ ರಜೆ ಮೇಲೆ ಹೋಗಿದ್ದಾರೆ. ಒಂದು ವಾರದ ಒಳಗಾಗಿ ವಿಷಯವಾರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಇಲ್ಲವೇ ಪಕ್ಕದ ಶಾಲಾ ಶಿಕ್ಷಕರನ್ನು ನೇಮಿಸಲಾಗುವುದು ಎಂದರು.
ವಿದ್ಯಾರ್ಥಿಗಳಾದ ಭೀಮವ್ವ, ಈರೇಶಮ್ಮ, ದ್ಯಾವಮ್ಮ, ದುರ್ಗಾದೇವಿ, ಶಹಾನಾ, ವಿರೇಶ, ಲಕ್ಷ್ಮೀ ರೆಡ್ಡಿ, ಪ್ರಾಣೇಶ, ಶ್ರವಣಕುಮಾರ, ಗ್ರಾಮದ ಯುವಕರಾದ ಸುಬ್ಬಯ್ಯ ಮಾಲಿಪಾಟೀಲ, ಶಿವರೆಡ್ಡಿ, ಮಲ್ಲೇಶ, ಡುಳ್ಳಯ್ಯ, ಆರ್. ಈರಣ್ಣ, ವೀರರೆಡ್ಡಿ, ಯಂಕೋಬ, ಸೋಮಶೇಖರ, ವೀರೇಶ, ವೆಂಕಟೇಶ, ಉರುಕುಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.